Advertisement

ಈಗ “ನಕಲಿ ಸರ್ಕಾರಿ ಸುತ್ತೋಲೆ’ಸರದಿ

06:00 AM Feb 23, 2018 | Team Udayavani |

ಬೆಂಗಳೂರು: ನಕಲಿ ಪಾಸ್‌ಪೋರ್ಟ್‌,ಆಧಾರ್‌, ಡ್ರೈವಿಂಗ್‌ ಲೈಸೆನ್ಸ್‌, ಅಂಕಪಟ್ಟಿಗಳ ಜಾಲ ಇರುವುದನ್ನು ಕೇಳಿದ್ದೇವೆ. ಆದರೆ ಸರ್ಕಾರಿ ಸುತ್ತೋಲೆಗಳೇ ನಕಲಿ ಮಾಡಿ ಯಾಮಾರಿಸುವುದನ್ನು ಕೇಳಿದ್ದೀರಾ?

Advertisement

ರಾಜ್ಯಸರ್ಕಾರದ ಹಣಕಾಸು ಇಲಾಖೆಯ ಸುತ್ತೋಲೆ ಮಾದರಿಯನ್ನೇ ನಕಲು ಮಾಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಸುತ್ತೋಲೆ ಹೊರಡಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಇ- ಪ್ರಕ್ಯೂರ್‌ವೆುಂಟ್‌ ಟೆಂಡರ್‌ಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಸಹಿಯುಳ್ಳ ನಕಲಿ ಸುತ್ತೋಲೆಯನ್ನು ಫೆ.5ರಂದು ಹೊರಡಿಸಲಾಗಿದ್ದು, ಈ ಬಗ್ಗೆ ಇಲಾಖೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಕಲಿ ಸುತ್ತೋಲೆ ಪ್ರಕಟಗೊಂಡು ಬರೋಬ್ಬರಿ 12ದಿನ ಕಳೆದ ಮೇಲೆ , ಅಧಿಕಾರಿಗಳ ವಲಯದಲ್ಲಿ ಹಾಗೂ ಬೇರೆ ಬೇರೆ ಇಲಾಖೆಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿತ್ತು. ಕಡೆಗೆ ಈ ವಿಚಾರ ಖುದ್ದು ಅಪರ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ಬಂದಾಗ ಅವರೇ ದಂಗಾಗಿದ್ದಾರೆ.

ಆದರೆ, ವಾಸ್ತವದಲ್ಲಿ ಆ ರೀತಿಯ ಯಾವುದೇ ಅಧಿಕೃತ ಸುತ್ತೋಲೆಯನ್ನು ಇತ್ತೀಚೆಗೆ ಹೊರಡಿಸಿರಲಿಲ್ಲ. ಹೀಗಾಗಿ ಕೂಡಲೇ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ನಕಲಿ ಸುತ್ತೋಲೆಯ ಕುರಿತು ಸ್ಪಷ್ಟೀಕರಣ ಕೇಳಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಪೊಲೀಸ್‌ ದೂರು ನೀಡಲು ತೀರ್ಮಾನಿಸಿದ್ದಾರೆ ಎಂದು ಉನ್ನತ  ಮೂಲಗಳು ತಿಳಿಸಿವೆ.

ನಕಲಿ ಸುತ್ತೋಲೆಯಲ್ಲೇನಿದೆ?
ಐದು ಲಕ್ಷ ರೂ.ಗಳಿಗಿಂತ ಮೇಲ್ಪಟ್ಟ ಎಲ್ಲ ಟೆಂಡರ್‌ ಪ್ರಕ್ರಿಯೆಗಳು ಇ-ಪ್ರಕ್ಯೂರ್‌ವೆುಂಟ್‌ ನಡೆಸತಕ್ಕದ್ದು ಎಂದು 2012ರಲ್ಲಿ ರಾಜ್ಯಸರ್ಕಾರದ ಆದೇಶವಿದೆ. ಆದರೆ, ಫೆ. 5ರಂದು ಹೊರಡಿಸಲಾಗಿರುವ ನಕಲಿ ಸುತ್ತೋಲೆಯಲ್ಲಿ 1 ಲಕ್ಷ. ರೂಗಳಿಗಿಂತ ಮೇಲ್ಪಟ್ಟ ಎಲ್ಲ ಪ್ರಕ್ರಿಯೆಗಳನ್ನು ಇ- ಪ್ರೊಕ್ಯೂರ್‌ವೆುಂಟ್‌ ಅನ್ವಯವಾಗುತ್ತದೆ. ಈ ನಿಯಮವನ್ನು ಸಕ್ಷಮ ಪ್ರಾಧಿಕಾರಗಳು ತಪ್ಪದೇ ಪಾಲಿಸಬೇಕು ಎಂದು ಉಲ್ಲೇಖೀಸಲಾಗಿದೆ. ಅಚ್ಚರಿಯ ಸಂಗತಿಯಿಂದರೆ ಈ ಸುತ್ತೋಲೆಯಲ್ಲಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳ ಸಹಿಯಿದೆ.

ಈ ನಕಲಿ ಸುತ್ತೋಲೆ ಸಂಬಂಧ ಹಣಕಾಸು ಇಲಾಖೆ ಅಧೀನ ಕಾರ್ಯದರ್ಶಿ ಪಿ. ಎನ್‌ ಕೃಷ್ಣಮೂರ್ತಿ, ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಿದ್ದು. ಅಪರಿಚಿತ ಆರೋಪಿಗಳ ವಿರುದ್ಧ  ಐಪಿಸಿ 465 (ನಕಲಿ ದಾಖಲೆ ಸೃಷ್ಟಿ )ಐಪಿಸಿ 468, 471 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

ನಕಲಿ ಸುತ್ತೋಲೆಗೆ ಸಂಬಂಧಿಸಿದಂತೆ ಇನ್ನೂ ಹಲವು ದಾಖಲೆಗಳ ಅಗತ್ಯವಿದ್ದು ಅಧಿಕಾರಿಗಳಿಂದ ಸ್ಪಷ್ಟೀಕರಣ ಕೇಳಲಾಗಿದೆ. ಅಲ್ಲದೇ, ಯಾವ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದರಿಂದ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆಯೂ ಮಾಹಿತಿಯ ಅಗತ್ಯವಿದೆ. ಈ ಸಂಬಂಧ ಅಗತ್ಯಬಿದ್ದರೆ ಇಲಾಖೆಯ ಹಲವು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತೆವೆ. ತನಿಖೆ ಪೂರ್ಣಗೊಂಡ ಬಳಿಕವೇ ಸುತ್ತೋಲೆಯ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಝೆರಾಕ್ಸ್‌ ಪ್ರತಿ ತಿದ್ದಿರುವ ವಂಚಕರು!
ಇ -ಪ್ರಕ್ಯೂರ್‌ವೆುಂಟ್‌ಗೆ ಸಂಬಂಧಿಸಿದ ಸುತ್ತೋಲೆ ಮಾದರಿ ಝೆರಾಕ್ಸ್‌ ಪ್ರತಿ ಬಳಸಿರುವ ವಂಚಕರು 5 ಲಕ್ಷ ರೂ. ಮೊತ್ತವನ್ನು 1 ಲಕ್ಷ. ರೂಗಳಿಗೆ ಮಿತಿಗೊಳಿಸಿ ಸುತ್ತೋಲೆ ಸೃಷ್ಟಿಸಿದ್ದಾರೆ. ಈ ಸುತ್ತೋಲೆ ಅನ್ವಯ ಯಾರಾದರೂ ಅನುಕೂಲ ಪಡೆದುಕೊಂಡಿದ್ದಾರೆಯೇ? ಅಥವಾ ಯಾರದರೂ ಅಣತಿ ಮೇಲೆ ಸುತ್ತೋಲೆ ಸೃಷ್ಟಿಯಾಗಿರುವ ಅನುಮಾನವಿದೆ. ಅದರಲ್ಲಿರುವ ಕಾರ್ಯದರ್ಶಿಗಳ ಸಹಿಯ ನಕಲಿನ ಬಗ್ಗೆ ಎಫ್ಎಸ್‌ಎಲ್‌ ವರದಿಯಲ್ಲಿ ದೃಢವಾಗಬೇಕಿದೆ ಎಂದು ಅಧಿಕಾರಿ ತಿಳಿಸಿದರು.

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next