ಬೆಂಗಳೂರು: ವಿದೇಶದಲ್ಲಿ ಶಂಕಾಸ್ಪದ ಭಯೋತ್ಪಾದನೆ ಚಟುವಟಿಕೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ಇತ್ಯರ್ಥ ಪಡಿಸಲು ಮಹಿಳೆಯೊಬ್ಬರನ್ನು ನಂಬಿಸಿ 89 ಲಕ್ಷ ರೂ. ವಂಚಿಸಿದ ನಕಲಿ ರಾ ಅಧಿಕಾರಿಯೊಬ್ಬ ಬೆಳ್ಳಂದೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಜಾಜಿನಗರದ 4ನೇ ಬ್ಲಾಕ್‌ನ ನಿವಾಸಿ ಅರಹಂತ್ ಮೋಹನ್ ಕುಮಾರ್ ಲಕ್ಕವಳ್ಳಿ ಅಲಿಯಾಸ್ ಅರಹಂತ್ ಎಲ್ ಜೆ.(33) ಬಂಧಿತ. ಆರೋಪಿ ಉತ್ತರ ಪ್ರದೇಶ ಮೂಲದ ಸುನಾಲ್ ಸೆಕ್ಸೇನಾ ಎಂಬಾಕೆಗೆ ವಂಚಿಸಿದ್ದ ಎಂದು ಪೊಲೀಸರು ಹೇಳಿದರು.
ಸುನಾಲ್ ಕೆಲಸದ ನಿಮಿತ್ತ 2019ರಲ್ಲಿ ವಿಮಾನದಲ್ಲಿ ಕೌಲಾಲಂಪುರಕ್ಕೆ ಹೋಗುತ್ತಿದ್ದರು. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ತಾನೊಬ್ಬ ಗುಪ್ತಚರ ಮತ್ತು ರಾ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿ ದ್ದು, ಆಗ ಸುನಾಲ್ ಹಿನ್ನೆಲೆ ತಿಳಿದುಕೊಂಡಿದ್ದ. ಈ ನಡುವೆ ಸುನಾಲ್ ಇಟಲಿ ಮತ್ತು ಜೆಕ್ ಗಣರಾಜ್ಯ ದೇಶಗಳಿಗೆ ಹೋಗಲು 2019ರಲ್ಲಿ ವೀಸಾಗೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಲಾಗಿತ್ತು. ವೀಸಾ ಕೊಡಿಸಲು ಸಹಾಯ ಮಾಡುವಂತೆ ಆರೋಪಿಯ ಬಳಿ ಸುನಾಲ್ ಕೇಳಿಕೊಂಡಿದ್ದಳು. ವೀಸಾ ಅರ್ಜಿ ತಿರಸ್ಕಾರವಾಗಲು ಕಾರಣ ತಿಳಿದುಕೊಳ್ಳುವುದಾಗಿ ಹೇಳಿದ ಆರೋಪಿ, ಸುನಾಲ್‌ಳ ಪಾಸ್‌ಪೋರ್ಟ್ ವಿವರ ಪಡೆದುಕೊಂಡಿದ್ದ.
ಕೆಲ ದಿನ ಬಳಿಕ ಇಟಲಿ, ಜೆಕ್ ಗಣರಾಜ್ಯ, ಫ್ರಾನ್ಸ್ ಆಸ್ಟ್ರಿಯಾ, ನೆದರ್‌ಲ್ಯಾಂಡ್ ದೇಶಗಳು ಅನುಮಾನದ ಮೇಲೆ ನಿಮ್ಮ ವೀಸಾವನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಿವೆ. ಫ್ರಾನ್ಸ್, ಇಟಲಿ ಜೆಕ್ ಗಣರಾಜ್ಯ ಹಾಗೂ ಆಸ್ಟ್ರಿಯಾ ದೇಶಗಳು ನಿಮ್ಮ ಮೇಲೆ ಶಂಕಾಸ್ಪದ ಭಯೋತ್ಪಾದನೆ ಚಟುವಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿವೆ. ನಾನು ನನ್ನ ಅಧಿಕಾರ ಬಳಸಿ ಅವರ ಬಳಿ ಮಾತುಕತೆ ನಡೆಸಿದ್ದೇನೆ. ಕೆಲ ಷರತ್ತಿನೊಂದಿಗೆ ಪ್ರಕರಣ ಹಿಂಪಡೆಯಲು ಒಪ್ಪಿದ್ದಾರೆ. ಅದಕ್ಕೆ ಪ್ರತಿಯಾಗಿ ಆಸ್ಟ್ರೀಯಾ ಮತ್ತು ಜೆಕ್ ಗಣರಾಜ್ಯ ದೇಶಗಳಿಗೆ 5 ಲಕ್ಷ ಯ್ಯೂರೊ (4 ಕೋಟಿ ರೂ.), ಇಟಲಿಗೆ 2 ಲಕ್ಷ ಯುರೋ (2 ಕೋಟಿ ರೂ.) ಕೊಡಬೇಕಾಗುತ್ತದೆ ಎಂದು ನಂಬಿಸಿದ್ದ.
ಅಷ್ಟೊಂದು ಹಣ ಆಕೆ ಇಲ್ಲ ಎಂದಾಗ ಇದ್ದಷ್ಟು ಕೊಡುವಂತೆ ಹೇಳಿದ್ದ. ಅದನ್ನು ನಂಬಿದ ಸುನಾಲ್ 2019ರ ಫೆಬ್ರವರಿಯಿಂದ 2021ರ ಸೆಪ್ಟೆಂಬರ್ ವರೆಗೆ ವಿವಿಧ ಬ್ಯಾಂಕ್ ಖಾತೆಗಳಿಂದ ಆರೋಪಿಯ ಖಾತೆಗೆ 89 ಲಕ್ಷ ರೂ. ಜಮೆ ಮಾಡಿದ್ದಳು. 2020ರ ಜನವರಿಯಲ್ಲಿ ಸುನಾಲ್ ಮತ್ತೆ ವೀಸಾಗೆ ಅರ್ಜಿ ಸಲ್ಲಿಸಿದ್ದು, ವೀಸಾ ಲಭ್ಯವಾಗಿತ್ತು. ಸುನಾಲ್‌ಗೆ ಆರೋಪಿ ಅರಹಂತ್ ಮೇಲೆ ಅನುಮಾನ ಬಂದು, ತಮ್ಮ ದೂರದ ಸಂಬಂಧಿ ಪೊಲೀಸ್ ಅಧಿಕಾರಿಯೊಬ್ಬರ ಬಳಿ ಆರೋಪಿಗೆ ಹಣ ಕೊಟ್ಟಿರುವುದನ್ನು ತಿಳಿಸಿದ್ದಳು. ಆರೋಪಿ ನಿನಗೆ ಮೋಸ ಮಾಡಿರಬಹುದು. ಈ ಕುರಿತು ಸ್ಥಳೀಯ ಪೊಲೀಸರಿಗೆ ದೂರು ಕೊಡುವಂತೆ ಅವರು ಸಲಹೆ ನೀಡಿದ್ದರು.
ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಸಿಡಿಆರ್ ಸಂಗ್ರಹಿಸಿ ಆರೋಪಿ ಯನ್ನು ಬಂಧಿಸಲಾಗಿದೆ. ನಂತರ ಆತನ ರಾಜಾಜಿನಗರದ ಮನೆ ಮೇಲೆ ದಾಳಿ ನಡೆಸಿದ್ದು, ಕೆಲ ದಾಖಲೆಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದರು.