Advertisement

ಅಂತರ್ಜಾಲದಲ್ಲಿ ನಕಲಿ ಜಾಲ!

03:37 PM Aug 14, 2018 | |

ಬೆಂಗಳೂರು: ಅಪರಿಚಿತ ಸಂಖ್ಯೆಯೊಂದರಿಂದ ಕರೆ ಬರುತ್ತದೆ. ನೀವದನ್ನು ರಿಸೀವ್‌ ಮಾಡಿದ ಕೂಡಲೆ “ಹಲೋ, ನಾನು ಬ್ಯಾಂಕ್‌ ಒಂದರ ಮ್ಯಾನೇಜರ್‌. ವಿದೇಶಿ ಉದ್ಯಮಿಯೊಬ್ಬರು ಸಾವಿರಾರು ಡಾಲರ್‌, ಪೌಂಡ್‌ಗಳನ್ನು ನಿಮ್ಮ ಖಾತೆಗೆ ಟ್ರಾನ್ಸ್‌ಫ‌ರ್‌ ಮಾಡಬೇಕೆಂದಿದ್ದಾರೆ. ಆ ಹಣ ನಿಮ್ಮದಾಗಲು ನೀವು ಕೆಲವೇ ಲಕ್ಷ ರೂ.ಗಳನ್ನು ವೆಚ್ಚ ಮಾಡಬೇಕು,’ ಎಂದಾಗ ನೀವೇನಾದರೂ ಆಸೆಬಿದ್ದು, ಅವರು ಹೇಳಿದ ಖಾತೆಗೆ ಹಣ ವರ್ಗಾಯಿಸಿದರೆಂದರೆ ಅಥವಾ ನಿಮ್ಮ ಬ್ಯಾಂಕ್‌ ಖಾತೆ ವಿವರ ಶೇರ್‌ ಮಾಡಿಕೊಂಡಿರಿ ಎಂದರೆ ನೀವು ವಂಚನೆ ಜಾಲಕ್ಕಿ ಸಿಲುಕಿದ್ದೀರಿ ಎಂದರ್ಥ.

Advertisement

ನೀವು ಮೊನ್ನೆ ಮಾಲ್‌ಗೆ ಬಂದಾಗ ಕೂಪನ್‌ ಹಾಕಿದ್ದಕ್ಕೆ ಬಹುಮಾನ ಬಂದಿದೆ, ನಿಮ್ಮ ಮೊಬೈಲ್‌ ಸಂಖ್ಯೆ ಲಕ್ಕಿ ಡ್ರಾನಲ್ಲಿ ಕೋಟ್ಯಂತರ ರೂ. ಗೆದ್ದಿದೆ, ವಿದೇಶದಿಂದ ದುಬಾರಿ ಮೌಲ್ಯದ ಉಡುಗೊರೆ ಬಂದಿದೆ, ನಾನೊಬ್ಬ ಬ್ಯಾಂಕ್‌ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡುವವರ ಬಗ್ಗೆ ಎಚ್ಚರ ಇರಲಿ. ರಾಜಧಾನಿಯಲ್ಲಿ ಆನ್‌ಲೈನ್‌ ವಂಚಕರ
ಜಾಲ ದಿನದ 24 ಗಂಟೆಯೂ ಅಲರ್ಟ್‌ ಆಗಿದ್ದು, ಮೋಸ ಹೋಗುವ ಅಮಾಯಕರಿಗಾಗಿ ಕಾಯುತ್ತಿದ್ದಾರೆ.

ತಾವು ಉದ್ಯಮಿ, ಬ್ಯಾಂಕ್‌ ಅಧಿಕಾರಿ, ಟ್ರಾವೆಲ್‌ ಏಜೆಂಟ್‌, ಸೇಲ್ಸ್‌ ಬಾಯ್‌ ಎಂದು ಹೇಳಿಕೊಂಡು ಕರೆ ಮಾಡುವ ಆನ್‌ಲೈನ್‌ ಖದೀಮರು, ಬಳಿಕ ವಿದೇಶದಲ್ಲಿ ಕೆಲಸ ಕೊಡಿಸುವ, ದುಬಾರಿ ಮೌಲ್ಯದ ಉಡುಗೊರೆ ತಲುಪಿಸುವ ಮರುಳು ಮಾತುಗಳನ್ನಾಡಿ ಆನ್‌ಲೈನ್‌ ಮೂಲಕವೇ ಕೊಳ್ಳೆ ಹೊಡೆಯುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ದುರ್ಬಳಕೆ ಬಗ್ಗೆ ಪ್ರತಿನಿತ್ಯ ಕನಿಷ್ಠ 10 ಪ್ರಕರಣಗಳು ವರದಿಯಾಗುತ್ತಿದ್ದು, ಅಮಾಯಕರು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ.

ಈ ವರ್ಷವೇ ಹೆಚ್ಚು ಪ್ರಕರಣ: ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನಗರ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿವರೆಗೆ 2700 ಪ್ರಕರಣಗಳು ದಾಖಲಾಗಿದ್ದು, ವರ್ಷಾಂತ್ಯಕ್ಕೆ ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ಎಂದರೆ ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಹಣ ವರ್ಗಾಯಿಸಿಕೊಳ್ಳುವ ವಂಚನೆ ಪ್ರಕರಣಗಳೇ ಹೆಚ್ಚಾಗುತ್ತಿವೆ. ಕರೆ ಮಾಡುವ ವಂಚಕರು, ಬಣ್ಣದ ಮಾತುಗಳನ್ನಾಡಿ ಬ್ಯಾಂಕ್‌ ಅಕೌಂಟ್‌ ನಂಬರ್‌ ಹಾಗೂ ಒಟಿಪಿ ನೀಡಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಅಕೌಂಟ್‌ ಗುಡಿಸಿ ಗುಂಡಾಂತರ ಮಾಡುತ್ತಾರೆ.

ಕೆಲಸ ಕೊಡಿಸುವ ನೆಪದಲ್ಲಿ ನಂಬಿದವರಿಗೆ ದೋಖಾ!
ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಕರುಡಿದ್ದ ಭರವಸೆಯನ್ನು ನಂಬಿದ ಐ.ಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಸತೀಶ್‌ ಜಿ.ಬಿ. ಎಂಬುವವರು 1.84 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಗಲ್ಫ್ ಟ್ಯಾಲೆಂಟ್‌ ಇಂಡಿಯಾ ಹೆಸರು ಹೇಳಿಕೊಂಡು ಸತೀಶ್‌ ಅವರನ್ನು ಸಂಪರ್ಕಿಸಿದ್ದ ನಾಲ್ವರು ಅಪರಿಚಿತರು, ಕೆನಡಾದಲ್ಲಿ ಭಾರೀ ವೇತನದ ಕೆಲಸ ಕೊಡಿಸುವ ಆಮಿಷ ಒಡ್ಡಿ ಬಳಿಕ ಆನ್‌ಲೈನ್‌ ಮೂಲಕ ಹಣ ಟ್ರಾನ್ಸ್‌ಫ‌ರ್‌ ಮಾಡಿಸಿಕೊಂಡ ಬಳಿಕ ಮೊಬೈಲ್‌ ಸ್ವಿಚ್‌ ಆಫ್ಮಾ ಡಿಕೊಂಡು ವಂಚಿಸಿದ್ದಾರೆ ಎಂದು ದೂರು ನೀಡಿದ್ದಾರೆ. 

Advertisement

ಕಮ್ಮಿ ಬೆಲೆ ಕಾರಿಗಾಗಿ 2.5 ಲಕ್ಷ ಕಳೆದುಕೊಂಡರು!
ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬರು ಕಡಿಮೆ ದರಕ್ಕೆ ಕಾರು ಖರೀದಿಸಲು ಆನ್‌ಲೈನ್‌ ಮಾರುಕಟ್ಟೆ ತಾಣವಾದ ಕ್ವಿಕರ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ಎಂಬ ಹೆಸರಿನ ಮಹಿಳೆ
ಮಾರುತಿ ಎರ್ಟಿಗಾ ಕಾರು ಫೋಟೋ ಅಪ್ಲೋಡ್‌ ಮಾಡಿದ್ದರು. ಇದನ್ನು ಗಮನಿಸಿದ ರಮೇಶ್‌ ಕಾರು ಖರೀದಿಸುವುದಾಗಿ ತಿಳಿಸಿದ್ದು, ಇದನ್ನೇ ಹೊಂಚು ಹಾಕಿದ್ದ ಪ್ರಿಯಾಂಕಾ ಆನ್‌ಲೈನ್‌ ಮೂಲಕ 2.55 ಲಕ್ಷ ರೂ ಹಣ ವರ್ಗಾವಣೆ ಮಾಡಿಸಿಕೊಂಡು ಎಸ್ಕೇಪ್‌ ಆಗಿದ್ದಾರೆ ಎಂದು ದೂರು ನೀಡಿದ್ದಾರೆ.

ಕ್ವಿಕ್ಕರ್‌, ಓಎಲ್‌ಎಕ್ಸ್‌ ಮೂಲಕವೂ ವಂಚನೆ ಸುಲಭ ಹಣಗಳಿಕೆಗಾಗಿ ಆನ್‌ಲೈನ್‌ ವಂಚಕರು ನಾನಾ ಹಾದಿ
ಹಿಡಿಯುತ್ತಾರೆ. ಕ್ವಿಕರ್‌, ಓಎಲ್‌ಎಕ್ಸ್‌ ಆನ್‌ಲೈನ್‌ ತಾಣಗಳಲ್ಲಿ ಬೈಕ್‌, ಕಾರು, ಲ್ಯಾಪ್‌ಟಾಪ್‌ ಸೇರಿ ಇನ್ನಿತರೆ ವಸ್ತುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ಬೇರೆ ಯಾರಧ್ದೋ ವಾಹನಗಳ ಪೋಟೋ ಹಾಕುವ ವಂಚಕರು ಬಳಿಕ ವಾಹನ ಖರೀದಿಗೆ ಆಸಕ್ತಿ ತೋರುವವರಿಗೆ ವಂಚನೆ ಮಾಡುತ್ತಾರೆ. 

ವಿದೇಶದಿಂದ ದುಬಾರಿ ಮೌಲ್ಯದ ಉಡುಗೊರೆ ಕಳುಹಿಸಿರುವ, ಡಾಲರ್, ಯುರೋ, ಫೌಂಡ್‌ ತಂದಿದ್ದು ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ತಡೆಹಿಡಿದಿದ್ದಾರೆ. ಅದನ್ನು ಬಿಡಿಸಿಕೊಳ್ಳಲು ಇಂತಿಷ್ಟು ಹಣ ಕಟ್ಟಬೇಕಿದೆ ಎಂದು ನೆಪಹೇಳಿ ಹಣ ವರ್ಗಾಯಿಸಿಕೊಳ್ಳುವುದೂ ವಂಚಕರ ಉಪಾಯಗಳಲ್ಲೊಂದಾಗಿದೆ. 

ವಂಚಕ ಕಟ್ಟಿದ ಕಥೆ ನಂಬಿ 5 ಲಕ್ಷ ಕಳೆದುಕೊಂಡ್ರು!
ಇತ್ತೀಚೆಗೆ ಅಶ್ವತ್ಥ್ನಗರದ ಶುಭಾ ವಾಡ್ಕರ್‌ ಎಂಬುವವರಿಗೆ ಕರೆ ಮಾಡಿದ ವಂಚಕನೊಬ್ಬ ತಾನು ಲಂಡನ್‌ನಲ್ಲಿ ಉದ್ಯಮಿಯಾಗಿದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ 20 ಸಾವಿರ ಪೌಂಡ್ಸ್‌ ಕಳುಹಿಸುತ್ತೇನೆ ಎಂದು ನಂಬಿಸಿದ್ದಾನೆ. ನಂತರ ಶುಲ್ಕ, ಈ ವೆಚ್ಚ ಎಂದು ಕಥೆ ಕಟ್ಟಿ ಹಂತ ಹಂತವಾಗಿ ಎಸ್‌ಬಿಐ ಖಾತೆಗೆ 5.37 ಲಕ್ಷ ರೂ. ಪಡೆದುಕೊಂಡು ಬಳಿಕ ಮೊಬೈಲ್‌ ಸ್ವಿಚ್‌ ಮಾಡಿಕೊಂಡಿದ್ದಾನೆ. ಈ ವಿಚಾರ ಗೊತ್ತಾದ ಬಳಿಕ ತಾವು ಮೋಸಹೋಗಿರುವುದನ್ನು ಅರಿತ ಶುಭಾ, ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ. ಮತ್ತೂಂದು ಪ್ರಕರಣದಲ್ಲಿ 5 ಲಕ್ಷ ಯು.ಎಸ್‌ ಡಾಲರ್‌ ಆಸೆಯಿಂದ ಅನಾಮಿಕ ವ್ಯಕ್ತಿ ಕಳುಹಿಸಿದ್ದ ಬ್ಯಾಂಕ್‌ ಅಕೌಂಟ್‌ಗೆ 1 ಲಕ್ಷ ರೂ. ಕಳುಹಿಸಿರುವ ವ್ಯಕ್ತಿ ಒಬ್ಬರು, ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 
   ಮಂಜುನಾಥ ಲಘುಮೇನಹಳಿ

Advertisement

Udayavani is now on Telegram. Click here to join our channel and stay updated with the latest news.

Next