ಮಡಿಕೇರಿ: ತಾನು ಐಟಿ ಅಧಿಕಾರಿ ಎಂದು ಹೇಳಿಕೊಂಡು ವ್ಯಾಪಾರಿಯೊಬ್ಬರಿಂದ ಹಣ ಲಪಟಾ ಯಿಸಿದ ಸಿನಿಮೀಯ ಮಾದರಿಯ ಪ್ರಕರಣವೊಂದು ಗೋಣಿಕೊಪ್ಪಲಿನಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗೋಣಿಕೊಪ್ಪಲಿನ ಪಾಲಿಬೆಟ್ಟ ರಸ್ತೆ ಯಲ್ಲಿರುವ ವ್ಯಾಪಾರ ಮಳಿಗೆಯೊಂದಕ್ಕೆ ಹಳದಿ ಬಣ್ಣದ ಸಂಖ್ಯಾ ಫಲಕದ ಬೆಂಗಳೂರು ನೋಂದಣಿಯ ಕಾರಿನಲ್ಲಿ ಬಂದ ಇಳಿ ವಯಸ್ಸಿನ ವ್ಯಕ್ತಿ ತಾನು ಐಟಿ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ.
ದಾಖಲೆಗಳನ್ನು ಪರಿಶೀಲಿಸ ಬೇಕಾಗಿದ್ದು, ಇಲ್ಲಿ ಯಾರೂ ಇರಬಾರದು ಮಾಲಕರು ಮಾತ್ರ ಇರಬೇಕೆಂದು ತಾಕೀತು ಮಾಡಿದ್ದಾನೆ. ಈತನ ಸೂಚನೆಯಂತೆ ಅಲ್ಲಿದ್ದವರೆಲ್ಲರು ಹೊರ ಹೋಗಿದ್ದಾರೆ. ಮಾಲಕ ಮಾತ್ರ ತನ್ನ ಬಳಿ ಇದ್ದ ಎಲ್ಲ ದಾಖಲೆಗಳನ್ನು ನಕಲಿ ಅಧಿಕಾರಿಗೆ ನೀಡಿದ್ದಾರೆ. ಐಟಿ ಅಧಿಕಾರಿಯಂತೆಯೇ ದಾಖಲೆಗಳನ್ನು ಪರಿಶೀಲಿಸಿದ ವಂಚಕ ಲೋಪಗಳಿದೆ ಎಂದು ಹೇಳಿ 3,28,000 ರೂ. ದಂಡ ಪಾವತಿಸುವಂತೆ ರಶೀದಿಯೊಂದನ್ನು ಬರೆದು ನೀಡಿದ್ದಾನೆ.
ಇದನ್ನು ನಂಬಿದ ವ್ಯಾಪಾರಿ ತನ್ನ ಬಳಿ ಈಗ ಹಣವಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಮುಂದಿನ 5 ದಿಗಳೊಳಗೆ ಬೆಂಗಳೂರಿನ ಐಟಿಯ ಕೇಂದ್ರ ಕಚೇರಿಗೆ ಭೇಟಿ ನೀಡಿ ದಾಖಲೆಗಳೆಲ್ಲವನ್ನು ತೋರಿಸಿ ದಂಡ ಪಾವತಿಸುವಂತೆ ಸೂಚನೆ ನೀಡಿದ ನಕಲಿ ಅಧಿಕಾರಿ ಅಲ್ಲಿಂದ ತೆರಳುತ್ತಾನೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಬಂದ ವಂಚಕ ಬೆಂಗಳೂರಿಗೆ ಬರಲು ಸಾಧ್ಯವಾಗದಿದ್ದಲ್ಲಿ ಇಲ್ಲೇ ಸೆಟಲ್ ಮೆಂಟ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದ. ಈಗ ನನ್ನ ಬಳಿ ಹಣವಿಲ್ಲ, ಸ್ವಲ್ಪ ಹೊತ್ತಿನಲ್ಲಿ ಹೊಂದಿಸಿ ಕೊಡುವೆ ಎಂದು ತಿಳಿಸಿದ ವ್ಯಾಪಾರಿಯ ಮಾತಿಗೆ ಒಪ್ಪಿದ ವಂಚಕ ಒಂದು ಗಂಟೆ ಕಾಲ ಕಾದು ಕುಳಿತುಕೊಂಡಿದ್ದ. ಬೆಂಗಳೂರಿಗೆ ಹೋಗುವುದು ಕಷ್ಟಕರವೆಂದು ಭಾವಿಸಿದ ವ್ಯಾಪಾರಿ ಹೇಗೋ ಸೆಟಲ್ ಮೆಂಟ್‌ಗೆ ಬೇಕಾದ ಹಣ ಹೊಂದಿಸಿ ತಂದು ನಕಲಿ ಅಧಿಕಾರಿಗೆ ನೀಡುತ್ತಾರೆ. ಹಸುರು ಶಾಯಿಯ ಪೆನ್ನನ್ನು ಬಳಸಿ ಹಳೆಯ ರಶೀದಿಯ ಮೇಲೆ ಇನ್ನು ದಂಡ ಪಾವತಿಸುವಂತಿಲ್ಲವೆಂದು ಬರೆದ ಇಳಿ ವಯಸ್ಸಿನ ವ್ಯಕ್ತಿ ಹಣ ಪಡೆದು ಅಲ್ಲಿಂದ ಮರಳಿದ್ದ.
ನಡೆದ ವಿಚಾರವನ್ನೆಲ್ಲ ವ್ಯಾಪಾರಿ ಇತರರೊಂದಿಗೆ ಹಂಚಿಕೊಂಡಾಗ ಕಾರ್ಯಾಚರಣೆ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಈ ಕಾರಣದಿಂದ ಬೆಂಗಳೂರು ಕೇಂದ್ರ ಐಟಿ ಕಚೇರಿಗೆ ಕರೆ ಮಾಡಿ ಕೇಳಿದಾಗ ಆ ರೀತಿಯ ಯಾವುದೇ ದಾಳಿ ನಾವು ನಡೆಸಿಲ್ಲವೆಂದು ತಿಳಿದು ಬಂದಿದೆ. ಎಲ್ಲೂ ಸಂಶಯ ಬಾರದ ರೀತಿಯಲ್ಲಿ ನಡೆದುಕೊಂಡ ಇಳಿವಯಸ್ಸಿನ ವಂಚಕನ ಬಣ್ಣ ಬಯಲಾಗುವ ಹೊತ್ತಿಗೆ ಕಾಲಮಿಂಚಿ ಹೋಗಿತ್ತು. ಹಣ ಕಳೆದುಕೊಂಡ ವ್ಯಾಪಾರಿ ಪಶ್ಚಾತ್ತಾಪ ಪಟ್ಟುಕೊಂಡು ಸುಮ್ಮನಾಗಿದ್ದಾರೆ. ಇಲ್ಲಿಯವರೆಗೆ ದೂರು ದಾಖಲಾಗಿಲ್ಲವೆಂದು ತಿಳಿದು ಬಂದಿದೆ.
ತಮಿಳಿನಲ್ಲಿ ಮಾತನಾಡುತ್ತಿದ್ದ ವಂಚಕ ಬಂದ ಕಾರಿನಲ್ಲಿ ಆತ ಮತ್ತು ಚಾಲಕ ಮಾತ್ರ ಇದ್ದರು ಎನ್ನುವುದು ಸ್ಪಷ್ಟವಾಗಿದೆ. ಆತ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸಂಖ್ಯೆ ಚಾಲ್ತಿಯಲ್ಲಿ ಇಲ್ಲ ಎಂದು ಉತ್ತರ ಬರುತ್ತಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಿನಿಮೀಯ ಮಾದರಿಯಲ್ಲಿ ನಕಲಿ ಐಟಿ ಅಧಿಕಾರಿಯೊಬ್ಬ ವ್ಯಾಪಾರಿಗೆ ಪಂಗನಾಮ ಹಾಕಿರುವ ಪ್ರಕರಣ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.