Advertisement

ನಕಲಿ ಪೊಲೀಸ್‌ ದರೋಡೆಕೋರರ ಸೆರೆ

11:25 AM Nov 19, 2017 | |

ಬೆಂಗಳೂರು: ವಿಶೇಷ ಪೊಲೀಸ್‌ ಪಡೆ ಸಿಬ್ಬಂದಿ ಎಂದು ಹೇಳಿಕೊಂಡು ನಗರದ ಹೊರವಲಯದಲ್ಲಿ ನಿಂತು ಅಮಾಯಕರನ್ನು ಸುಲಿಗೆ ಮಾಡುತ್ತಿದ್ದ ಶಿಕ್ಷಕ ಸೇರಿ ಮೂವರನ್ನು ದಕ್ಷಿಣ ವಿಭಾಗದ ತಲ್ಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಮನಗರ ಮೂಲದ ರಘು (34) ಆನೇಕಲ್‌ನ ದೊಡ್ಡಯ್ಯ (48) ತಮಿಳುನಾಡಿನ ಹರೀಶ (31) ಬಂಧಿತರು. ಇವರಿಂದ 14 ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4 ಲಕ್ಷ ರೂ. ನಗದು, ಬೊಲೆರೋ ವಾಹನ, 1 ನಕಲಿ ಪಿಸ್ತೂಲ್‌, ಪೊಲೀಸ್‌ ಸ್ಟಿಕ್ಕರ್‌ ಮತ್ತು ಸರ್ಕಾರಿ  ಜೀಪ್‌ಗೆ ಅಳವಡಿಸುವ “ಜಿ’ ಅಕ್ಷರವುಳ್ಳ ನಕಲಿ ನಂಬರ್‌ ಪ್ಲೇಟ್‌ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರ ಪೈಕಿ ಈ ಮೊದಲು ಗೃಹ ರಕ್ಷಕ ದಳದ ಸಿಬ್ಬಂದಿಯಾಗಿದ್ದ ರಘು ಪೊಲೀಸರ ವೇಷ ಧರಿಸಿ ಹಣ ಸಲುಗೆ ಮಾಡಲು ಸಂಚು ರೂಪಿಸಿದ್ದ. ಇದಕ್ಕಾಗಿ ಮುತ್ತೂಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡಯ್ಯ ಮತ್ತು ಶಿಕ್ಷಕ ಹರೀಶ್‌ ಸಹಾಯ ಪಡೆದು ಕೃತ್ಯವೆಸಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಗೃಹ ರಕ್ಷಕ ದಳದಲ್ಲಿದ್ದ ರಘು, ಚನ್ನಪಟ್ಟಣದಲ್ಲಿ ಹೊಲಿಸಿಕೊಂಡಿದ್ದ ಡಬಲ್‌ ಸ್ಟಾರ್‌ ಪೊಲೀಸ್‌ ಅಧಿಕಾರಿ ಸಮವಸ್ತ್ರ ಧರಿಸುತ್ತಿದ್ದ. ಸಹಚರ ದೊಡ್ಡಯ್ಯನಿಗೆ ಸಫಾರಿ ಡ್ರಸ್‌ ತೊಡಿಸಿ ಸ್ಪೆಷಲ್‌ ಸ್ಕ್ವಾಡ್‌ ಬಟ್ಟೆ ಧರಿಸಿ, ಶಿಕ್ಷಕ ಹರೀಶ್‌ ಜತೆ ಕೃತ್ಯಕ್ಕೆ ಇಳಿಯುತ್ತಿದ್ದರು. ಇದಕ್ಕೆಂದೇ ಬೊಲೆರೋ ಜೀಪ್‌ ಖರೀದಿಸಿ, ಸರ್ಕಾರಿ ವಾಹನಗಳಿಗೆ ಬಳಸುವ “ಜಿ’ ಅಕ್ಷರವುಳ್ಳ ನಂಬರ್‌ ಪ್ಲೇಟ್‌ ಅಳವಡಿಸಿದ್ದರು.

ಜತೆಗೆ “ಪೊಲೀಸ್‌’ ಸ್ಟಿಕರ್‌ ಅಂಟಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಪ್ರಮುಖವಾಗಿ ನೈಸ್‌ ರಸ್ತೆಯ ಸುತ್ತಮುತ್ತಲ ನಿರ್ಜನ ಪ್ರದೇಶಗಳಲ್ಲೇ ಇವರ ಕಾರ್ಯಾಚರಣೆ ನಡೆಯುತ್ತಿತ್ತು. ನವ ದಂಪತಿ, ಪ್ರೇಮಿಗಳನ್ನೇ ಇವರು ಟಾರ್ಗೆಟ್‌ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

Advertisement

ಸೂಪರ್‌ ಕಾಪ್‌ ಕನಸು: ಹಲವು ವರ್ಷಗಳಿಂದ ಹೋಂಗಾರ್ಡ್‌ ಆಗಿದ್ದ ರಘುಗೆ ಪೊಲೀಸ್‌ ಅಧಿಕಾರಿಯಾಗಬೇಕೆಂಬ ಹಂಬಲವಿತ್ತು. “ಹೋಂಗಾರ್ಡ್‌ ಡ್ರೆಸ್‌ ಧರಿಸಿದರೆ ಪೊಲೀಸ್‌ನಂತೆ ಕಾಣುತ್ತಿಯಾ’ ಎಂದು ಸಹದ್ಯೋಗಿಗಳು ಹೇಳುತ್ತಿದ್ದರು.

ಆದರೆ ಪೊಲೀಸ್‌ ಆಗುವ ನಿಟ್ಟಿನಲ್ಲಿ ಪ್ರಯತ್ನಿಸದ ರಘು, ಪೊಲೀಸ್‌ ಹೆಸರಿನಲ್ಲಿ ಸಣ್ಣ ಪುಟ್ಟ ಸುಲಿಗೆ ಶುರು ಮಾಡಿ, ಹಲವು ಬಾರಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬರುತ್ತಿದ್ದಂಥೆ ಮತ್ತೆ ನಕಲಿ ಪೊಲೀಸ್‌ ಆಗುತ್ತಿದ್ದ. ನಂತರ ಜೈಲಿನಲ್ಲಿದ್ದ ದೊಡ್ಡಯ್ಯ ಹಾಗೂ ಸುಲಲಿತವಾಗಿ ಇಂಗ್ಲಿಷ್‌ ಮಾತನಾಡುತ್ತಿದ್ದ ಹರೀಶ್‌ನನ್ನು ತಂಡಕ್ಕೆ ಸೇರಿಸಿಕೊಂಡಿದ್ದ.

ಜೈಲಿನಲ್ಲೇ ಸ್ಕೇಚ್‌: ದರೋಡೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರಘುಗೆ, ಪೊಕೊ ಪ್ರಕರಣದಲ್ಲಿ ಜೈಲಲ್ಲಿದ್ದ ದೊಡ್ಡಯ್ಯನ ಪರಿಚಯವಾಗಿದೆ. ಇಬ್ಬರೂ ಸೇರಿ ಪೊಲೀಸ್‌ ವೇಷದಲ್ಲಿ ಅಮಾಯಕರನ್ನು ಸುಲಿಯುವ ಸಂಚನ್ನು ಜೈಲಲ್ಲೇ ರೂಪಿಸಿದ್ದರು. ಇಂಗ್ಲಿಷ್‌ ಬಲ್ಲ ವ್ಯಕ್ತಿಯ ಹುಡುಕಾಟದಲ್ಲಿದ್ದಾಗ ಕೃಷ್ಣಗಿರಿಯ ಖಾಸಗಿ ಶಾಲೆ ಶಿಕ್ಷಕ ಹರೀಶ್‌ ಸಂಪರ್ಕಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಕೃತ್ಯ: ನಗರದ ಹೊರವಲಯಗಳಾದ ಬನ್ನೇರುಘಟ್ಟ ರಸ್ತೆ, ನೈಸ್‌ ರಸ್ತೆ, ಹೊಸೂರು ರಸ್ತೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸ್‌ ವೇಷ ತೊಟ್ಟು ದರೋಡೆಗಿಳಿಯುತ್ತಿದ್ದರು. ನಿರ್ಜನ ಪ್ರದೇಶಗಳಲ್ಲಿ ಪ್ರೇಮಿಗಳಿರುವುದನ್ನು ಕಂಡು ದಾಳಿ ಮಾಡುತ್ತಿದ್ದರು. ಇಲ್ಲಿ ಏನು ಮಾಡುತ್ತಿದ್ದಿರಾ, ನಿಮ್ಮ ಪಾಲಕರಿಗೆ ಮಾಹಿತಿ ನೀಡುತ್ತೇವೆ,

ಸ್ಪೇಷನ್‌ಗೆ ನಡೆಯಿರಿ, ಕೇಸ್‌ ಹಾಕಿ ಜೈಲಿಗೆ ತಳ್ಳುತ್ತೀವಿ ಎಂದು ಅಸಲಿ ಪೊಲೀಸರ ಮಾದರಿಯಲ್ಲಿ ಧಮ್ಕಿ ಹಾಕುತ್ತಿದ್ದರು. ಇದರಿಂದ ಹೆದರಿದ ಪ್ರೇಮಿಗಳು ಸೇರಿದಂತೆ ಅಮಾಯಕರಿಂದ  ಆರೋಪಿಗಳು ಹಣ, ಚಿನ್ನಾಭರಣ, ಮೊಬೈಲ್‌ಗ‌ಳನ್ನು ಸುಲಿಗೆ ಮಾಡುತ್ತಿದ್ದರು. ಬಳಿಕ ಈ ಕಡೆ ಮತ್ತೂಮ್ಮೆ ಬರದಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.

ಬೊಲೆರೋದಲ್ಲಿ ರೌಂಡ್ಸ್‌: ಪೊಲೀಸ್‌ ಇಲಾಖೆಯಲ್ಲಿ ಹೆಚ್ಚು ಬಳಕೆ ಇರುವುದೇ ಬೊಲೆರೋ ವಾಹನಗಳು. ಹೀಗಾಗಿ ತಮ್ಮ ಕೃತ್ಯಕ್ಕೆ ಹೊಸ ಬೊಲೆರೋ ವಾಹನ ಖರೀದಿಸಿದ್ದರು. ಇದಕ್ಕೆ ಸರ್ಕಾರಿ ವಾಹನಗಳಿಗೆ ಬಳಸುವಂತೆ “ಜಿ’ ಅಕ್ಷರವುಳ್ಳ ನಂಬರ್‌ ಪ್ಲೇಟ್‌ ರೆಡಿ ಮಾಡಿಕೊಂಡಿದ್ದರು.

ಜತೆಗೆ ಪೊಲೀಸ್‌ ಸ್ಟಿಕ್ಕರ್‌ ಹಾಕಿಕೊಂಡು ರೌಂಡ್ಸ್‌ ಶುರುಮಾಡುತ್ತಿದ್ದರು. ಇದೇ ವಾಹನದಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಧರಿಸುವ ಸಮವಸ್ತ್ರ ಹಾಗೂ ಪೊಲೀಸರು ಬಳಸುವ ಲಾಠಿ, ಕ್ಯಾಪ್‌ಗ್ಳನ್ನು ಹಾಕಿಕೊಳ್ಳುತ್ತಿದ್ದರು. ನಕಲಿ ಪಿಸ್ತೂಲ್‌ವೊಂದನ್ನು ಇಟ್ಟುಕೊಂಡಿದ್ದರು.

ಸಿಕ್ಕಿದ್ದು ಹೇಗೆ?: ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿದ ಆರೋಪಿಗಳು ಬೆದರಿಸಿ ಹಣ ಹಾಗೂ ಎರಡು ಮೊಬೈಲ್‌ಗ‌ಳನ್ನು ಸುಲಿಗೆ ಮಾಡಿದ್ದರು. ಇವರ ವರ್ತನೆ ಬಗ್ಗೆ ಪ್ರೇಮಿಗಳಿಗೆ ಅನುಮಾನ ಬಂದಿತ್ತು. ಥೇಟ್‌ ಪೊಲೀಸರಂತೆ ಕಾಣುತ್ತಾರೆ.

ಆದರೆ ದರೋಡೆಕೋರರಂತೆ ಸುಲಿಗೆ ಮಾಡುತ್ತಾರೆ ಎಂಬ ಅನುಮಾನದೊಂದಿಗೆ ಯುವಕನೊಬ್ಬ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡಿದ್ದ. ನಂತರ ಪ್ರೇಮಿಗಳಿಂದ ದರೋಡೆ ಮಾಡಿದ್ದ ಮೊಬೈಲ್‌ ನೆಟ್‌ವರ್ಕ್‌ ಜಾಡು ಹಿಡಿದು ಶೋಧ ಕಾರ್ಯ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next