ಬೆಳಗಾವಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಬಾಕಿ ಹಣ ಹಾಗೂ ದರ ನಿಗದಿ ಸಂಘರ್ಷ ಎಂದಿಗೂ ಮುಗಿಯದ ಅಧ್ಯಾಯದಂತಾಗಿದೆ. ರಾಜ್ಯದ 67 ಸಕ್ಕರೆ ಕಾರ್ಖಾನೆಗಳಿಂದ ಸುಮಾರು 3000 ಕೋಟಿ ಬಾಕಿ ಹಣ ಕಬ್ಬು ಬೆಳೆಗಾರರಿಗೆ ಪಾವತಿಯಾಗಬೇಕಿದ್ದು, ಈ ಹಣ ರೈತರಿಗೆ ದೊರಕಿಸಿ ಕೊಡುವ ಹೊಣೆ ಯಾರದು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.
ಕಬ್ಬಿನ ದರ ನಿಗದಿ, ಬಾಕಿ ಹಣ ಪಾವತಿ ವಿಷಯದಲ್ಲಿ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರ ಮಧ್ಯೆ ನಡೆದಿರುವ ಜಟಾಪಟಿ ಇದುವರೆಗೂ ತಾರ್ಕಿಕ ಅಂತ್ಯ ಕಂಡಿಲ್ಲ. ಕಬ್ಬು ಬೆಳೆಗಾರರಿಂದ ನಿರಂತರ ಹೋರಾಟ ನಡೆದಿವೆ. ಆದರೆ ಅದಕ್ಕೆ ತಕ್ಕಂತೆ ಫಲ ಸಿಕ್ಕಿಲ್ಲ. ಸಾಂತ್ವನ ರೂಪದಲ್ಲಿ ಸರ್ಕಾರದ ಭರವಸೆಗಳು ಸಾಕಷ್ಟು ಹರಿದು ಬಂದಿದ್ದರೂ ಅದು ಬಾಕಿ ಹಣ ಪಾವತಿಯ ನೆರವಿಗೆ ಬಂದಿಲ್ಲ.
ಈಗ ಒಂದೇ ವರ್ಷದಲ್ಲಿ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಸಾವಿರಾರು ಕೋಟಿ ರೂ. ಪಾವತಿಯಾಗಬೇಕಿದೆ. ಈ ಹಿಂದಿನ ವರ್ಷಗಳಲ್ಲಿ ಎಷ್ಟೋ ಕಾರ್ಖಾನೆಗಳು ಬಾಕಿ ಹಣ ಕೊಡದೆ ಈಗಲೂ ಸತಾಯಿಸುತ್ತಲೇ ಇವೆ. ಯಾವ ಸರ್ಕಾರ ಬಂದರೂ ರೈತರ ಕೂಗಿಗೆ ಬೆಲೆ ಸಿಗುತ್ತಿಲ್ಲ. ಅಧಿವೇಶನ ಬಂದಾಗ ಒಂದಿಷ್ಟು ಗಂಭೀರ ಸ್ವರೂಪದ ಹೋರಾಟ ಮಾಡಿ ನಂತರ ಸುಮ್ಮನಾಗುವ ರೈತರ ಅಸಹಾಯಕತೆ ಸರ್ಕಾರ ಹಾಗೂ ಕಾರ್ಖಾನೆಗಳಿಗೆ ಬಹಳಷ್ಟು ಅನುಕೂಲವಾಗಿದೆ. ಹೀಗಾಗಿ ಇವತ್ತಿಗೂ ಕಬ್ಬಿಗೆ ನ್ಯಾಯಯುತ ದರ ಸಿಕ್ಕಿಲ್ಲ. ಬಾಕಿ ಹಣ ಸಕಾಲಕ್ಕೆ ಬಂದಿಲ್ಲ ಎಂಬ ಆರೋಪ ಹಾಗೂ ಅಸಮಾಧಾನ ವ್ಯಾಪಕವಾಗಿದೆ.
ಉತ್ತರ ಕರ್ನಾಟಕದಲ್ಲಿ ಕಾರ್ಖಾನೆಗಳು ಆರಂಭವಾದಾಗಿನಿಂದ ಹೋರಾಟ ಮಾಡುತ್ತಲೇ ಬಂದಿರುವ ರೈತರು ಈಗ ಮತ್ತೂಂದು ಹೋರಾಟಕ್ಕೆ ಅಣಿಯಾಗಿದ್ದಾರೆ. ಕಬ್ಬಿನ ಬಾಕಿ ಪಾವತಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಜೂ.4ರಂದು ರಾಜ್ಯದ ಕಬ್ಬು ಬೆಳೆಗಾರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕಳೆದ ವರ್ಷ ಸಿಎಂ ಬೆಳಗಾವಿ ಅಧಿವೇಶನದಲ್ಲಿ ಕಾರ್ಖಾನೆಗಳ ಮಾಲೀಕರು,ಅಧಿಕಾರಿಗಳು ಹಾಗೂ ಕಬ್ಬು ಬೆಳೆಗಾರರ ಸುದೀರ್ಘ ಸಭೆ ನಡೆಸಿದ್ದರು. ಕಾರ್ಖಾನೆಗಳು ಮತ್ತು ಅಧಿಕಾರಿಗಳಿಗೆ ಸಹ ಕಟ್ಟುನಿಟ್ಟಿನ ಆದೇಶ ಮಾಡಿದ್ದರು. ಆದರೆ ಇದುವರೆಗೂ ರೈತರ ಬೇಡಿಕೆಗಳಿಗೆ ನ್ಯಾಯ ಸಿಕ್ಕಿಲ್ಲ. ಮುಖ್ಯಮಂತ್ರಿಗಳ ನಿರ್ದೇಶನ ಕಾರ್ಯರೂಪಕ್ಕೆ ಬಂದಿಲ್ಲ, ಬದಲಾಗಿ ಮತ್ತೆ ಹೋರಾಟ ಮಾಡುವ ಅನಿವಾರ್ಯತೆ ಬಂದಿದೆ ಎಂಬ ಅಸಮಾಧಾನ ರಾಜ್ಯದ ಎಲ್ಲ ಕಡೆ ವ್ಯಕ್ತವಾಗಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲೇ ಬಾಕಿ: ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದ 67 ಸಕ್ಕರೆ ಕಾರ್ಖಾನೆಗಳಿಂದ ಸುಮಾರು 3000 ಕೋಟಿ ಬಾಕಿ ಹಣ ಕಬ್ಬು ಬೆಳೆಗಾರರಿಗೆ ಪಾವತಿಯಾಗಬೇಕಿದೆ. ಇದರಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ 25 ಸಕ್ಕರೆ ಕಾರ್ಖಾನೆಗಳಿಂದ 2018-19 ನೇ ಸಾಲಿನಲ್ಲಿ 1000 ಕೋಟಿ ಹಾಗೂ ಬಾಗಲಕೋಟೆಯ ಕಾರ್ಖಾನೆಗಳಿಂದ 100 ಕೋಟಿ ರೂ. ಬಾಕಿ ರೈತರಿಗೆ ಬರಬೇಕಾಗಿದೆ. ಇದಲ್ಲದೇ ಹಿಂದಿನ ಎರಡು ವರ್ಷಗಳ ಸುಮಾರು 150 ಕೋಟಿ ಸಹ ಬಾಕಿ ಉಳಿದುಕೊಂಡಿದೆ. ಅದೇ ರೀತಿ ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಸುಮಾರು 700 ಕೋಟಿ ರೂ. ಬಾಕಿ ರೈತರಿಗೆ ಬರಬೇಕಿದೆ.
ಭೀಕರ ಬರದಿಂದ ತತ್ತರಿಸಿರುವ ರೈತರು ಈಗ ಕಾರ್ಖಾನೆಗಳಿಂದ ಬಾಕಿ ಹಣ ಬರದೇ ಇನ್ನೂ ಕಂಗಾಲಾಗಿದ್ದಾರೆ. ಹಾಗಾದರೆ ರೈತರ ಬಾಕಿ ಹಣಕ್ಕೆ ಯಾರು ಹೊಣೆ. ಸರ್ಕಾರ ಇದರ ಜವಾಬ್ದಾರಿ ವಹಿಸಿಕೊಳ್ಳಲೇಬೇಕು. ಕಾರ್ಖಾನೆಗಳ ಮೇಲೆ ಕಠಿಣ ಕ್ರಮಕೈಗೊಂಡು ಬಾಕಿ ಹಣ ವಸೂಲಿ ಮಾಡಬೇಕು.
•ಕುರಬೂರ ಶಾಂತಕುಮಾರ,ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
ಕಬ್ಬು ಬೆಳೆಗಾರರ ಸ್ಥಿತಿ ಬಹಳ ಶೋಚನೀಯವಾಗಿದೆ. ಕಾರ್ಖಾನೆಗಳಿಂದ ಬಾಕಿ ಹಣ ಬಂದಿಲ್ಲ ಎಂಬ ನೋವು ಒಂದು ಕಡೆಯಾದರೆ ಇನ್ನೊಂದು ಕಡೆ ಭೀಕರ ಬರಗಾಲದಿಂದ ಈಗಾಗಲೇ ಅಪಾರ ಪ್ರಮಾಣದ ಕಬ್ಬಿನ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರೈತರ ಸ್ಥಿತಿ ಊಹಿಸಲೂ ಕಷ್ಟವಾಗುತ್ತದೆ.
• ಮೋಹನ ಶಾ, ಕಬ್ಬು ಹೋರಾಟ ಸಮಿತಿ ಮುಖಂಡ
ಕಬ್ಬಿನ ಬಾಕಿ ಹಣ ಹಾಗೂ ದರ ನಿಗದಿಗಾಗಿ ರೈತರು ಪ್ರತಿ ಅಧಿಕಾರಿಗೆ ಹತ್ತಾರು ಮನವಿ ಸಲ್ಲಿಸಿದ್ದಾರೆ. ಇದುವರೆಗೆ ಬಂದು ಹೋಗಿರುವ ಹತ್ತಾರು ಸಕ್ಕರೆ ಆಯುಕ್ತರಿಗೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಸರ್ಕಾರ ಹಾಗೂ ಸಕ್ಕರೆ ನಿರ್ದೇಶನಾಲಯದ ಮುಂದೆ ಸಾವಿರಾರು ಅರ್ಜಿಗಳು ಬಂದಿವೆ. ಆದರೆ ಯಾರಿಂದಲೂ ಏನೂ ಪ್ರಯೋಜನವಾಗಿಲ್ಲ. . ಹೀಗಾದರೆ ರೈತರು ಮತ್ತೆ ಬೀದಿಗಿಳಿಯಬೇಕಾಗುತ್ತದೆ.
•ಚೂನಪ್ಪ ಪೂಜೇರಿ,ಕಬ್ಬು ನಿಯಂತ್ರಣ ಮಂಡಳಿ ಸದಸ್ಯ
ಮಳೆಯಿಲ್ಲದೆ ಒಣಗಿದ ಬೆಳೆ:
ಕಬ್ಬಿನ ಬಾಕಿ ಹಣ ಬರಲಿಲ್ಲ ಎಂದು ಕೊರಗುತ್ತಿರುವ ರೈತರಿಗೆ ಈ ಬಾರಿ ಭೀಕರ ಬರ ಸಾಕಷ್ಟು ಆಂತಕ ಉಂಟು ಮಾಡಿದೆ. ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ ಮೊದಲಾದ ನದಿಗಳಲ್ಲಿ ನೀರೇ ಇಲ್ಲದ್ದರಿಂದ ಈಗಾಗಲೇ ಶೇ.25ರಷ್ಟು ಕಬ್ಬು ಬೆಳೆ ಒಣಗಿ ಹೋಗಿದೆ. ಇನ್ನೊಂದು ವಾರ ಮಳೆ ಬೀಳದೇ ಹೋದರೆ ಶೇ.50ರಷ್ಟು ಕಬ್ಬು ಕೈ ಬಿಟ್ಟು ಹೋಗಲಿದೆ ಎಂಬ ಚಿಂತೆ ರೈತರದ್ದು. ಒಣಗಿ ಹೋಗಿರುವ ಬೆಳೆಗಳಿಗೆ ತಕ್ಷಣ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
•ಕೇಶವ ಆದಿ