ಉಡುಪಿ/ ಪಡುಬಿದ್ರಿ/ಉಳ್ಳಾಲ: ಟೋಲ್‌ಗೇಟ್‌ಗಳಲ್ಲಿ ಒಮ್ಮೆ ಶುಲ್ಕ ಪಾವತಿ ಮಾಡಿ 12 ತಾಸಿನೊಳಗೆ ಮರಳಿದರೆ ಮತ್ತೆ ಟೋಲ್ ತೆರಬೇಕೆಂದಿಲ್ಲವೆ? “ಇಲ್ಲ’ ಎಂಬುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಅವರೇ ಹೇಳಿದ್ದಾರೆ ಎಂಬುದಾಗಿ ವಾಟ್ಸಾಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆಯಾಗುತ್ತಿದೆ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳನ್ನು ಪ್ರಶ್ನಿಸಿದರೆ, ವಾಟ್ಸಾಪ್‌ನಲ್ಲಿ ಬಂದ ಸಂದೇಶಗಳನ್ನು ನಂಬಲಾಗದು. ನಮಗೆ ಅಧಿಕೃತ ಸಂದೇಶ ಬಾರದೆ ಏನೂ ಹೇಳುವುದಿಲ್ಲ ಎಂದಿದ್ದಾರೆ. “ಇಂತಹ ಮಾಹಿತಿ ನಮಗೂ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಪ್ರಕಾರ ಇದು ಸುಳ್ಳು ಸಂದೇಶ’ ಎನ್ನುತ್ತಾರೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್.
ಎನ್‌ಎಚ್‌ಎಐ ಹೆದ್ದಾರಿ ಚತುಃಷ್ಪಥ ಯೋಜನೆಯ ಯೋಜನಾ ನಿರ್ದೇಶಕ ವಿಜಯ್ ಸ್ಯಾಮ್ಸನ್ ಮಾತನಾಡಿ, ಇಂಥ ಆದೇಶ ನಮಗೆ ಬಂದಿಲ್ಲ ಎಂದಿದ್ದಾರೆ.
ಹೆಜಮಾಡಿ, ತಲಪಾಡಿ ಹಾಗೂ ಸಾಸ್ತಾನ ನವಯುಗ ಟೋಲ್ ಪ್ಲಾಝಾಗಳ ಪ್ರಬಂಧಕ ಶಿವಪ್ರಸಾದ್ ರೈ, ಈ ಬಗ್ಗೆ ಎಲ್ಲೂ ನಾವು ಹೆದ್ದಾರಿಯಲ್ಲಿ ಸಾರ್ವಜನಿಕರಿಗಾಗಿ ಪ್ರಕಟನೆ ಹಾಕಿಲ್ಲ. ಟೋಲ್ ಪಾವತಿಸಿ ಪಡೆವ ರಶೀದಿಯಲ್ಲೂ ಕೇವಲ ಪಾವತಿಸಿದ ಸಮಯ ಛಾಪಿಸಲಾಗಿರುತ್ತದೆ. ಒಂದು ಕಡೆಯಿಂದ ತೆರಳಿ 15 ನಿಮಿಷಗಳಲ್ಲೇ ವಾಪಾಸು ಬಂದರೂ ಮರು ಸುಂಕ ಪಾವತಿಸಬೇಕು. ಅದೇ ವೇಳೆ ಎರಡೂ ಕಡೆಯ ಪ್ರಯಾಣಕ್ಕಾಗಿ ಸುಂಕ ಪಾವತಿಸಿದ್ದರೆ ಪಾವತಿಸಿದ ಸಮಯ ಹಾಗೂ ಅದು ಅಲ್ಲಿಂದ 24 ಗಂಟೆಗಳಿಗೆ ಅನ್ವಯವಾಗಿರುವುದಾಗಿ ಮುದ್ರಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಶನಿವಾರ ಬೆಳಗ್ಗಿನಿಂದಲೇ ಟೋಲ್‌ಗೇಟ್‌ಗೆ ಸಂಬಂಧಿಸಿದಂತೆ ಈ ವಾಟ್ಸಾéಪ್ ಸಂದೇಶ ಹರಿದಾಡುತ್ತಿತ್ತು. ತಲಪಾಡಿ ಟೋಲ್ ಗೇಟ್‌ನಲ್ಲಿ ಶನಿವಾರ ಸಂಜೆ ವೇಳೆಗೆ ಕಾರು ಚಾಲಕರೊಬ್ಬರು ಈ ಬಗ್ಗೆ ಟೋಲ್ ಸಿಬಂದಿಯಲ್ಲಿ ಮಾಹಿತಿ ಕೇಳಿದ್ದು, ಉಳಿದಂತೆ ಯಾರೂ ತಗಾದೆ ತೆಗೆದಿಲ್ಲ ಎಂದು ತಲಪಾಡಿಯ ಟೋಲ್ ಸಿಬಂದಿ ತಿಳಿಸಿದ್ದಾರೆ.