Advertisement

ನಂಬರ್‌ ಪ್ಲೇಟ್‌ ನಕಲಿ ದಂಧೆಗಿಲ್ಲ ಬ್ರೇಕ್‌!

09:39 AM Mar 19, 2020 | mahesh |

ಉಡುಪಿ: ಒಂದೆಡೆ ಹೊಸ ವಾಹನಗಳ ಅಬ್ಬರ; ಮತ್ತೂಂದೆಡೆ ಸೆಕೆಂಡ್‌ ಹ್ಯಾಂಡ್‌ ವಾಹನಗಳ ದಂಧೆ. ಈ ಎರಡರ ನಡುವೆ ಖದೀಮರು ನಂಬರ್‌ ಪ್ಲೇಟ್‌ಗಳನ್ನು ತಿರುಚುವ ಮೂಲಕ ಜನರನ್ನು ವಂಚಿಸಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಈ ನಕಲಿ ಮಾರಾಟ ಜಾಲ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ನಡೆಯುತ್ತಿದೆ. ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಿಯಮ ಉಲ್ಲಂಫಿಸುವವರಿಗೆ ನೇರವಾಗಿ ನೋಟಿಸ್‌ ಬರುವ ಕ್ರಮ ಪ್ರಾರಂಭವಾದಾಗಿನಿಂದ ನಕಲಿ ನಂಬರ್‌ ಪ್ಲೇಟ್‌ ಪ್ರಕರಣಗಳೂ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

Advertisement

ಮಣಿಪಾಲದ ಮಹಿಳೆಗೆ ಬೆಂಗಳೂರಿನಿಂದ ನೋಟಿಸ್‌
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲದ ಮಹಿಳೆ
ಯೋರ್ವರಿಗೆ ಬೆಂಗಳೂರು ನಗರ ಟ್ರಾಫಿಕ್‌ ಠಾಣೆಯಿಂದ ನೋಟಿಸ್‌ ಬಂತು. ನೋಟಿಸ್‌ನಲ್ಲಿದ್ದ ಸ್ಕೂಟರ್‌ ಹೆಸರು ಹೋಂಡಾ ಡಿಯೋ ಕೆಎ 20 ಇಕ್ಯೂ 7181. ನೋಟಿಸ್‌ ಪಡೆದ ಮಹಿಳೆಯ ವಾಹನ ಟಿವಿಎಸ್‌ ಝೆಸ್ಟ್‌. ಆದರೆ ವಾಹನ ಸಂಖ್ಯೆ ಅದೇ! ಮಹಿಳೆ ಮಾತ್ರ ತಾನು ಮಣಿಪಾಲ ಬಿಟ್ಟು ಬೇರೆ ಎಲ್ಲಿಗೂ ವಾಹನ ತೆಗೆದು ಕೊಂಡು ಹೋಗಿಲ್ಲ ಅನ್ನುತ್ತಿದ್ದಾರೆ.ಇಂತಹ ಘಟನೆಗಳು ಇದು ಮೊದಲೇನಲ್ಲ.

ನಕಲಿ ಮಾರಾಟ ಜಾಲ ಸಕ್ರಿಯ
ಕಳವು ಮಾಡಿದ ವಾಹನಗಳಿಗೆ ಈಗ ಇರುವ ಚಾಸಿಸ್‌ ಸಂಖ್ಯೆಯ ದಾಖಲೆ ಗಳನ್ನು ವಿರೂಪಗೊಳಿಸುವುದು ಒಂದು ವಿಧವಾದರೆ, ಮತ್ತೂಂದೆಡೆ ಅಸ್ತಿತ್ವದಲ್ಲಿ ರುವ ದಾಖಲೆಗಳನ್ನು ಆಧರಿಸಿ ಚಾಸಿಸ್‌ ಸಂಖ್ಯೆಯನ್ನು ಬದಲಿಸಿ ಮಾರಾಟ ಮಾಡುವ ಜಾಲವೂ ಸಕ್ರಿಯವಾಗಿದೆ. ದಂಧೆಕೋರರು ಹಳೆಯ ವಾಹನಗಳ ಚಾಸಿಸ್‌ ಅನ್ನು ನವೀಕರಿಸಿ, ಅನಂತರ ನಕಲಿ ನಂಬರ್‌ ಪ್ಲೇಟ್‌ ತಯಾರು ಮಾಡುತ್ತಾರೆ. ವಾಹನದ ದಾಖಲೆಗಳು, ನಂಬರ್‌ ಪ್ಲೇಟ್‌, ಚಾಸಿಸ್‌ ಸಂಖ್ಯೆ ಮತ್ತು ಎಂಜಿನ್‌ ಸಂಖ್ಯೆಗಳನ್ನೂ ಇದೇ ರೀತಿ ನಕಲು ಮಾಡುವ ಜಾಲವೂ ಸಕ್ರಿಯವಾಗಿದೆ.

ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಅಸ್ತ್ರ
ನಂಬರ್‌ ಪ್ಲೇಟ್‌ಗಳನ್ನು ಬದಲಾವಣೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಒಂದೇ
ವಿನ್ಯಾಸವಿರುವ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಜಾರಿಗೆ ತರಲಾಗಿತ್ತು. ಅಲ್ಯೂ ಮೀನಿಯಂನಿಂದ ತಯಾರಿಸಲಾದ ಪ್ಲೇಟ್‌ ಇದಾಗಿದ್ದು, ವಾಹನದ ನೋಂದಣಿ ಸಂಖ್ಯೆಯ ಜತೆಗೆ ಪ್ರತೀ ಪ್ಲೇಟ್‌ನಲ್ಲೂ 7 ಅಂಕಿಗಳ ವಿಶಿಷ್ಟ ಲೇಸರ್‌ ಕೋಡ್‌ ಇರುತ್ತದೆ. ಒಂದುವೇಳೆ ಎಡವಟ್ಟಾದರೆ ಆರ್‌ಟಿಒ ಕಚೇರಿಯಿಂದಲೇ ಹೊಸ ನಂಬರ್‌ ಪ್ಲೇಟ್‌ ಪಡೆಯಬೇಕಾಗುತ್ತದೆ.

ಐಷಾರಾಮಿ ವಾಹನಗಳಲ್ಲೂ ನಕಲಿ
ಐಷಾರಾಮಿ ವಾಹನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ತೆರಿಗೆ ತಪ್ಪಿಸುವ ಉದ್ದೇಶದಿಂದ ನಕಲಿ ನಂಬರ್‌ ಪ್ಲೇಟ್‌ಗಳನ್ನು ಬಳಸುವವರು ಇದ್ದಾರೆ. ಪೊಲೀಸರು ಐಷಾರಾಮಿ ವಾಹನಗಳನ್ನು ಹೆಚ್ಚಾಗಿ ತಪಾಸಣೆ ಮಾಡುವುದಿಲ್ಲ ಎಂಬುದು ಅಂಥವರ ಭ್ರಮೆ. ಹೊಸ ಕಾರು ಖರೀದಿಸಿದಾಗ ಶೋರೂಂನಲ್ಲಿ ತಾತ್ಕಾಲಿಕ ನಂಬರ್‌ ಪ್ಲೇಟ್‌ ನೀಡುತ್ತಾರೆ. ಒಂದು ತಿಂಗಳವರೆಗೆ ಇದರ ಅವಧಿ ಇರುತ್ತದೆ. ಅನಂತರ ಹೊಸ ಸಂಖ್ಯೆ ಪಡೆಯಬೇಕಾಗುತ್ತದೆ. ಆದರೆ ಹೆಚ್ಚಿನವರು ಇದನ್ನು ಮಾಡದೆ ನಕಲಿಯ ಮೊರೆ ಹೋಗುತ್ತಾರೆ.

Advertisement

ನಕಲಿ ವಾಹನ ಸಂಖ್ಯೆ ಅಥವಾ ವಾಹನ ಸಂಖ್ಯೆಯ ಅಸ್ಪಷ್ಟತೆದಿಂದಾಗಿ ಈ ರೀತಿ ತಪ್ಪಾಗಿಯೂ ನೋಟಿಸ್‌ ಬರಬಹುದು. ಅದರಲ್ಲಿ ಸೂಚಿಸಿರುವ ಸಂಖ್ಯೆಗೆ ಕರೆ ಮಾಡಿ ದಾಖಲೆ ಸಹಿತ ವಿವರಣೆ ನೀಡಿದರೆ ಉತ್ತಮ. ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ.
– ರಾಮಕೃಷ್ಣ ರೈ , ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

- ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next