ದುಬಾೖ: ಪಾಕಿಸ್ಥಾನದ ಸ್ಟಾರ್ ಬ್ಯಾಟರ್ ಫಖರ್ ಜಮಾನ್ “ಐಸಿಸಿ ತಿಂಗಳ ಆಟಗಾರ’ ಗೌರವದಿಂದ ಪುರಸ್ಕೃತರಾಗಿದ್ದಾರೆ. ವನಿತಾ ವಿಭಾಗದ ಈ ಪ್ರಶಸ್ತಿ ಥಾಯ್ಲೆಂಡ್‌ನ ಬ್ಯಾಟರ್ ನರುಮೋಲ್ ಚೈವೈ ಅವರಿಗೆ ಒಲಿದಿದೆ.
ಪುರುಷರ ವಿಭಾಗದಲ್ಲಿ ಶ್ರೀಲಂಕಾದ ಪ್ರಭಾತ್ ಜಯಸೂರ್ಯ, ನ್ಯೂಜಿಲ್ಯಾಂಡ್‌ನ ಮಾರ್ಕ್ ಚಾಪ್‌ಮನ್ ರೇಸ್‌ನಲ್ಲಿದ್ದರು. ಫಖರ್ ಜಮಾನ್ ಇವರೆಲ್ಲರನ್ನೂ ಮೀರಿ ನಿಂತರು.
ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ರಾವಲ್ಪಿಂಡಿಯ ದ್ವಿತೀಯ ಏಕದಿನ ಪಂದ್ಯದಲ್ಲಿ 337 ರನ್ ಚೇಸ್ ಮಾಡುವಾಗ ಫಖರ್ ಜಮಾನ್ ಅಜೇಯ 180 ರನ್ ಬಾರಿಸಿದ್ದರು. ಇದು ಏಕದಿನ ಇತಿಹಾಸದ ಚೇಸಿಂಗ್ ವೇಳೆ ದಾಖಲಾದ 2ನೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿತ್ತು. ಫಖರ್ ಜಮಾನ್ 17 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ಕಿವೀಸ್ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದ್ದರು.
ಇದು ಎಪ್ರಿಲ್ ತಿಂಗಳಲ್ಲಿ ಫಖರ್ ಜಮಾನ್ ಬಾರಿಸಿದ 2ನೇ ಶತಕವಾಗಿತ್ತು. ನ್ಯೂಜಿಲ್ಯಾಂಡ್ ಎದುರಿನ ಮೊದಲ ಪಂದ್ಯದಲ್ಲಿ 117 ರನ್ ಬಾರಿಸಿದ್ದರು. ಇದರಿಂದ ಪಾಕಿಸ್ಥಾನಕ್ಕೆ 289 ರನ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಲು ಸಾಧ್ಯವಾಗಿತ್ತು.
“ಐಸಿಸಿ ಪ್ರಶಸ್ತಿ ನನ್ನ ಪಾಲಿಗೆ ಒದಗಿ ಬಂದ ಮಹಾನ್ ಗೌರವ. ರಾವಲ್ಪಿಂಡಿಯಲ್ಲಿ ಸತತ ಎರಡು ಶತಕ ಬಾರಿಸಿದ್ದನ್ನು ನಾನು ಬಹಳಷ್ಟು ಸಂಭ್ರಮಿಸಿದೆ. ದ್ವಿತೀಯ ಪಂದ್ಯದಲ್ಲಿ ಅಜೇಯ 180 ರನ್ ಹೊಡೆದದ್ದು ನನ್ನ ಶ್ರೇಷ್ಠ ಇನ್ನಿಂಗ್ಸ್ ಆಗಿದೆ’ ಎಂಬುದಾಗಿ ಪಾಕ್ ಬ್ಯಾಟರ್ ಪ್ರತಿಕ್ರಿಯಿಸಿದರು.
ಚೈವೈ ಸಾಧನೆ
ಥಾಯ್ಲೆಂಡ್‌ನ ಮಧ್ಯಮ ಕ್ರಮಾಂಕದ ಆಟಗಾರ್ತಿ ನರುಮೋಲ್ ಚೈವೈ ಜಿಂಬಾಬ್ವೆ ಎದುರಿನ ಏಕದಿನ ಸರಣಿಯನ್ನು 3-0 ಅಂತರದಿಂದ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಎರಡು ಅಜೇಯ ಅರ್ಧ ಶತಕ ಚೈವೈ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿರಿಸಿತು.
“ಇದು ನನಗಲ್ಲ, ಥಾಯ್ಲೆಂಡ್ ಕ್ರಿಕೆಟ್‌ಗೆ ಒಲಿದ ಗೌರವ. ಈ ಸಂದರ್ಭದಲ್ಲಿ ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಬಯಸುತ್ತೇನೆ’ ಎಂಬುದಾಗಿ ಚೈವೈ ಹೇಳಿದರು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದವರೆಂದರೆ ಜಿಂಬಾಬ್ವೆಯ ಕೆಲಿಸ್ ಎನ್‌ದ್ಲೋವು ಮತ್ತು ಯುಎಇಯ ಕವಿಶಾ ಎಗೋದಗೆ.