ನಂಜನಗೂಡು: ಶುಕ್ರವಾರ ರಾತ್ರಿ ಸುರಿದ ಮಳೆ ಹಾಗೂ ಬೀಸಿದ ಬಿರುಗಾಳಿಗೆ ತಾಲೂಕಿನ ಕೃಷಿ ವಲಯ ತತ್ತರಿಸುವಂತಾಗಿದೆ. ಮಳೆಗಾಗಿ ಕಾತರಿಸುತ್ತಿದ್ದ ತಾಲೂಕಿನ ಜನತೆ ಗುರುವಾರ ಹಾಗೂ ಶುಕ್ರವಾರ ಸುರಿದ ಮಳೆಯಿಂದಾಗಿ ನೆಮ್ಮದಿ ಕಾಣುವಂತಾದರೂ ಅಲ್ಲಲ್ಲಿ ಸಾಕಷ್ಟು ಹಾನಿಯಾಗಿದೆ.
ಶುಕ್ರವಾರದ ಮಳೆ ಗಾಳಿಗೆ ತಾಲೂಕಿನ ಶಿರಮಳ್ಳಿ ರಾಂಪುರ ಕಸುನಹಳ್ಳಿ ಏಲಚಗೆರೆ ಮುಂತಾದ ಗ್ರಾಮಗಳಲ್ಲಿನ ಬಾಳೆ, ಹತ್ತಿ, ಕಬ್ಬು ಸಂಪೂರ್ಣ ನಾಶವಾಗಿವೆ. ಗ್ರಾಮದಲ್ಲಿ ನಾಲ್ಕಾರು ಮನೆಗಳು ಕುಸಿದು ಬಿದ್ದಿದ್ದು ಆ ಕುಟುಂಬಗಳು ಬೀದಿಗೆ ಬಂದಿವೆ.
ಶನಿವಾರ ಬೆಳಗ್ಗೆ ತಹಶೀಲ್ದಾರ್ ಮಹೇಶಕುಮಾರ್ ನೇತೃತ್ವದಲ್ಲಿ ತಾಲೂಕಿನ ಅಧಿಕಾರಿಗಳ ತಂಡ ಈ ಎಲ್ಲಾ ಗ್ರಾಮಗಳಿಗೆ ತೆರಳಿ ಸರ್ಕಾರ ನಿಮ್ಮೊಂದಿಗೆದೆ ಎಂದು ಧೈರ್ಯ ತುಂಬಿದರು.
ಬಿರುಗಾಳಿ ಮಳೆಗೆ ತಾಲೂಕಿನ 100ಕ್ಕೂ ಹೆಚ್ಚು ಎಕರೆ ಪ್ರದೇಶಗಳಲ್ಲಿನ ಫಸಲಿಗೆ ಹಾನಿಯಾಗಿದ್ದು ಅವುಗಳ ನಷ್ಟದ ಅಂದಾಜಿನ ಲೆಕ್ಕ ಹಾಕಲಾಗುತ್ತಿದೆ ಎಂದ ಅವರು ಬೆಳೆ ನಷ್ಟವನ್ನು ಸ್ಥಳ ಪರೀಕ್ಷೆ ಮೂಲಕ ತಿಳಿದು ನಂತರ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ಕಳಿಸಲಾಗುವದು ಎಂದರು.
ತಾಲೂಕಿನ ಬೆಳಲೆ ಹಾಗೂ ಶಿರಮಳ್ಳಿಯಲ್ಲಿ ನಾಲ್ಕು ಗುಡಿಸಲುಗಳು ಭಾಗಶಃ ಕುಸಿದಿದೆ ಎಂದು ಮಹೇಶ್ ತಿಳಿಸಿದರು.