ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆಯುವ ಸಂದರ್ಭ ದಲ್ಲಿ ನೀಡುವ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರಂಟಿ (ಇಬಿಜಿ)ಗಳನ್ನು ನಕಲಿ ಮಾಡಿ ನೂರಾರು ಕೋಟಿ ರೂ. ವಂಚಿಸಿದ್ದ ಲೆಕ್ಕಪರಿಶೋಧಕನನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರಪ್ರದೇಶ ಮೂಲದ ಆಶೀಷ್ ಸಕ್ಸೇನಾ ಅಲಿಯಾಸ್ ರಾಯ್(45) ಬಂಧಿತ. ಪ್ರಕರಣದಲ್ಲಿ ಮತ್ತೂಬ್ಬ ಆರೋಪಿ ತಲೆಮರೆಸಿ ಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯು ತ್ತಿದೆ. ಬಂಧಿತ ತನ್ನ ಸಹಚರರನ ಜತೆ ಸೇರಿಕೊಂಡು 11 ಮಂದಿ ಗುತ್ತಿಗೆದಾರ ಹೆಸರಿನಲ್ಲಿ 168.13 ಕೋಟಿ ರೂ. ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯಿಂದ 2 ಲ್ಯಾಪ್‌ಟಾಪ್, 6 ಮೊಬೈಲ್, 1 ಪೆನ್‌ಡ್ರೈವ್, 10 ಬ್ಯಾಂಕ್ ಚೆಕ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಕಾಮಗಾರಿಗಳ ಗುತ್ತಿಗೆ ಪಡೆಯಲು ಗುತ್ತಿಗೆದಾರರು ಇ-ಬ್ಯಾಂಕ್ ಗ್ಯಾರಂಟಿಗಳನ್ನು ನೀಡಬೇಕಾಗುತ್ತದೆ. ಈ ಕುರಿತು ಕೆಲ ಗುತ್ತಿಗೆದಾರರು ಆರೋಪಿ ಬಳಿ ಇ-ಬ್ಯಾಂಕ್ ಗ್ಯಾರಂಟಿ ಮಾಡಿ ಕೊಡುವಂತೆ ಕೇಳುತ್ತಿದ್ದರು. ಆಗ ಆರೋಪಿ ನಕಲಿ ಇ-ಬ್ಯಾಂಕ್ ಗ್ಯಾರಂಟಿಗಳನ್ನು ಮಾಡಿಕೊಡುತ್ತಿದ್ದ. ಅದೇ ಮಾಹಿತಿಯನ್ನು ಗುತ್ತಿಗೆದಾರರು, ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್ (ಎನ್‌ಇಎಸ್‌ಎಲ್) ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದರು.
ಈ ಇ-ಬ್ಯಾಂಕ್ ಗ್ಯಾರಂಟಿಗಳನ್ನು ಪರಿಶೀಲಿಸಿ ಪ್ರಮಾಣೀಕರಿಸುವ ಜವಾಬ್ದಾರಿ ಎನ್‌ಇಎಸ್‌ಎಲ್ ವಹಿಸಿಕೊಂಡಿದೆ. ಇತ್ತೀಚೆಗೆ ದೇಶದ 11 ಗುತ್ತಿಗೆದಾರರು ಅಪ್‌ಲೋಡ್ ಮಾಡಿದ್ದ 168.13 ಕೋಟಿ ರೂ. ಮೌಲ್ಯದ ಇ -ಬ್ಯಾಂಕ್ ಗ್ಯಾರಂಟಿಯನ್ನು ಅಧಿಕಾರಿಗಳು ಪರಿಶೀಲಿಸಿದ್ದರು. ಆಗ ಎರಡು ಖಾಸಗಿ ಬ್ಯಾಂಕ್‌ಗಳ ಹೆಸರಿನಲ್ಲಿದ್ದ ಇ- ಬ್ಯಾಂಕ್ ಗ್ಯಾರಂಟಿಗಳು ನಕಲಿ ಎಂಬುದು ಗೊತ್ತಾಯಿತ್ತು. ಗುತ್ತಿಗೆದಾರರ ಪಟ್ಟಿ ಸಮೇತ ಫೆ.7ರಂದು ಎನ್‌ಇಎಸ್‌ಎಲ್ ಸಂಸ್ಥೆಯ ಅಧಿಕಾರಿಗಳು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಆಧಾರ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಹೇಳಿದರು.
ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ: ನಕಲಿ ಇ -ಬ್ಯಾಂಕ್ ಗ್ಯಾರಂಟಿ ಜಾಲದ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯ ಬೆನ್ನು ಬಿದ್ದಾಗ ದೆಹಲಿಯ ನೊಯ್ಡಾದಲ್ಲಿರುವ ಮಾಹಿತಿ ಮೇರೆಗೆ ನೋಯ್ಡಾಗೆ ಹೋದಾಗ ಆತ ಕುವೈತ್‌ಗೆ ಹೋಗಿರುವ ಮಾಹಿತಿ ಇತ್ತು. ಬಳಿಕ ಆತನ ಬಂಧನಕ್ಕಾಗಿ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು. ಈತ, ಮಾ.13ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆಗ ವಲಸೆ ಅಧಿ ಕಾರಿಗಳ ಸಹಾಯದಿಂದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಲಾಗಿದೆ ಎಂದು ಕಮಿಷನರ್ ತಿಳಿಸಿದರು.
5 ಕೋಟಿ ಕಮಿಷನ್ ಪಡೆದಿದ್ದ ಆರೋಪಿಗಳು:
ಆರೋಪಿ ಆಶೀಷ್, ದೇಶದ ವಿವಿಧ ಲೆಕ್ಕ ಪರಿಶೋಧಕರ ಜತೆ ಒಡನಾಟ ಹೊಂದಿದ್ದು, ಅವರ ಮೂಲಕ ಗುತ್ತಿಗೆದಾರರನ್ನು ಪರಿಚಯಿಸಿಕೊಂಡಿದ್ದ. ಸರ್ಕಾರದ ಕಾಮಗಾರಿ ಗುತ್ತಿಗೆ ಪಡೆಯಲು ಪ್ರಯತ್ನಿಸುತ್ತಿದ್ದ ಗುತ್ತಿಗೆದಾರರಿಗೆ, ಯಾವುದೇ ದಾಖಲೆ ಹಾಗೂ ಮುಗಂಡ ಹಣವಿಲ್ಲದೇ ಇ - ಬ್ಯಾಂಕ್ ಗ್ಯಾರಂಟಿ ಕೊಡಿಸುವುದಾಗಿ ಆಮಿಷವೊಡ್ಡು ತ್ತಿದ್ದ ಆರೋಪಿಗಳು ಪ್ರತಿ ಇ-ಬ್ಯಾಂಕ್ ನೀಡಲು 25 ಲಕ್ಷದಿಂದ 50 ಲಕ್ಷ ರೂ. ಕಮಿಷನ್ ನೀಡು ವಂತೆ ಬೇಡಿಕೆ ಇರಿಸುತ್ತಿದ್ದರು. ಹೀಗೆ ಆರೋಪಿಗಳು 11 ಮಂದಿ ಗುತ್ತಿಗೆದಾರರಿಂದ 5 ಕೋಟಿ ರೂ. ಕಮಿಷನ್ ಪಡೆದುಕೊಂಡಿದ್ದಾರೆ. ಆರೋಪಿಯ ಬಂಧನದಿಂದ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ದಾಖಲಾಗಿದ್ದ 5 ಪ್ರಕರಣಗಳು ಪತ್ತೆಯಾಗಿವೆ. ಜತೆಗೆ ಗುಜರಾತ್ ಮತ್ತು ದೆಹಲಿಯಲ್ಲಿಯೂ ಇದೇ ಮಾದರಿಯ ಕೃತ್ಯ ಎಸಗಿರುವುದು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.