Advertisement

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

08:13 PM Jun 24, 2021 | Team Udayavani |

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

ಮಸ್ಕಿ: ಕಳಪೆ ಬಿತ್ತನೆ ಬೀಜ ಮಾತ್ರವಲ್ಲ ಈಗ ನಕಲಿ ರಸಗೊಬ್ಬರವೂ ಮಾರುಕಟ್ಟೆ ಪ್ರವೇಶಿಸಿದೆ. ಅತಿ ಕಡಿಮೆ ಬೆಲೆಗೆ ಸಿಗುವ ಕಚ್ಚಾ ವಸ್ತು ಬಳಸಿ ತಯಾರಿಸಿರುವುದನ್ನು ರಸಗೊಬ್ಬರ ಎಂದು ನಂಬಿಸಿ ರೈತರಿಗೆ ಮಾರಾಟ ಮಾಡುವ ಜಾಲ ಬಯಲಾಗಿದೆ.

ಕೃಷಿ ಮತ್ತು ಪೊಲೀಸ್‌ ಅ ಧಿಕಾರಿಗಳ ದಾಳಿಯ ವೇಳೆ ಜೂ.16ರಂದು ಮಸ್ಕಿ ಮತ್ತು ನೆರೆಯ ಗಂಗಾವತಿ ತಾಲೂಕಿನಲ್ಲಿ ಲಕ್ಷಾಂತರ ರೂ. ಮೌಲ್ಯದ ನಕಲಿ ರಸಗೊಬ್ಬರ ಪತ್ತೆಯಾಗಿತ್ತು. ಎರಡೂ ಕಡೆ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಇದರ ಬೇರು ಗಟ್ಟಿಯಾಗಿರುವ ಮಾಹಿತಿ ಲಭಿಸಿದೆ. ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶ ಪತ್ತೆಯಾಗಿದೆ. ಸಮಗ್ರ ತನಿಖೆ ನಡೆಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕೊಪ್ಪಳ ಎಸ್‌ಪಿಗೆ ಸೂಚನೆ ನೀಡಿದ್ದಾರೆ.

ಆಗಿದ್ದೇನು?: ಜೂ.16ರಂದು ಖಚಿತ ಮಾಹಿತಿ ಮೇರೆಗೆ ಗಂಗಾವತಿಯ ಕೃಷಿ ಮತ್ತು ಪೊಲೀಸ್‌ ಇಲಾಖೆ ಅ ಧಿಕಾರಿಗಳ ದಾಳಿ ವೇಳೆ ಒಟ್ಟು 3,88,500 ರೂ. ಮೌಲ್ಯದ 200 ಚೀಲ ಮಂಗಲ ಡಿಎಪಿ ಹೆಸರಿನ 100 ಚೀಲ ಕೋರಮಂಡಲ ಇಂಟನ್ಯಾಷನಲ್‌ ಲಿಮಿಟೆಡ್‌ ಕಂಪನಿಯ ಗ್ರೋಪ್ಲಸ್‌ ಹೆಸರಿನ ನಕಲಿ ರಸಗೊಬ್ಬರ ಪತ್ತೆಯಾಗಿತ್ತು. ಪ್ರಾಥಮಿಕ ವಿಚಾರಣೆ ವೇಳೆ ಕೇವಲ 450-600 ರೂ. ಬೆಲೆ ಬಾಳುವ ಸೆಟ್‌ರೈಟ್‌ ಅಂಶವನ್ನು ತುಂಬಿ ಮಂಗಲ ಡಿಎಪಿ ಲೇಬಲ್‌ ಬಳಸಿ 1200 ರೂ. ಗೂ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದ್ದರು.

ಕೇವಲ ಗಂಗಾವತಿಯಲ್ಲ ಮಸ್ಕಿ, ಮುದಗಲ್‌ನಲ್ಲೂ ಈ ರಸಗೊಬ್ಬರ ಮಾರಾಟ ಮಾಡಲಾಗಿದೆ ಎನ್ನುವ ಅಂಶವನ್ನು ಆರೋಪಿಗಳು ಬಾಯಿಬಿಟ್ಟಿದ್ದರು. ಆರೋಪಿಗಳ ಹೇಳಿಕೆ ಬಳಿಕ ಮಸ್ಕಿ ತಾಲೂಕಿನ ಕುಣೆಕೆಲ್ಲೂರು, ಮಟ್ಟೂರು ಗ್ರಾಮಗಳಲ್ಲಿ ದಾಸ್ತಾನು ಇಡಲಾಗಿದ್ದ 514 ಚೀಲ ನಕಲಿ ಡಿಎಪಿ ಗೊಬ್ಬರವನ್ನು ಅದೇ ದಿನ ಪತ್ತೆ ಹಚ್ಚಲಾಗಿತ್ತು. ಎರಡು ಕಡೆಗೂ ಪ್ರತ್ಯೇಕ ಪೊಲೀಸ್‌ ಕೇಸ್‌ ದಾಖಲಾಗಿದ್ದು, ಸಿಕ್ಕ ನಕಲಿ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಈಗ ಪರೀಕ್ಷೆ ವರದಿಯೂ ಬಂದಿದ್ದು, ಇದು ನಕಲಿ ರಸಗೊಬ್ಬರ ಎನ್ನುವುದು ರುಜುವಾಗಿದೆ. ಆದರೆ ಇದು ಕೇವಲ ಸ್ಥಳೀಯರಿಂದ ನಡೆದ ಕೃತ್ಯವಲ್ಲ; ಇದರ ಹಿಂದೆ ದೊಡ್ಡ ಜಾಲವೇ ಇದೆ ಎನ್ನುವ ಅನುಮಾನ ಹುಟ್ಟಿಕೊಂಡಿವೆ.

Advertisement

ಫ್ಯಾಕ್ಟರಿಯಿಂದ ಆಮದು: ಆರೋಪಿಗಳ ಪ್ರಾಥಮಿಕ ಹೇಳಿಕೆ ಪ್ರಕಾರ ಅಫಜಲಪುರದಲ್ಲಿನ ಸಕ್ಕರೆ ಕಾರ್ಖಾನೆಯೊಂದರಿಂದ ಉತ್ಪತ್ತಿಯಾಗುವ ಮೊಲಾಸಿಸ್‌ ಎನ್ನುವ ತ್ಯಾಜ್ಯದ ಮೂಲಕ ಸಂಸ್ಕರಣೆ ಇಲ್ಲದೇ ಹಾಗೂ ಯಾವುದೇ ರೀತಿ ಮಣ್ಣಿಗೆ ಪೂರಕ ಅಂಶಗಳಿರದೇ (ನೈಟ್ರೋಜನ್‌, ಪ್ರಾಸ್ಪರಸ್‌) ಕಚ್ಚಾ ವಸ್ತುಗಳ ಮೂಲಕ ಗೊಬ್ಬರ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಇಂತಹ ಗೊಬ್ಬರ ಬಳಸಿದ ರೈತರ ಬೆಳೆಗಳು ಯಾವುದೇ ರೀತಿಯ ಫಲ ನೀಡದು ಎಂದು ತಿಳಿದು ಬಂದಿದೆ. ಇದು ಮೂರ್‍ನಾಲ್ಕು ವರ್ಷಗಳಿಂದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದು ಕೇವಲ ಪ್ರಾಥಮಿಕ ವಿಚಾರಣೆ ವೇಳೆ ಬಂದ ಮಾಹಿತಿಯಾಗಿದ್ದು, ಇದರ ಸಂಪೂರ್ಣ ತನಿಖೆ ಇನ್ನೂ ನಡೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next