Advertisement

ನಕಲಿ ನೋಟು ಚಲಾವಣೆ: ಯುವ ಜೋಡಿ ಬಂಧನ

03:06 AM Sep 19, 2019 | mahesh |

ಕಾಪು: ಐಷಾರಾಮಿ ಕಾರಿನಲ್ಲಿ ಬಂದು 200 ರೂ. ಮುಖಬೆಲೆಯ ನಕಲಿ ನೋಟನ್ನು ಚಲಾಯಿಸಿ ಬೆಳ್ಮಣ್‌ ಪರಿಸರದ ಅಂಗಡಿಯವರನ್ನು ವಂಚಿಸಿ ಪರಾರಿಯಾಗಲೆತ್ನಿಸಿದ ಯುವ ಜೋಡಿಯನ್ನು ಕಾಪು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಬುಧವಾರ ಕಾಪುನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ದಾವಣಗೆರೆ ಮೂಲದ ಯುವಕ ಮತ್ತು ಯುವತಿ ನಿಟ್ಟೆಯಿಂದ ಬೆಳ್ಮಣ್‌ವರೆಗಿನ ಅಂಗಡಿಗಳಿಗೆ ತೆರಳಿ ಝೆರಾಕ್ಸ್‌ ಮಾಡಿದ್ದ ನೋಟನ್ನು ನೀಡಿ ವಂಚಿಸಿದ್ದಾರೆ. ಆ ಜೋಡಿಯು ಲೆಮಿನಾ ಕ್ರಾಸ್‌, ನಿಟ್ಟೆ, ಹಾಳೆಕಟ್ಟೆ ಕಲ್ಯ, ಕೆದಿಂಜೆ ಮತ್ತು ಬೆಳ್ಮಣ್‌ ಪರಿಸರದ ಅಂಗಡಿಗಳಿಗೆ ಈ ನಕಲಿ ನೋಟುಗ ಳನ್ನು ನೀಡಿ, ಸಣ್ಣ ಮೊತ್ತದ ತಿಂಡಿ ಖರೀದಿಸುತ್ತಿದ್ದರು ಎನ್ನಲಾಗಿದೆ.

ಪ್ರಕರಣದ ವಿವರ
ಬೆಂಗಳೂರು ನೋಂದಣಿಯ ಕಾರಿನಲ್ಲಿ ಬ್ರಿಜಾ ಕಾರಿನಲ್ಲಿ ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಇವರು ಲೆಮಿನಾ ಕ್ರಾಸ್‌ನ ಅಂಗಡಿಗೆ ತೆರಳಿ ಝೆರಾಕ್ಸ್‌ ಮಾಡಿದ್ದ ನೋಟ್‌ ನೀಡಿ ತಿಂಡಿ ಖರೀದಿಸಿದ್ದರು. ಮೋಸ ಹೋದ ವಿಷಯ ತಿಳಿದು ಮಾಜಿ ಜಿ.ಪಂ. ಸದಸ್ಯ ಸುಪ್ರೀತ್‌ ಶೆಟ್ಟಿ ಕೆದಿಂಜೆ ಅವರ ಗಮನಕ್ಕೆ ತರಲಾಯಿತು. ಬಳಿಕ ಕಾರಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ತೆರಳಿದಂತೆ ಕಾರ್ಕಳ – ಬೆಳ್ಮಣ್‌ ರಸ್ತೆಯ ಕೆಲವು ಅಂಗಡಿಗಳಲ್ಲೂ ಇದೇ ರೀತಿ ವಂಚಿಸಿರುವುದು ತಿಳಿದು ಬಂತು.

ಬಳಿಕ ಸುಪ್ರೀತ್‌ ಶೆಟ್ಟಿ ನೇತೃತ್ವದ ಯುವಕರ ತಂಡ ಜೋಡಿಯಿದ್ದ ಕಾರನ್ನು ಬೆನ್ನಟ್ಟಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೂ ತಿಳಿಸಲಾಯಿತು. ಪಡುಬಿದ್ರಿಯಲ್ಲಿ ಪೊಲೀಸರನ್ನು ಕಂಡು ಆರೋಪಿಗಳು ವಾಹನವನ್ನು ಹೆಜಮಾಡಿಯತ್ತ ಕೊಂಡೊಯ್ದಿದ್ದು, ಅಲ್ಲಿ ಡೈವರ್ಷನ್‌ ತೆಗೆದು ಕಾಪುವಿನತ್ತ ತೆರಳಿತ್ತು.

ಕೂಡಲೇ ಪಡುಬಿದ್ರಿ ಪೊಲೀಸರು ಕಾಪು ಠಾಣೆಗೆ ಮಾಹಿತಿ ನೀಡಿದರು. ಕಾಪು ಹೆದ್ದಾರಿಯಲ್ಲಿ ಬಂದ ಕಾರು ಪೊಲಿಪು ಮಸೀದಿ ಬಳಿಯಿಂದ ರಾಂಗ್‌ ಸೈಡ್‌ನ‌ಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಬಿಕ್ಕೋ ಸಂಸ್ಥೆಯ ಬಳಿ ಸ್ಥಳೀಯರು ಮತ್ತು ಪೊಲೀಸರು ಸೇರಿ ಕಾರು ಸಹಿತ ಆರೋಪಿಗಳನ್ನು ತಡೆದರು.

Advertisement

ಪರಾರಿಯಾಗುವ ಯತ್ನದಲ್ಲಿ ಆರೋಪಿಗಳ ಕಾರು ಕೆಲವು ವಾಹನ ಹಾಗೂ ಪೊಲೀಸ್‌ ಬ್ಯಾರಿಕೇಡ್‌ಗಳಿಗೂ ಢಿಕ್ಕಿ ಹೊಡೆಸಿದ್ದರು. ಕೆದಿಂಜೆಯಲ್ಲಿ ಚಲಾಯಿಸಿದ ನೋಟನ್ನು ಸುಪ್ರೀತ್‌ ಶೆಟ್ಟಿ ಬ್ಯಾಂಕಿಗೆ ಕೊಂಡೊಯ್ದು ಪರಿಶೀಲಿಸಿದಾಗ ಅದು ಅಸಲಿಯಲ್ಲ ಎಂಬುದು ತಿಳಿಯಿತು. ಜೋಡಿಯನ್ನು ಕಾಪು ಪೊಲೀಸರು ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೋಜಿಗಾಗಿ ಕೃತ್ಯ?
ಈ ಜೋಡಿಯು ಮೋಜಿಗಾಗಿ ಈ ಕೃತ್ಯವೆಸಗಿರಬೇಕು ಎಂದು ಶಂಕಿಸಲಾಗಿದೆ. ನೋಟಿನ ಕಲರ್‌ ಪ್ರಿಂಟ್‌ ತೆಗೆದು ಅಂಗಡಿಗಳಿಗೆ ನೀಡಿ ಹಣ ಪಡೆಯಲು ಮತ್ತು ಅಂಗಡಿಯವರ ಚಡಪಡಿಕೆ ನೋಡಿ ಖುಷಿಪಡುತ್ತಿದ್ದರು. ವಸ್ತು ಖರೀದಿಸಿ ಉಳಿದ ಹಣದಲ್ಲಿ ಕಾರಿಗೆ ಇಂಧನ ತುಂಬಿ ಸುತ್ತಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next