Advertisement

ತಾಳೆ ಹಣ್ಣಿನ ನಕಲಿ ಪಾನೀಯ ಮಾರಾಟ: ಇಲಾಖೆ  ತಪಾಸಣೆ

01:00 AM Feb 12, 2019 | Harsha Rao |

ಕಾಸರಗೋಡು: ತಮಿಳುನಾಡಿನ ತಂಡವೊಂದು ಕೃತಕ ಪಾನೀಯ ತಯಾರಿಸಿ ಚೆರ್ಕಳದಿಂದ ಕಾಂಞಂಗಾಡು ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಾರಾಟ ಮಾಡುತ್ತಿರುವುದಾಗಿ ವ್ಯಾಪಕ ದೂರುಗಳು ಕೇಳಿಬಂದಿವೆ. ಈ ಬಗ್ಗೆ  ಮಾಹಿತಿ ಲಭಿಸಿದ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೃತಕ ಪಾನೀಯವನ್ನು  ಸಾಕ್ರೀನ್‌ ಮೊದಲಾದ ರಾಸಾಯನಿಕ ಪದಾರ್ಥಗಳನ್ನು  ಬಳಸಿ ತಯಾರಿಸಲಾಗಿದೆ ಎಂಬುದು ದೃಢಪಟ್ಟಿದೆ. ಈ ಪಾನೀಯವು ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿದೆ ಎಂಬುದನ್ನು  ಕಂಡುಕೊಳ್ಳಲಾಗಿದೆ. 

Advertisement

ಬೇಸಗೆಯ ಬಿಸಿಗೆ ತಂಪು ನೀಡಲು ರಸ್ತೆ  ಬದಿಗಳಲ್ಲಿ  ತಾಳೆ ಹಣ್ಣು ಮಾರಾಟಕ್ಕೆ ಸಿದ್ಧವಾಗಿದೆ. ಮೇಲ್ನೋಟಕ್ಕೆ ಎಳನೀರನ್ನು  ನೆನಪಿಸುವ ತಾಳೆ ಹಣ್ಣಿನ ಸವಿಯಾದ ತಿರುಳು ಆರೋಗ್ಯಕ್ಕೆ ಉತ್ತಮವಾದ ಪೋಷಕಾಂಶಗಳನ್ನು  ಹೊಂದಿದೆ. ಹಾಗಾಗಿ ರಸ್ತೆ ಬದಿಗಳಲ್ಲಿ  ಹಣ್ಣಿನ ಖರೀದಿಗಾಗಿ ಮುಗಿ ಬೀಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. 

ರುಚಿ ಹಾಗೂ ಆರೋಗ್ಯವರ್ಧನೆಗೆ ಪ್ರಸಿದ್ಧವಾಗಿರುವ ತಾಳೆಹಣ್ಣು  ದೇಹದ ಉಷ್ಣತೆಯನ್ನು ನಿಯಂತ್ರಿಸುವುದಲ್ಲದೆ ಬೇಸಗೆಯಲ್ಲಿ  ಹೊಟ್ಟೆಯುರಿ ಮೊದಲಾದ ಸಮಸ್ಯೆಗಳಿಂದ ನಮ್ಮನ್ನು  ರಕ್ಷಿಸುತ್ತದೆ. 

ತಿರುಳಿನ ಪಾನೀಯ
ಪೋಷಕಾಂಶದ ಗಣಿ ಎಂದೇ ಕರೆಯಲ್ಪಡುವ ತಾಳೆ ಹಣ್ಣಿನ ತಿರುಳಿನ ಪಾನೀಯ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಇದು ದೇಹದ ಆಯಾಸ ಹಾಗೂ ನೀರಿನ ಕೊರತೆಯನ್ನು  ನೀಗಿಸುತ್ತದೆ. ಮಾತ್ರವಲ್ಲದೆ ಹೊಟ್ಟೆಯುರಿ, ವಾಯು ತೊಂದರೆಗೂ ತಾಳೆಹಣ್ಣು  ಸೇವನೆ ದಿವ್ಯ ಔಷಧವಾಗಿದೆ.

ಆರೋಗ್ಯದ ಕಣ್ಣು
ಆರೋಗ್ಯದ ಕಣ್ಣು ತಾಳೆಹಣ್ಣು ಎಂದೇ ಪ್ರಖ್ಯಾತಿ ಪಡೆದಿದೆ. ಅಲ್ಲದೆ ಬಾಯಾರಿದವರ ನೀರಡಿಕೆಯನ್ನು ತಣಿಸುವ ತಾಳೆಹಣ್ಣು ಅಮೃತ ಸಮಾನ. ತಾಳೆ ಕಾಂಡದಿಂದ ದೊರಕುವ ರಸವೂ ಆರೋಗ್ಯಕರ ಹಾಗೂ ಚೈತನ್ಯಕಾರಕ ಎಂಬುದಾಗಿ ಬಲ್ಲವರು ಹೇಳುತ್ತಾರೆ. 

Advertisement

ತಾಳೆ ಮರದಿಂದ ಸಂಗ್ರಹಿಸುವ ನೀರಿಗೂ (ನೀರಾ) ಬಹಳ ಬೇಡಿಕೆ ಇದೆ. 
ಬೇಸಗೆಯಲ್ಲಿ ಒಂದೆರಡು ತಾಳೆಹಣ್ಣು  ಅಥವಾ ಅದರ ಪಾನೀಯವನ್ನು ಸೇವಿಸುವುದರಿಂದ ದೇಹದಲ್ಲಿ  ಉಂಟಾಗುವ ನಿಶ್ಶಕ್ತಿಯನ್ನು ನೀರಡಿಕೆ ಹೋಗಲಾಡಿಸಲು ಸಾಧ್ಯವಿದೆ. 

ಆದರೆ ಆರೋಗ್ಯ ವರ್ಧನೆಗಾಗಿ ಕುಡಿಯುವ ಪಾನೀಯಗಳು ಜೀವಕ್ಕೆ ಕುತ್ತಾಗುವ ಪರಿಸ್ಥಿತಿ ಬಂದೊದಗಿದೆ. ಮಾರ್ಗದ ಬದಿಯಲ್ಲಿ  ವಿವಿಧೆಡೆ ತಾಳೆಯಿಂದ ಬೆಲ್ಲ ಮಾಡಲು ತೆಗೆದ ಪಾನೀಯ ಎಂದು ಮುಗ್ಧ  ಜನರನ್ನು ನಂಬುವಂತೆ ಮಾಡಿ ಕೃತಕ ಪಾನೀಯವನ್ನು ನೀಡುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ  ನಡೆಸಿದ ಕಾರ್ಯಾಚರಣೆಯಲ್ಲಿ  ಚೆಂಗಳ ಪಂಚಾಯತ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ ಬಿ.ಅಶ್ರಫ್‌, ಜೂನಿಯರ್‌ ಹೆಲ್ತ್‌  ಇನ್‌ಸ್ಪೆಕ್ಟರ್‌ ಪಿ.ಪಿ. ಭಾಸ್ಕರನ್‌ ಭಾಗವಹಿಸಿದ್ದರು. ಪ್ರಕೃತಿದತ್ತವಲ್ಲದ ಕೃತಕವಾಗಿ ತಯಾರಿಸುವ ತಾಳೆಹಣ್ಣು  ಪಾನೀಯವನ್ನು  ವಶಪಡಿಸಿಕೊಂಡು ನಾಶಪಡಿಸಲಾಯಿತು. ರಸ್ತೆ  ಬದಿಯಲ್ಲಿ ಮಾರಾಟವಾಗುತ್ತಿರುವ ಈ ರೀತಿಯ ಪಾನೀಯಗಳನ್ನು ಕುಡಿಯಬಾರದೆಂದು ಹೆಲ್ತ್‌ ಇನ್‌ಸ್ಪೆಕ್ಟರ್‌ ಸೂಚನೆ ನೀಡಿದ್ದು, ಜನರು ಜಾಗೃತರಾಗುವಂತೆ ಕರೆ ನಿಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next