Advertisement

ರಾಜಕೀಯ ಪಕ್ಷಗಳ, ನಾಯಕರ ನಿದ್ದೆಗೆಡಿಸಿದ ನಕಲಿ ಮತದಾನ

09:48 PM May 06, 2019 | Team Udayavani |

ಕುಂಬಳೆ: ಎ. 23 ರಂದು ನಡೆದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮೇ 23 ಎಂದು ಬರುವುದೋ ಎಂದು ಮತದಾರರು ಕಾತರರಾಗಿದ್ದಾರೆ. ಈ ಮಧ್ಯೆ ನಕಲಿ ಮತದಾನವಾದ ಆರೋಪ ರಾಜ್ಯದ ಎಡರಂಗ ಐಕ್ಯರಂಗ ಮತ್ತು ಎನ್‌.ಡಿ.ಎ. ಪಕ್ಷಗಳಿಂದ ಕೇಳಿ ಬರುತ್ತಿದೆ. ನಕಲಿ ಮತದಾನ ರಾಜ್ಯದಲ್ಲಿ ಇದೇನೂ ಹೊಸದಲ್ಲ. ಅನೇಕ ವರ್ಷಗಳಿಂದ ಲೋಕಸಭೆ ವಿಧಾನ ಸಭೆ ಮತ್ತು ತ್ರಿಸ್ತರ ಸ್ಥಳೀಯಾಡಳಿತ ಚುನಾವಣೆಗಳಲ್ಲೂ ರಾಜ್ಯಾದ್ಯಂತ ಕಳ್ಳ ಮತಗಳ ಚಲಾವಣೆ ಯಾಗುತ್ತಲೇ ಇದೆ. ಆದರೆ ಈ ಬಾರಿ ಮಾತ್ರ ನಕಲಿ ಮತದಾನದ ರಹಸ್ಯಬಹಿರಂಗಗೊಂಡಿದೆ.

Advertisement

ಈ ಬಾರಿ ಕಾಸರಗೋಡು ಕಣ್ಣೂರು, ಮಲಪ್ಪುರಂ ಜಿಲ್ಲೆಗಳ ಸಹಿತ ಕೆಲವು ಜಿಲ್ಲೆಗಳಲ್ಲಿ ನಕಲಿ ಮತದಾನ ಬಹಿರಂಗ ಗೊಂಡು ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಟಿಕಾರಾಂ ಮೀಣ ಅವರ ದಿಟ್ಟ ನಿಲುವು ಕಳ್ಳ ಮತ ಚಲಾಯಿಸಿದ ಪಕ್ಷಗಳ ನಾಯಕರ ನಿದ್ದೆ ಕೆಡಿಸಿದೆ.

ನಕಲಿ ಮತದಾನವನ್ನು ಸಮರ್ಥಿಸಿದ ಚುನಾವಣಾಧಿಕಾರಿಯನ್ನು ದೂಷಿ ಸಿದ ರಾಜ್ಯ ಆಡಳಿತ ಪಕ್ಷದ ನಾಯಕರ ಹೇಳಿಕೆಗೆ ಮುಲಾಜಿಲ್ಲದೆ ಸಮರ್ಪಕವಾಗಿ ಉತ್ತರಿಸಿದ್ದಾರೆ. ತಮ್ಮ ಕರ್ತವ್ಯ ಏನೆಂಬುದನ್ನು ತೋರಿಸಲು ಮುಂದಾಗಿದ್ದಾರೆ. ನಕಲಿ ಮತದಾನ ನಡೆದ ದೃಶ್ಯಗಳು ವೆಬ್‌ಕಾಸ್ಟ್‌ ದೃಶ್ಯಗಳಲ್ಲಿ ಬಹಿರಂಗ ಗೊಂಡಿವೆೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಿದ ಸಿಸಿ ಕೆಮರಾಗಳಲ್ಲಿ ಇದು ದಾಖಲಾಗಿದೆ. ಗ್ರಾಮ ಪಂಚಾಯತ್‌ ಪ್ರತಿನಿಧಿ ಸಹಿತ ನಕಲಿ ಮತದಾನಗೈದವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇದನ್ನು ವಿರೋಧಿಸುವ ಮತ್ತು ಸಮರ್ಥಿಸುವ ಹೇಳಿಕೆಗಳು ರಾಜಕೀಯ ನಾಯಕರಿಂದ ಕೇಳಿಬರುತ್ತಿವೆ.

ಇಂದು ನಿನ್ನೆಯ ಕಥೆಯಲ್ಲ
ನಕಲಿ ಮತದಾನವೆಂಬ ರಾಜಕೀಯ ಸಂಪ್ರದಾಯ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ನಡೆದು ಬರುತ್ತಿದೆ. ಸರಕಾರದ ಆಡಳಿತ ಬಲದಿಂದ ಮತ್ತು ಕಾನೂನಿನ ಸಡಿಲಿಕೆಯಿಂದ ಇದು ನಿರಂತರವಾಗಿ ನಿರ್ಭಯವಾಗಿ ಮುಂದುವರಿದಿದೆ.

ಪಕ್ಷವೊಂದರ ಪಾರ್ಟಿ ಗ್ರಾಮಗಳಲ್ಲಿ ಈ ಹಿಂದೆ 90ರಿಂದ 99 ಶೇ. ಮತ ಚಲಾವಣೆಯಾಗಿದೆ. ಇಲ್ಲಿ ñಮ್ಮ ಪಕ್ಷಗಳಲ್ಲದವರ ಮತಗಳು ಬೆಳ್ಳಂಬೆಳ್ಳಗೆ ಚಲಾವಣೆಯಾಗಿರುವುದು. ಮಾತ್ರವಲ್ಲದೆ ಮಡಿದವರು, ಊರಲ್ಲಿ ಇಲ್ಲದವರ ಮತ ಬಹಿರಂಗವಾಗಿ ಚಲಾವಣೆಯಾಗುವುದು.

Advertisement

ಇಲ್ಲಿ ವಿರೋಧಪಕ್ಷಗಳ‌ ಬೂತ್‌ ಏಜೆಂಟರಿಗೆ ತಮ್ಮ ಅಭ್ಯರ್ಥಿ ಪರವಾಗಿ ಕೂರಲು ನಿರ್ಬಂಧವಿದೆ. ಇಲ್ಲಿ ವಿರೋಧಿಸುವ ವಿರೋಧಪಕ್ಷದವರು ತಕ್ಕ ಶಾಸ್ತಿ ಅನುಭವಿಸಬೇಕಾಗಿದೆ.

ಅಧಿಕಾರಿಗಳಿಗೆ ಬೆದರಿಕೆ
ಮತದಾನ ಕರ್ತವ್ಯಕ್ಕೆ ತೆರಳಿದ ಉನ್ನತ ಸರಕಾರಿ ನೌಕರ‌ರಾದ ಪ್ರಿಸೈಡಿಂಗ್‌ ಆಫೀಸರರಿಗೆ ಮತ್ತು ಇತರ ಅಧಿಕಾರಿ ಗಳಿಗೆ, ಸಿಬಂದಿಗೆ ಜೀವ ಬೆದರಿಕೆ ಒಡ್ಡಿ ಹಲವು ಕಡೆಗಳಲ್ಲಿ ಸಾಮೂಹಿಕವಾಗಿ ನಿರ್ಭೀತಿ ಯಿಂದ ನಕಲಿ ಮತದಾನ ಮಾಡಿದ ಆದೆಷ್ಟೋ ಉದಾಹರಣೆಗಳಿವೆ. ಅಂದು ಕೊಲ್ಲುವ, ಕೈಕಾಲು ಕಡಿಯುವ ಬೆದರಿಕೆಗೆ ಮಣಿದು ನಾವು ಜೀವಂತ ಮರಳ ಬೇಕಾದರೆ ನಾವು ನಕಲಿ ಮತದಾನ ವನ್ನು ಮೂಕಪ್ರೇಕ್ಷಕರಾಗಿ ನಮ್ಮ ಕಣ್ಮುಂದೆ ನೋಡಬೇಕಾಯಿತೆಂಬ ಭಯದ ವಾತಾವರಣದ ವಿಷಾದನೀಯ ಮಾತುಗಳು ಅನುಭವಿಸಿದ ಅಂದಿನ ಅಧಿಕಾರಿಗಳ ಬಾಯಿಯಿಂದ ಇಂದೂ ಕೇಳಿ ಬರುತ್ತಿವೆ.

ಸರಕಾರ ಮತದಾನ ಮಾಡಲು ಘೋಷಿಸಿದ 11 ಅಂಗೀಕೃತ ಗುರುತಿನ ಚೀಟಿಯಲ್ಲಿ ಯಾವುದನ್ನೂ ಹಾಜರುಪಡಿಸದೆ ಕೇವಲ ಮತದಾರ ಪಟ್ಟಿಯ ಸೀರಿಯಲ್‌ ನಂಬ್ರ ಹೇಳಿ ಬಲವಂತವಾಗಿ ಮತದಾನ ಮಾಡಿದ ಮತ್ತು ಇದೇ ವ್ಯಕ್ತಿ ಅದೇ ಮತಕೇಂದ್ರದಲ್ಲಿ ಒಂದಕ್ಕೂ ಹೆಚ್ಚು ಮತದಾನ ಮಾಡಿರುವ ಘಟನೆ ನಡೆದ ಅದೆಷೋr ಘಟನೆಗಳು ನಡೆದು ಹೋಗಿದೆ.ಅಸಲಿ ಮತದಾರರು ಮತ ಚಲಾಯಿಸಲು ಆಗಮಿಸಿದಾಗ ತಮ್ಮ ಮತ ಚಲಾವಣೆಯಾಗಿರುವುದನ್ನು ಅಧಿಕಾರಿಗಳಿಂದ ತಿಳಿದು ಭಯದ ವಾತಾವರಣದಲ್ಲಿ ಮರಳಿದ ಅದೆಷೋr ಘಟನೆ ನಡೆದಿದೆ.ಆದರೆ ಇದೀಗ ಚುನಾವಣಾಧಿಕಾರಿಗಳ ಬಿಗು ನಿಲುವು ಕಳ್ಳ ಓಟಿಗೆ ಒಂದಷ್ಟು ಕಡಿವಾಣ ಹಾಕಿದಂತಾಗಿದೆ.ಆದರೆ ವೆಬ್‌ ಕಾಸ್ಟ್‌ ಕೆಮರಾ ಅಳವಡಿಸಿದಲ್ಲಿ ಮಾತ್ರ ನಕಲಿ ಮತದಾನ ಬಹಿರಂಗಗೊಂಡಿದೆ.ಆದರೆ ಉಳಿದ ಕಡೆಗಳಲ್ಲಿ ಚಲಾವಣೆಗೊಂಡ‌ ಸಾಕಷ್ಟು ನಕಲಿ ಮತಗಳು ಪೆಟ್ಟಿಗೆಯೊಳಗೆ ಭದ್ರವಾಗಿವೆ.

ನಕಲಿ ಮತದಾನದ ವಿರುದ್ಧ ಕೇಸು
2016ರಲ್ಲಿ ನಡೆದ ರಾಜ್ಯವಿಧಾನ ಸಭಾ ಚುನಾವಣೆಯಲ್ಲಿ ವಿಜೇತರಾದ ಮಂಜೇಶ್ವರ ಶಾಸಕರ ವಿರುದ್ಧ ಕೇವಲ 89 ಮತಗಳ ಅಂತರದಿಂದ ಪರಾಜಿತರಾದ ಅಭ್ಯರ್ಥಿಯೋರ್ವರು ಕ್ಷೇತ್ರಾದ್ಯಂತ 200 ಕ್ಕೂ ಮಿಕ್ಕಿ ನಕಲಿ ಮತ ಚಲಾವಣೆಯಾಗಿದೆ ಎಂಬುದಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ಕೇಸಿನ ತನಿಖೆಯಲ್ಲಿ ಕೆಲವೊಂದು ಮಡಿದವರ ಮತ್ತು ಊರಲ್ಲಿ ಇಲ್ಲದವರ ಮತಗಳು ಚಲಾವಣೆಯಾಗಿರುವುದು ಧೃಡವಾಗಿದೆ.ಆದರೆ ದುರದೃಷ್ಟವಶಾತ್‌ ದಾವೆಯ ತೀರ್ಪಿಗೆ ಮುನ್ನ ವಿಜೇತ ಶಾಸಕರು ನಿಧನ ಹೊಂದಿದ ಕಾರಣ ಕೇಸನ್ನು ಹಿಂದಗೆಯಬೇಕಾದ ಪ್ರಸಂಗ ನಡೆದಿದೆ.

ಪೊಲೀಸರಿಂದಲೂ ನಕಲಿ ಮತದಾನ
ಬೇಲಿಯೇ ಹೊಲಮೇಯ್ದಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಳ್ಳ ಮತದಾನ ತಡೆಯಬೇಕಾದ ಪೊಲೀಸರಿಂದಲೇ ನಕಲಿ ಮತದಾನವಾದ ಆರೋಪವಿದೆ.

ಚುನಾವಣೆಯ ಕರ್ತವ್ಯಕ್ಕೆ ನಿಯೋಜಿತರಾದ ಪೊಲೀಸರ ಅಂಚೆ ಮತಗಳನ್ನು ಬಲ್ಕ್ ಆಗಿ ಸಂಗ್ರಹಿಸಿ ನಕಲಿ ಸಹಿ ಹಾಕಿ ಒಂದು ಪಕ್ಷದ ಅಭ್ಯರ್ಥಿಗೆ ಚಲಾವಣೆ ಮಾಡಿದ ಆರೋಪ ಕೇಳಿಬಂದಿದೆ. ಇದನ್ನು ತನಿಖೆ ನಡೆಸಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಬಲವಾಗಿದೆ.

ಕಡಿವಾಣ ಅಗತ್ಯವಿದೆ
ರಾಜ್ಯದ ಎಲ್ಲ ಮತದಾನ ಕೇಂದ್ರಗಳಲ್ಲೂ ವೆಬ್‌ ಕಾಸ್ಟ್‌ ಮತ್ತು ಸಿಸಿ ಕೆಮರಾ ಅಳವಡಿಸಿದಲ್ಲಿ ನಕಲಿ ಮತದಾನ ಪತ್ತೆಹಚ್ಚಲು ಸಹಕಾರಿಯಾಗಬಲ್ಲದು. ಆಧಾರ್‌ಗೆ ಗುರುತಿನ ಚೀಟಿ ಲಿಂಕ್‌ ಮಾಡಿದಲ್ಲಿ ಒಂದಕ್ಕಿಂತ ಹೆಚ್ಚಿನ ಕಡೆಗಳಲ್ಲಿ ಮತ ಚಲಾಯಿಸುವುದನ್ನು ತಡೆಯಬಹುದು. ಇದಕ್ಕೆ ಚುನಾವಣಾಧಿಕಾರಿಗಳು ಮುಂದಾಗಬೇಕು.ಇಲ್ಲವಾದಲ್ಲಿ ರಾಜಕೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿದ್ದ ಕೆ.ಜಿ. ಮಾರಾರ್‌ ಅವರ ಮಾರ್ಮಿಕ ಭಾಷಣದ ನುಡಿಯಂತೆ ಮಡಿದವರು ಕರ್ಕಾಟಕ ಅಮಾವಾಸ್ಯೆ ಪಿತೃಮೋಕ್ಷ ದಿನದಂದು ಮತ್ತು ಮತದಾನದಂದು ಮತ್ತೆ ಪ್ರತ್ಯಕ್ಷರಾಗುವರೆಂಬಂತೆ ಕಾನೂನಿನ ಇನ್ನಷ್ಟು ಬಿಗಿ ಇಲ್ಲವಾದಲ್ಲಿ ಚುನಾವಣೆಯಲ್ಲಿ ಇನ್ನೂ ನಕಲಿ ಮತ ಚಲಾಚಣೆಯಾಗಲಿದೆ. ತನ್ನ ಸ್ವಂತ ಹಕ್ಕಿನ ಮತವನ್ನು ತನಗೆ ಚಲಾಯಿಸಲು ಅಸಾಧ್ಯವಾಗುವ ನಕಲಿ ಮತದಾನಕ್ಕೆ ಕಡಿವಾಣ ಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next