ಮುದ್ದೇಬಿಹಾಳ: ನಕಲಿ ವೋಟರ್ ಐಡಿ ತಯಾರಿಸುತ್ತಿರುವ ಶಂಕೆಯ ಹಿನ್ನೆಲೆ ಮುದ್ದೇಬಿಹಾಳ ಪಟ್ಟಣದ ಹುಡ್ಕೋಕ್ಕೆ ಹೋಗುವ ಮುಖ್ಯ ರಸ್ತೆಯ ಕಿತ್ತೂರು ಚನ್ನಮ್ಮ ವೃತ್ತದ ಬಲಭಾಗದಲ್ಲಿರುವ ಜೆರಾಕ್ಸ್, ಕಂಪ್ಯೂಟರ್ ಅಂಗಡಿಗಳ ಮೇಲೆ ತಹಶೀಲ್ದಾರ್ ರೇಖಾ ನೇತೃತ್ವದಲ್ಲಿ ಪೊಲೀಸರೊಂದಿಗೆ ಶುಕ್ರವಾರ ಸಂಜೆ ದಾಳಿ ನಡೆಸಿ ಪರಿಶೀಲಿಸಿದರು.
ವ್ಯಕ್ತಿಯೊಬ್ಬನ ವೋಟರ್ ಐಡಿ ನಕಲಿ ಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಕೆಲವರು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ತಹಶೀಲ್ದಾರ್ ಅವರಿಗೆ ಸೂಚಿಸಿದ್ದರು. ಅವರ ಸೂಚನೆ ಮತ್ತು ನಕಲಿ ವೋಟರ್ ಐಡಿ ಹೊಂದಿರುವ ವ್ಯಕ್ತಿಯ ಜೊತೆಗೆ 5-6 ಅಂಗಡಿಗಳ ಮೇಲೆ ದಾಳಿ ನಡೆಸಿ ಅಲ್ಲಿರುವ ಕಂಪ್ಯೂಟರ್ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಜ್ಞ ಸಿಬಂದಿ ಪರಿಶೀಲಿಸಿದರು.
ನಕಲಿ ವೋಟರ್ ಐಡಿ ಹೊಂದಿರುವ ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ ಅವನು ಯಾವ್ಯಾವ ಅಂಗಡಿಗಳಲ್ಲಿ ನಕಲಿ ವೋಟರ್ ಐಡಿ ಮಾಡಿಸಿದ್ದಾನೆ, ಯಾರ್ಯಾರಿಗೆ ಮಾಡಿಸಿಕೊಟ್ಟಿದ್ದಾನೆ ಎನ್ನುವ ಅಂಶಗಳನ್ನು ಕಲೆ ಹಾಕಿ ಅವುಗಳ ನೈಜತೆ ಪರಿಶೀಲಿಸಲು ಈ ಕ್ರಮ ಕೈಕೊಳ್ಳಲಾಗಿತ್ತು.
ದಾಳಿಯಲ್ಲಿ ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ತಹಶೀಲ್ದಾರ್ ಕಚೇರಿ ಸಿಬಂದಿಗಳಾದ ಮಹೇಶ ಪಾಟೀಲ, ಸಂಜು ಜಾಧವ, ಕುಮಾರ ಆಲಗೂರ, ಶ್ರೀನಿವಾಸ ಹುನಗುಂದ ಮತ್ತಿರರರು ಇದ್ದರು. ಈ ಸಂದರ್ಭ ತಹಶೀಲ್ದಾರ್ ಅವರು ಅಂಗಡಿಯಲ್ಲಿದ್ದ ಮಾಲಿಕರು, ಕಂಪ್ಯೂಟರ್ ನಿರ್ವಹಿಸುವವರು ಮತ್ತು ಸಿಬಂದಿಯ ವಿಚಾರಣೆ ನಡೆಸಿದರು.
ಈ ವೇಳೆ ಸಂಶಯ ಬಂದ ಮಾಹಿತಿಗಳನ್ನು ಮೋಬೈಲ್ ನಲ್ಲಿ ಫೋಟೊ, ವಿಡಿಯೋ ಮಾಡಿಕೊಳ್ಳುವ ಮೂಲಕ ಸಂಗ್ರಹಿಸಿದರು. ನಕಲಿ ವೋಟರ್ ಐಡಿ ತಯಾರಿಸಿದ್ದು ಖಚಿತಗೊಂಡಲ್ಲಿ ಕಂಪ್ಯೂಟರ್, ಹಾರ್ಡ್ ಡಿಸ್ಕ್ ಮುಂತಾದವುಗಳನ್ನು ವಶಕ್ಕೆ ಪಡೆದುಕೊಂಡು ಅಂಥ ಅಂಗಡಿಯನ್ನು ಸೀಜ್ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ತಹಶೀಲ್ದಾರ್ ದಾಳಿಯ ವಿಷಯ ಮೊದಲೇ ತಿಳಿದ ಕೆಲ ಅಂಗಡಿಕಾರರು ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ಹೋಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದ್ದು ಅವರನ್ನೂ ಕರೆಸಿ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.