Advertisement

ಮಣ್ಣಿನಲ್ಲಿ ಕರಗಬಲ್ಲ ಬ್ಯಾಗ್‌ ಹೆಸರಿನಲ್ಲಿ ನಕಲಿ ಪ್ಲಾಸ್ಟಿಕ್‌!

11:36 PM Oct 14, 2019 | Sriram |

ಕುಂದಾಪುರ: ಪ್ರಧಾನಿಯವರ ಸಲಹೆಯಂತೆ ಮರುಬಳಕೆಯಾಗದ ಪ್ಲಾಸ್ಟಿಕ್‌ನ್ನು ನಿಷೇಧಿಸಲಾಗಿದ್ದು ಮಣ್ಣಿನಲ್ಲಿ ಕರಗಬಲ್ಲ ಬ್ಯಾಗ್‌ ಎಂದು ಪ್ಲಾಸ್ಟಿಕ್‌ನ ನಕಲಿ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿವೆ. ಸ್ಥಳೀಯಾಡಳಿತಗಳು ಪ್ಲಾಸ್ಟಿಕ್‌ ತೊಟ್ಟೆಗಳಿಗಾಗಿ ದಾಳಿ ಮಾಡುತ್ತಿದ್ದಾಗ ಇಂತಹ ವಸ್ತುಗಳು ಬೆಳಕಿಗೆ ಬಂದಿವೆ. ಕರಗಬಲ್ಲ ವಸ್ತುಗಳು ಎಂದು ನಂಬಿ ವ್ಯಾಪಾರಿಗಳು ಖರೀದಿಸಿದ ಕಾರಣ ಮಾನವೀಯತೆ ನೆಲೆಯಲ್ಲಿ ಬಿಡಬೇಕೇ, ಕೇಸು ಹಾಕಬೇಕೇ ಎಂಬ ಗೊಂದಲ ಅಧಿಕಾರಿಗಳಲ್ಲಿ ಮೂಡುತ್ತಿದೆ. ಈ ಮಧ್ಯೆ ಪ್ಲಾಸ್ಟಿಕ್‌ ನಿಷೇಧ ಸಣ್ಣ ವ್ಯಾಪಾರಸ್ಥರಿಗೆ ಇನ್ನೂ ಕಗ್ಗಂಟಾಗಿದೆ. ಜನತೆ ಇದಕ್ಕೆ ಒಗ್ಗಿಕೊಳ್ಳಲು ಸಮಯ ತಗುಲುತ್ತಿದೆ. ಎಲ್ಲೆಡೆ “ನಮ್ಮಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ದೊರೆಯುವುದಿಲ್ಲ, ದಯವಿಟ್ಟು ಕ್ಷಮಿಸಿ’ ಎಂಬ ಫ‌ಲಕಗಳು ರಾರಾಜಿಸುತ್ತಿವೆ.

Advertisement

ವ್ಯಾಪಾರಿಗಳ ಸಂಕಟ
ಕರಿದ ತಿಂಡಿಗಳು, ದೊಡ್ಡ ದೊಡ್ಡ ಕಂಪೆನಿಗಳ ತಿಂಡಿಗಳು ಪ್ಲಾಸ್ಟಿಕ್‌ ಪ್ಯಾಕ್‌ನಲ್ಲಿದ್ದು ಬೇಕರಿ ಸೇರಿದಂತೆ ಸಣ್ಣಪುಟ್ಟ ಅಂಗಡಿಗಳಲ್ಲೂ ಇವನ್ನು ಮಾರಾಟ ಮಾಡಲಾಗುತ್ತದೆ. ಆದರೆ ಇವುಗಳನ್ನೆಲ್ಲ ಖರೀದಿಸಿದ ಗ್ರಾಹಕನಿಗೆ ಪ್ಲಾಸ್ಟಿಕ್‌ಗೆ ಬದಲಿಯಾಗಿ ಬಳಸುವ ಸಣ್ಣ ಬ್ಯಾಗ್‌ಗೆ ಕನಿಷ್ಠ 3 ರೂ., ಅನಂತರ 10 ರೂ., 20 ರೂ. ಹಾಗೂ ಅಧಿಕ ದರ ವಿಧಿಸಲಾಗುತ್ತದೆ. ಹತ್ತೋ ಇಪ್ಪತ್ತೋ ರೂ.ಗಳ ವ್ಯಾಪಾರ ಮಾಡಿದಾತ ಕೊಂಡೊಯ್ಯುವ ಚೀಲಕ್ಕೇ 10 ರೂ. ನೀಡಲು ನಿರಾಕರಿಸುತ್ತಿದ್ದಾರೆ. ದರ ವಿಧಿಸಿದರೆ ಅಂಗಡಿಯವರ ಜತೆ ಜಗಳ, ಬ್ಯಾಗ್‌ ನೀಡದೇ ಇದ್ದರೆ ವ್ಯಾಪಾರ ಆಗದ ಭೀತಿ.

ಹಾಲಿನ ಮಳಿಗೆ
ಕಚೇರಿ ಅಥವಾ ಇನ್ನಿತರ ಕೆಲಸ ಮುಗಿಸಿ ಮನೆಗೆ ಹೋಗುವಾಗ ಹಾಲಿನ ಮಳಿಗೆಗಳಿಂದ ಪ್ರತಿನಿತ್ಯ ಹಾಲು ಕೊಂಡೊಯ್ಯುವವರು ಇನ್ನೂ ಬ್ಯಾಗ್‌ ಕೊಂಡೊಯ್ಯುವ ಪದ್ಧತಿಗೆ ಒಗ್ಗಿಕೊಂಡಂತಿಲ್ಲ. ಹಾಲಿನ ಪ್ಯಾಕೆಟ್‌ ಜತೆ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಬ್ಯಾಗ್‌ ನೀಡುವಂತಿಲ್ಲ. ಕೆಎಂಎಫ್ ಈಗಾಗಲೇ ಹಾಲಿನ ಖಾಲಿ ತೊಟ್ಟೆಗಳನ್ನು ಮರಳಿ ಪಡೆಯುವ ಯೋಜನೆ ಆರಂಭಿಸಿದೆ. ಆದರೆ ಇದಕ್ಕೆ ಗ್ರಾಹಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ಅವಿಭಜಿತ ಜಿಲ್ಲೆಯಲ್ಲಿ ಕೆಎಂಎಫ್ಗೆ1,800 ಏಜೆಂಟರಿದ್ದು ಹಾಲು, ಮೊಸರು ಎಂದು 3.5 ಲಕ್ಷ ಲೀ. ಮಾರಾಟವಾಗುತ್ತದೆ. ಅಂದರೆ ಕನಿಷ್ಠ 7 ಲಕ್ಷ ತೊಟ್ಟೆಗಳು!. ಈ ಪೈಕಿ ಗ್ರಾಹಕರಿಂದ ಮರಳಿ ಸಂಗ್ರಹವಾಗುತ್ತಿರುವ ಪ್ರಮಾಣ ತೀರಾ ಕಿರಿದು. ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾದಾಗ ನಗರಪಾಲಿಕೆಯ ನೋಡೆಲ್‌ ಏಜೆನ್ಸಿಗಳಿಗೇ ಹಾಲಿನ ಖಾಲಿ ತೊಟ್ಟೆಗಳನ್ನು ನೀಡಿ ಅದರಿಂದ ಬಂದ ಹಣವನ್ನು ಪ್ಲಾಸ್ಟಿಕ್‌ ಸಂಗ್ರಹಿಸಿದ ಏಜೆಂಟರು ಹಾಗೂ ಸಾಗಿಸಿದ ವಾಹನದವರಿಗೆ ನೀಡುವ ಯೋಜನೆ ರೂಪಿಸಲಾಗಿದೆ.

ಮೀನಿಗೆ ಇಲ್ಲ ಪರ್ಯಾಯ
ಬೇಕರಿ, ಹೊಟೇಲ್‌, ಅಂಗಡಿ, ತರಕಾರಿ ಅಂಗಡಿಗಳಲ್ಲಿ ಪರ್ಯಾಯ ಬ್ಯಾಗ್‌ ಬಳಸಿದರೂ ಮೀನು ಮಾರುಕಟ್ಟೆಯಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿ ಹಿನ್ನಡೆಯಾಗುತ್ತಿದೆ. ಇಲ್ಲಿ ದಪ್ಪದ ಪ್ಲಾಸ್ಟಿಕ್‌ ಬಳಕೆಯೊಂದೇ ಪರಿಹಾರವಾಗಿದ್ದರೂ ದರದ ದೃಷ್ಟಿಯಿಂದ ಕಷ್ಟಸಾಧ್ಯ. ಹೊಟೇಲ್‌ಗ‌ಳಲ್ಲಿ ಬಾಳೆಎಲೆ, ಕಾಗದ, ಅಲ್ಯುಮಿನಿಯಂ ಫಾಯಿಲ್‌ಗ‌ಳ ಮೂಲಕ ಆಹಾರ ಪದಾರ್ಥ ಕಟ್ಟಿಕೊಡಲಾಗುತ್ತಿದೆ.

ಜಾಗೃತಿ
ಸ್ಥಳೀಯಾಡಳಿತ ಸಂಸ್ಥೆಗಳು ಈಗಾಗಲೇ ಪ್ರತಿ ಮಳಿಗೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್‌ ನಿಷೇಧದ ಜಾಗೃತಿ ಮೂಡಿಸಿವೆ. ಮನೆ ಮನೆ ಕಸ ಸಂಗ್ರಹ ಸಂದರ್ಭ ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ ನೀಡದಂತೆ ಮನವಿ ಮಾಡುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾನೂನಿನ ಸಮರ್ಪಕ ಅನುಷ್ಠಾನಕ್ಕೆ ಸ್ಥಳೀಯಾಡಳಿತಗಳು ಮಾತ್ರ ಹೆಣಗುತ್ತಿದ್ದು ಪೊಲೀಸ್‌, ಸಾರಿಗೆ ಇಲಾಖೆ, ಕೈಗಾರಿಕಾ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಗಳು ಸ್ಪಂದಿಸುತ್ತಿಲ್ಲ ಎಂಬ ಅಪವಾದವೂ ಇದೆ. ಏಕೆಂದರೆ ದೂರದ ಊರುಗಳಿಂದ ಮೂಟೆಗಟ್ಟಲೆ ನಿಷೇಧಿತ ಪ್ಲಾಸ್ಟಿಕ್‌ ಲಾರಿಗಳಲ್ಲಿ ಬರುತ್ತಿದ್ದು ಅವುಗಳನ್ನು ಸಂಬಂಧಪಟ್ಟ ಇಲಾಖೆಗಳು ಕ್ರಮಕೈಗೊಳ್ಳದೇ ಹೋದರೆ ಕಟ್ಟುನಿಟ್ಟಿನ ನಿಯಮಪಾಲನೆ ಅಸಾಧ್ಯ.

Advertisement

ಏನಾಗಬೇಕು?
ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಸುವ ಬಟ್ಟೆ ಇನ್ನಿತರ ಬ್ಯಾಗ್‌ಗಳ ದರದಲ್ಲಿ ಇಳಿಕೆಯಾಗಬೇಕು. ಯಾವುದೇ ಖರೀದಿ ಇದ್ದರೂ ಗ್ರಾಹಕರು ಮರುಬಳಕೆಯ ಚೀಲ ಕೊಂಡೊಯ್ಯಲು ಅಭ್ಯಾಸ ಮಾಡಬೇಕು. ಒಂದೇ ಬಾರಿ ಬಳಸುವ ಪ್ಲಾಸ್ಟಿಕ್‌ ಉತ್ಪಾದಿಸದಂತೆ ಕೈಗಾರಿಕೆಗಳಿಗೆ ಆದೇಶ ನೀಡಬೇಕು. ಈಗಾಗಲೇ ಮಳಿಗೆಗಳಲ್ಲಿ ಖರೀದಿಸಿಟ್ಟ, ಕಾರ್ಖಾನೆಗಳಲ್ಲಿ ತಯಾರಿಸಿಟ್ಟ ತೆಳು ಪ್ಲಾಸ್ಟಿಕ್‌ನ ವಿಲೇವಾರಿ ಹೇಗೆ? ಪ್ಲಾಸ್ಟಿಕ್‌ನ ಪರ್ಯಾಯ ಬಳಕೆಯ ಪರಿಸರ ಸಹ್ಯ ಸಾಧನಗಳ ಸಂಖ್ಯೆ ಹೆಚ್ಚಾಗಬೇಕು.

ಹಾಲಿನ ತೊಟ್ಟೆ
ಮರಳಿ ಕೊಡಿ
ಹಾಲಿನ ಖಾಲಿ ತೊಟ್ಟೆಗಳನ್ನು ಹಾಲು ವಿತರಿಸಿದವರ ಬಳಿಯೇ ಗ್ರಾಹಕರು ನೀಡಬಹುದು. ಇದನ್ನು ಕೆಎಂಎಫ್ ವತಿಯಿಂದ ಮರುಬಳಕೆ ವಸ್ತು ತಯಾರಿಸುವ ಸಂಸ್ಥೆಗೆ ನೀಡಲಾಗುವುದು. ಯಾವುದೇ ಏಜೆಂಟರು ಖಾಲಿ ತೊಟ್ಟೆ ಪಡೆಯದಿದ್ದರೆ ಸಂಸ್ಥೆಯ ಗಮನಕ್ಕೆ ತರಬಹುದು.
-ರವಿರಾಜ್‌ ಹೆಗ್ಡೆ,
ಅಧ್ಯಕ್ಷರು, ಕೆಎಂಎಫ್

ಜಾಗೃತಿ
ಪ್ಲಾಸ್ಟಿಕ್‌ ತ್ಯಾಜ್ಯ ಕೊಳ್ಳುವುದಿಲ್ಲ ಎನ್ನುವ ತಿರಸ್ಕಾರ ಇಲ್ಲ. ಮರುಬಳಕೆಗಾಗದ ಪ್ಲಾಸ್ಟಿಕ್‌ ನೀಡಬೇಡಿ ಎನ್ನುವ ಮೂಲಕ ಮನೆ ಮನೆಗಳಲ್ಲಿ ಕಸ ಸಂಗ್ರಹ ವೇಳೆ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಡಿ, ಹೊಟೇಲ್‌, ದೇವಸ್ಥಾನ, ಛತ್ರದವರ ಸಭೆ ಕರೆದು ಸೂಚನೆ ಕೊಡಲಾಗಿದೆ. ದಾಳಿ ಮಾಡಲಾಗುತ್ತಿದೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next