ಗದಗ: ಶಿರಹಟ್ಟಿ ತಾಲೂಕಿನಲ್ಲಿ ಖೊಟ್ಟಿ ದಾಖಲಾತಿಗಳನ್ನು ಸಲ್ಲಿಸಿ, ನಕಲಿ ವೈದ್ಯನೊಬ್ಬ ಆರೋಗ್ಯ ಇಲಾಖೆಯಲ್ಲಿ ನೇಮಕಗೊಂಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಅಸಲಿ ವೈದ್ಯನ ಪೋಷಕರು ಬೆಂಗಳೂರಿನ ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ(ಕೆಎಂಸಿ) ದೂರು ನೀಡಿದ್ದಾರೆ.
ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಖಾಲಿಯಿದ್ದ ಎಂಬಿಬಿಎಸ್ ವೈದ್ಯರ ಹುದ್ದೆ ಭರ್ತಿಗಾಗಿ ಕಳೆದ ಮಾರ್ಚ್‌ನಲ್ಲಿ ನೇರ ಸಂದರ್ಶನ ನಡೆಸಲಾಗಿತ್ತು. ಆಗ ಡಾ| ವಿಕಾಸ್ ಪಾಟೀಲ ಎಂಬ ಹೆಸರಿನ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಿದ್ದ ವ್ಯಕ್ತಿ ನೇಮಕಗೊಂಡಿದ್ದಾನೆ. ಬಳಿಕ ಏಪ್ರಿಲ್‌ನಿಂದ ನಾಲ್ಕು ತಿಂಗಳ ಕಾಲ ಬನ್ನಿಕೊಪ್ಪ ಹಾಗೂ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಚಿಕಿತ್ಸೆ ಕರ್ತವ್ಯ ನಿರ್ವಹಿಸಿದ್ದಾನೆ.
ಅಲ್ಲದೇ, ಯಾರೊಬ್ಬರಿಗೂ ಅನುಮಾನ ಬಾರದಂತೆ ವೈದ್ಯನ ಸೇವೆಯನ್ನೂ ನಿಭಾಯಿಸಿರುವುದು ಸೋಜಿಗದ ಸಂಗತಿ. ಕಳೆದ ನಾಲ್ಕು ತಿಂಗಳು ಸರಕಾರದಿಂದ ಮಾಸಿಕ 46 ಸಾವಿರ ರೂ. ಸಂಬಳ ಪಡೆದಿರುವ ಡಾ|ವಿಕಾಸ್ ಪಾಟೀಲ, ಆನಂತರ ಅನಾರೋಗ್ಯದ ನೆಪವೊಡ್ಡಿ ಆ. 8ರಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಬಳಿಕ ಡಿಎಚ್‌ಒ ಸೇರಿದಂತೆ ಇಲಾಖೆ ಅಧಿಕಾರಿಗಳ ಮೊಬೈಲ್ ಕರೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೇಳಲಾಗಿದೆ.
ಪ್ರಕರಣ ಬಯಲಾಗಿದ್ದು ಹೇಗೆ? ಬೆಳಗಾವಿ ಮೂಲದ ಡಾ| ವಿಕಾಸ ಪಾಟೀಲ ಎಂಬ ವ್ಯಕ್ತಿ ಬೇರೆಡೆ ಮಕ್ಕಳಶಾಸ್ತ್ರದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾನೆ. ಆದರೆ, ಅದೇ ಹೆಸರು ಹಾಗೂ ವಿಳಾಸವನ್ನು ಹೊಂದಿರುವ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿರುವ ಅನಾಮಧೇಯ ವ್ಯಕ್ತಿಯೊಬ್ಬ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಭರ್ತಿಯಾಗಿದ್ದಾನೆ.
ಈ ಕುರಿತು ಮಾಹಿತಿ ಪಡೆದ ಬೆಳಗಾವಿಯ ಡಾ| ವಿಕಾಸ ಪಾಟೀಲ ಅವರ ತಂದೆ ಅನಿಲ್ ಕುಮಾರ್ ಪಾಟೀಲ ಅವರು ಸೆ. 5ರಂದು ಗದಗ ಜಿಲ್ಲಾ ಆರೋಗ್ಯಾ ಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾ ವೈದ್ಯಾ ಧಿಕಾರಿಗೆ ವಿಷಯ ತಿಳಿಸಿದಾಗಲೇ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಶುಕ್ರವಾರ(ಸೆ.7) ಬೆಂಗಳೂರಿನ ಕೆಎಂಸಿಗೆ ಅನಿಲ್ ಕುಮಾರ್ ಪಾಟೀಲ ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ಇಲಾಖೆಗೆ ಸಲ್ಲಿಕೆಯಾಗಿರುವ ದಾಖಲೆಗಳು ನಕಲಿ ಎಂದು ಕಂಡುಬಂದಿವೆ. ಆದರೂ ಕೆಎಂಸಿಯಲ್ಲಿ ದಾಖಲೆಗಳು ಪರಿಶೀಲನೆ ನಡೆದು, ಕೆಎಂಸಿ ನೀಡುವ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಡಿಎಚ್‌ಒ ಡಾ| ಎನ್.ಎಸ್. ಹೊನಕೇರಿ ಮಾಹಿತಿ ನೀಡಿದರು. ಅಲ್ಲದೆ ನಕಲಿ ವ್ಯಕ್ತಿ ಎನ್ನಲಾದ ಡಾ| ವಿಕಾಸ್ ಪಾಟೀಲ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಯುವತಿಯನ್ನು ಸೆ. 6ರಂದು ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ.