Advertisement

ಬಂಟ್ವಾಳದಲ್ಲಿ ನೀರುಪಾಲು: ಕುಂಬಳೆಯಲ್ಲಿ ಶೋಕಸಾಗರ

02:51 AM May 27, 2019 | sudhir |

ಕುಂಬಳೆ: ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಮೇ 25ರಂದು ಸಂಜೆ ಮುಳುಗಿ ಕುಂಬಳೆಯ ಇಬ್ಬರು ಸಾವಿಗೀಡಾದ ಕಾರಣ ನಗರ ಶೋಕಸಾಗರದಲ್ಲಿ ಮುಳುಗಿದೆ.

Advertisement

ಕುಂಬಳೆ ಮುಜಂಗಾವು ಬಳಿಯ ಬಲ್ಲಂಪಾಡಿ ಮುಳಿಯಡ್ಕ ಮಣಿಕಂಠ – ಜಯಂತಿ ದಂಪತಿಯ ದ್ವಿತೀಯ ಪುತ್ರ, ಕುಂಬಳೆ ಸರಕಾರಿ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಮನೀಶ್‌ ಕುಮಾರ್‌ ಇತರ ನಾಲ್ವರು ವಿದ್ಯಾರ್ಥಿಗಳೊಂದಿಗೆ ಕಡಪ್ಪುರ ತಳಕದ‌ ರಿಕ್ಷಾ ಚಾಲಕ ಅಜಿತ್‌ ಕುಮಾರ್‌ ಜತೆಯಲ್ಲಿ ಬಂಟ್ವಾಳದ ಬರಿಮಾರಿಗೆ ವಿವಾಹ ಸಮಾರಂಭವೊಂದಕ್ಕೆ ತೆರಳಿದ್ದರು. ಅಲ್ಲಿ ಸಂಜೆ ತಂಡವು ಮೋಜಿಗಾಗಿ ನೇತ್ರಾವತಿ ಹೊಳೆಯಲ್ಲಿ ಈಜಾಡಲು ಇಳಿದು ಇಬ್ಬರು ಸಾವಿಗೀಡಾಗಿದ್ದರು. ಓರ್ವನನ್ನು ಸ್ಥಳೀಯರು ರಕ್ಷಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬಾಲ ಸಂಘದ ತಂಡದ ಸದಸ್ಯರಾಗಿದ್ದ ಕುಂಬಳೆಯ ಬಾಲಕರು ಮದುವೆಯ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಿಕ್ಷಾ ಚಾಲಕ ಅಜಿತ್‌ ಕುಮಾರ್‌ ಜತೆಯಲ್ಲಿ ತೆರಳಿದ್ದರು.

ಮೃತ ಮನೀಶ್‌ನ ಅಣ್ಣ ಮನೋಜ್‌ ಕುಮಾರ್‌ ಕುಂಬಳೆಯಲ್ಲಿ ಪ. ಪೂ. ವಿದ್ಯಾರ್ಥಿಯಾಗಿದ್ದು, ತಂದೆ ಕೂಲಿ ಕಾರ್ಮಿಕರಾಗಿದ್ದಾರೆ.

ಅಜಿತ್‌ ಕುಮಾರ್‌ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು ಪತ್ನಿ ವನಿತಾ ಹಾಗೂ ಅನ್ವೇಶ್‌ ಮತ್ತು ಶಾಂತಿ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು ಸಿ.ಪಿ.ಎಂ. ನಾಯಕರಾಗಿದ್ದರು. ಡಿ.ವೈ.ಎಫ್‌.ಐ. ಕುಂಬಳೆ ವಲಯ ಕಾರ್ಯದರ್ಶಿ ಆಗಿದ್ದರಲ್ಲದೆ ಸಮಾಜ ಸೇವಕರಾಗಿದ್ದರು. ಕಲಾವಿದರಾಗಿದ್ದು “ನಾಟ್‌ಪೊಲಿಮಾ’ ಎಂಬ ಕಲಾಸಂಘದ ಕಾರ್ಯದರ್ಶಿಯಾಗಿದ್ದರು.

Advertisement

ಇವರ ತಂಡದಲ್ಲಿ ಈ ಬಾಲಕರು ಕಲಾವಿದರಾಗಿದ್ದರು. ಮದುವೆ ಮನೆಯವರು ಅಜಿತ್‌ನ ಸಂಬಂಧಿಕರಾಗಿದ್ದರು.

“ಆಯತಪ್ಪಿ ಬಿದ್ದೆವು ‘
ನಾವು ಈಜಾಡಲು ಹೊಳೆಗಿಳಿದಾಗ ನಮ್ಮ ಕಾಲಿನ ಅಡಿಭಾಗದಿಂದ ಮರಳು ಕೊಚ್ಚಿ ಹೋದಾಗ ನಾವು ಆಯತಪ್ಪಿ ನೀರಲ್ಲಿ ಮುಳುಗಿದೆವು. ನಮ್ಮನ್ನು ಅಲ್ಲಿನ ಆಪದಾºಂಧವರು ರಕ್ಷಿಸಿದರು. ನಮ್ಮ ತಂಡದ ಇಬ್ಬರನ್ನು ನಾವು ಕಳೆದುಕೊಂಡೆವು ಎಂದು ಪಾರಾಗಿ ಬಂದಿರುವ ತೇಜಸೂರ್ಯ ಉದಯವಾಣಿಗೆ ತಿಳಿಸಿದರು. ಇವರು ಇನ್ನೂ ಘಟನೆಯ ಭಯದಿಂದ ಹೊರಬಂದಿಲ್ಲ.

ಸಾರ್ವಜನಿಕ ನಮನ
ಮೃತದೇಹಗಳನ್ನು ಕುಂಬಳೆಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಯಿತು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಕಾರ್ಯಕರ್ತರು ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next