ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ ಹತ್ತಾರು ಸುದ್ದಿಗಳು, ವದಂತಿಗಳು ಹರಿದಾಡುತ್ತದೆ. ಇದರಲ್ಲಿ ಬಹುತೇಕ ಫಾರ್ವರ್ಡ್ ಆಗಿ ವಾಟ್ಸಾಪ್ ಗಳಲ್ಲಿ ಹರಿದಾಡುತ್ತದೆ. ಇದನ್ನೇ ಸತ್ಯವೆಂದು ಕೆಲವೊಂದಿಷ್ಟು ಜನ ನಂಬುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಬಗ್ಗೆ ನಾನಾ ಗಾಸಿಪ್ ಗಳು ಹರಿದಾಡುತ್ತದೆ. ಇದರಿಂದ ಕಲಾವಿದರ ಮನಸ್ಸಿಗೆ ನೋವಾಗುತ್ತದೆ. ಇಂಥದ್ದೇ ಒಂದು ಘಟನೆ ಸ್ಯಾಂಡಲ್ ವುಡ್ ವಲಯದಲ್ಲಿ ಹರಿದಾಡಿದೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಆರೋಗ್ಯದ ಕುರಿತಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ʼಪ್ರಜ್ವಲ್ ದೇವರಾಜ್ ಇನ್ನಿಲ್ಲʼ ಎಂದು ಬರೆದಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಹರಿದಾಡಿ, ಎಲ್ಲೆಡೆ ಶೇರ್ ಆಗಿದೆ.
ಇದನ್ನು ನೋಡಿದ ಕೆಲವರು ದಿಢೀರನೇ ಆಘಾತಕ್ಕೆ ಒಳಗಾಗಿದ್ದಾರೆ. ಏನಿದು ನ್ಯೂಸ್ ಅಂಥ ಒಮ್ಮೆಗೆ ಶಾಕ್ ಆಗಿದ್ದಾರೆ. ಆದರೆ ಈ ಫೋಟೋ ವೈರಲ್ ಆದ ಕೆಲವೇ ನಿಮಿಷದಲ್ಲಿ ಅಸಲಿ ಸಂಗತಿ ಬಯಲಾಗಿದೆ.
ವೈರಲ್ ಆಗುತ್ತಿರುವ ಫೋಟೋ ʼವೀರಂʼ ಸಿನಿಮಾದ್ದು ಎನ್ನಲಾಗುತ್ತಿದ್ದು, ಕೆಲವರು ಈ ಫೋಟೋವನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪ್ರಜ್ವಲ್ ದೇವರಾಜ್ ಅವರಿಗೆ ಏನು ಆಗಿಲ್ಲ. ದೇವರ ದಯೆಯಿಂದ ಅವರು ಚೆನ್ನಾಗಿಯೇ ಇದ್ದಾರೆ. ಇದು ಕಿಡಿಗೇಡಿಗಳು ಹಬ್ಬಿಸಿದ ಸುಳ್ಳು ಸುದ್ದಿಯೆಂದು ನಟನ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಈ ರೀತಿ ಕೃತ್ಯವೆಸಗಿದವರ ವಿರುದ್ಧ ನಟನ ಕುಟುಂಬ ದೂರು ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.