ಕಲಬೆರಕೆ ಅಡಿಕೆ ಹಳೆ ವಿಷಯ, ಈಗ ನಕಲಿ ಅಡಿಕೆಯೂ ವಿದೇಶಗಳಿಂದ ಭಾರತದ ಮಾರುಕಟ್ಟೆ ಪ್ರವೇಶಿಸತೊಡಗಿದೆ. ಅಡಿಕೆಯನ್ನೇ ಹೋಲುವಂತಹ ನಕಲಿ ಅಡಿಕೆ ಭಾರತದ ಮಾರುಕಟ್ಟೆಯಲ್ಲಿ ಸೇರಿಕೊಂಡಿರುವುದು ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಹಾಗೂ ಗ್ರಾಹಕರೆಲ್ಲರಲ್ಲೂ ತಲೆನೋವು ಸೃಷ್ಟಿಸಬಹುದು.
Advertisement
ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಲದಲ್ಲಿ ಲಾರಿಯಲ್ಲಿ ಸಾಗಾಟ ಮಾಡುವಾಗ ಈ ಅಡಿಕೆ ಪತ್ತೆಯಾಗಿದೆ. ಸುಮಾರು 950 ಕಿಲೋ ಅಡಿಕೆಯನ್ನು ಕಸ್ಟಂಸ್ ಪ್ರಿವೆಂಟಿವ್ ಯುನಿಟ್‌ನವರು ಪತ್ತೆ ಮಾಡಿದ್ದು, ಅದರ ಗುಣಮಟ್ಟ ಪರಿಶೀಲನೆಗೆ ಮಾದರಿಯನ್ನು ಮಂಗಳೂರಿನ ಅಡಿಕೆ ಸಂಶೋಧನ ಪ್ರತಿಷ್ಠಾನಕ್ಕೆ ಕಳುಹಿಸಿದ್ದಾರೆ. ಇದರ ಗುಣಮಟ್ಟ ಪರಿಶೀಲನೆಗೆ ತೊಡಗಿಸಿ ಕೊಂಡಾಗ ತಜ್ಞರಿಗೆ ಇದು ನಿಜವಾದ ಅಡಿಕೆಯಲ್ಲ, ಅದನ್ನೇ ಹೋಲುವಂತಹ ನಕಲಿ ಅಡಿಕೆ ಎನ್ನುವುದು ಗೊತ್ತಾಗಿದೆ.
ಈ ಅಡಿಕೆಗೆ ಕಂದು ರೀತಿಯ ಒಳಭಾಗದ ವಿಶಿಷ್ಟ ರಚನೆ ಇಲ್ಲ, ಒಳಭಾಗ ಪೂರ್ತಿ ಬಿಳಿ ಬಣ್ಣ ಇದೆ ಹಾಗೂ ದೊರಗು ರಚನೆ ಇಲ್ಲ, ಅಡಿಕೆ ಒಳಗೆ ಮಧ್ಯ ಭಾಗ ತಿರುಳೂ ಇಲ್ಲ. ಹೊರಭಾಗಕ್ಕೆ ಅಡಿಕೆ ಚೊಗರಿನಿಂದ ಮುಳುಗಿಸಿ ಒಣಗಿಸಿದ ಹಾಗಿದೆ. ಮೇಲ್ನೋಟಕ್ಕೆ ಇದು ಕೆಂಪಡಿಕೆಯನ್ನೇ ಹೋಲುತ್ತದೆ, ಆದರೆ ಅಡಿಕೆಗಿಂತ ಗಟ್ಟಿಯಾಗಿದೆ. ಹಾಗಾಗಿ ನಮ್ಮ ದೇಶದಲ್ಲಿ ಬೆಳೆಯದ ಬೇರೆಯೇ ಯಾವುದೋ ಕಾಯಿ ಇರಬಹುದು ಎಂದು ಪ್ರತಿಷ್ಠಾನದವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಮಾದರಿಯನ್ನು ಖ್ಯಾತ ಆಯುರ್ವೇದ ವೈದ್ಯರ ಗಮನಕ್ಕೆ ತರಲಾಗಿದೆ, ಅಡಿಕೆ ತಜ್ಞ ಬದನಾಜೆ ಶಂಕರ ಭಟ್ ಅವರಲ್ಲೂ ತೋರಿಸಲಾಗಿದೆ, ಅವರು ಅದರ ರುಚಿಯನ್ನೂ ನೋಡಲು ಯತ್ನಿಸಿದ್ದಾರೆ, ಯಾವುದೇ ರುಚಿ ಗೊತ್ತಾಗಿಲ್ಲ. ಹಾಗಾಗಿ ಯಾರಿಗೂ ಈ ಕಾಯಿ ಯಾವುದರದ್ದು ಎನ್ನುವುದು ಇದುವರೆಗೂ ತಿಳಿದು ಬರದಿರುವುದು ಕುತೂಹಲಕ್ಕೆ ಕಾರಣ. ಬಂದ ಮಾದರಿಯಲ್ಲಿ ತುಸು ಹಳೆಯದಾದ ಕೆಂಪಡಿಕೆಯನ್ನು ಇದು ಹೋಲುತ್ತದೆ, ಬಣ್ಣ ಮಾಸಿಕೊಂಡಿದೆ, ಅಲ್ಲಲ್ಲಿ ಚಿಕ್ಕ ಚಿಕ್ಕ
ರಂಧ್ರಗಳೂ ಇವೆ.
Related Articles
ಪ್ರಸ್ತುತ ನಕಲಿ ಅಡಿಕೆಯನ್ನು ಕಸ್ಟಂಸ್‌ನವರು ಪಶ್ಚಿಮ ಬಂಗಾಲದ ಅಲಿಪುರುದ್ವಾರ್ ಎಂಬಲ್ಲಿಂದ ವಶಪಡಿಸಿಕೊಂಡಿದ್ದಾರೆ. ಇದು ಉತ್ತರಕ್ಕೆ ಭೂತಾನ್, ಪಶ್ಚಿಮಕ್ಕೆ ಬಾಂಗ್ಲಾದೇಶ ಗಡಿಯಾಗಿರುವ ಪ್ರದೇಶ. ಹಾಗಾಗಿ ಪೂರ್ವ ಏಷ್ಯಾದ ಯಾವುದೋ ದೇಶದಿಂದ ಬಾಂಗ್ಲಾ ಮೂಲಕ ಭಾರತ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ತಜ್ಞ ರು ತಿಳಿಸುತ್ತಾರೆ.
Advertisement
ಕಳಪೆ ಗುಣಮಟ್ಟದ ಅಡಿಕೆಯನ್ನು ಒಳ್ಳೆಯದರ ಜತೆ ಸೇರಿಸುವುದು ನೋಡಿದ್ದೇನೆ. ತೀರಾ ಕಳಪೆ ಅಡಿಕೆಯ ಪುಡಿಯನ್ನು ಒಳ್ಳೆಯದರ ಜೊತೆ ಸೇರಿಸುವುದೂ ಇದೆ. ಆದರೆ ಈ ರೀತಿಯ ನಕಲಿ ಅಡಿಕೆ ಬಗ್ಗೆ ನಮಗೆ ಇದುವರೆಗೆ ವರದಿ ಬಂದಿಲ್ಲ. ಇದರ ಬಗ್ಗೆ ಸಂಶೋಧನೆ ಆಗಬೇಕಿದೆ.-ಡಾ| ಬಾಲಚಂದ್ರ ಹೆಬ್ಬಾರ್, ನಿರ್ದೇಶಕರು, ಸಿಪಿಸಿಆರ್‌ಐ ಕಾಸರಗೋಡು ಅರಣ್ಯ ಇಲಾಖೆ ಸಂಶೋಧಿಸಬೇಕು
ಇದು ಅಡಿಕೆಯೇ ಅಲ್ಲ, ಮೇಲ್ನೋ ಟಕ್ಕೆ ಕೆಂಪಡಿಕೆಯಂತಿದೆ. ಇದನ್ನು ಮೊದಲ ಬಾರಿಗೆ ನೋಡುತ್ತಿರುವುದು. ಇದು ನಮ್ಮ ದೇಶದಲ್ಲಿ ಆಗುವಂತಹ ಯಾವುದೇ ಕಾಯಿಯಂತಿಲ್ಲ, ಆಯುರ್ವೇದ, ಅಡಿಕೆ ತಜ್ಞರು ಪರಿಶೀಲಿಸಿದರೂ ಗೊತ್ತಾಗಲಿಲ್ಲ, ಇನ್ನು ಏನಿದ್ದರೂ ಅರಣ್ಯ ಇಲಾಖೆಯವರು ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಿದೆ.
-ಕೇಶವ ಭಟ್, ಅಡಿಕೆ ಸಂಶೋಧನ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು – ವೇಣುವಿನೋದ್ ಕೆ.ಎಸ್.