ಮಂಡ್ಯ: ಬೆಂಗಳೂರು ಮೂಲದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ದೂರದ ಸಂಬಂಧಿಯೊಬ್ಬರಿಗೆ ನಕಲಿ ಚಿನ್ನದ ನಾಣ್ಯ ನೀಡಿ 15 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಮದ್ದೂರು ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತೆಲಂಗಾಣ ರಾಜ್ಯದ ಹೈದರಾಬಾದ್‌ನ ರವೀಂದ್ರ ನಾಯಕ್ ಅವರಿಂದ ಹುಬ್ಬಳ್ಳಿ ಮೂಲದ ಶಿವ ಎಂಬುವರು 15 ಲಕ್ಷ ರೂ. ಪಡೆದು ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಿದ್ದು, ಈ ಬಗ್ಗೆ ರವೀಂದ್ರ ನಾಯಕ್ ಶನಿವಾರ ಮದ್ದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಡಿ.ರಮೇಶ್ ದೂರದ ಸಂಬಂಧಿಯಾಗಿರುವ ರವೀಂದ್ರ ನಾಯಕ್ ಆಂಧ್ರದಲ್ಲಿ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಆರೋಪಿ ಶಿವ ಕೂಡ ಕೆಲಸ ಮಾಡುತ್ತಿದ್ದನು. ಆನಂತರದಲ್ಲಿ ಶಿವ ಕೆಲಸ ಬಿಟ್ಟಿದ್ದರೂ ಸಹ ರವೀಂದ್ರ ನಾಯಕ್ ಅವರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದನು. ನಂತರದಲ್ಲಿ ರವೀಂದ್ರ ನಾಯಕ್ ಕೂಡ ಕೆಲಸ ತೊರೆದು ಕ್ಯಾಬ್ ಚಾಲಕನಾಗಿದ್ದನು.
ಕೆಲವು ದಿನಗಳ ಹಿಂದೆ ಆರೋಪಿ ಶಿವ ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ 15 ಲಕ್ಷ ರೂ. ಹಣ ಬೇಕಾಗಿದೆ. ಹಣದ ಭದ್ರತೆಗಾಗಿ 1 ಕೆ.ಜಿ. ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ತಿಳಿಸಿದ್ದನು. ಅದರಂತೆ ಮದ್ದೂರಿನ ಕೊಪ್ಪ ಮೇಲ್ಸೆತುವೆ ಬಳಿ ಬರುವಂತೆ ರವೀಂದ್ರನಾಯಕ್‌ಗೆ ಸೂಚಿಸಿದ್ದನು. ಈತನ ಮಾತನ್ನು ನಂಬಿದ ರವೀಂದ್ರ ನಾಯಕ್ ಕಳೆದ ನ. 22ರಂದು ಮದ್ದೂರು ಪಟ್ಟಣದ ಕೊಪ್ಪ ಮೇಲ್ಸೆತುವೆ ಬಳಿ ರಾತ್ರಿ 7 ಗಂಟೆ ಸಮಯದಲ್ಲಿ ಆರೋಪಿ ಶಿವನನ್ನು ಭೇಟಿ ಮಾಡಿದ
ರವೀಂದ್ರ ನಾಯಕ್, ಅವನಿಗೆ 15 ಲಕ್ಷ ರೂ. ಕೊಟ್ಟು ಚಿನ್ನದ ನಾಣ್ಯಗಳಿದ್ದ ಬ್ಯಾಗ್‌ನ್ನು ಪಡೆದುಕೊಂಡಿದ್ದಾನೆ. ಚಿನ್ನದ ನಾಣ್ಯಗಳ ಗೌಪ್ಯತೆ ಕಾಪಾಡಲು ಹಾಗೂ ಬೇರೆ ಯಾರಿಗೂ ವಿಷಯ ಗೊತ್ತಾಗದಿರುವಂತೆ ತಿಳಿಸಿದ ಶಿವ ಮೂರು ದಿನಗಳ ಬಳಿಕ ಬ್ಯಾಗ್‌ನ್ನು ತೆಗೆದು ನೋಡುವಂತೆ ಹೇಳಿ ಕಳುಹಿಸಿದ್ದಾನೆ. ಚಿನ್ನದ ನಾಣ್ಯಗಳಿದ್ದ ಬ್ಯಾಗ್‌ನೊಂದಿಗೆ ಹೈದಾ ಬಾದ್‌ಗೆ ವಾಪಸಾದ ರವೀಂದ್ರ ನಾಯಕ್ ಶಿವ ನೀಡಿದ ಸೂಚನೆಯಂತೆ ಮೂರು ದಿನಗಳ ಬಳಿಕ ಬ್ಯಾಗ್ ತೆರೆದು ಅದರಲ್ಲಿದ್ದ ನಾಣ್ಯಗಳನ್ನು ಪರಿಶೀಲಿಸಿದಾಗ ಅವು ನಕಲಿ ಚಿನ್ನದ ನಾಣ್ಯಗಳು ಎಂಬ ಸತ್ಯ ಅರಿವಾಯಿತು.
ಆನಂತರ ತಾನು ಮೋಸ ಹೋಗಿರುವ ಬಗ್ಗೆ ಡಿಸಿಪಿ ಡಿ.ರಮೇಶ್ ಅವರಿಗೆ ವಿಷಯ ತಿಳಿಸಿದ ರವೀಂದ್ರ ನಾಯಕ್, ನ್ಯಾಯಕ್ಕಾಗಿ ಅವರ ಮೊರೆ ಹೋಗಿದ್ದಾನೆ. ಅವರ ಸೂಚನೆಯಂತೆ ಮದ್ದೂರು ಪೊಲೀಸರಿಗೆ ರವೀಂದ್ರ ನಾಯಕ್ ದೂರು ನೀಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ