ಮೈಸೂರು: “ಅಧಿಕಾರದ ಆಸೆಗಾಗಿ ಕಾಂಗ್ರೆಸ್ 38 ಶಾಸಕರನ್ನು ಹೊಂದಿರುವ ಜೆಡಿಎಸ್ ಜತೆಗೆ ಕೈಜೋಡಿಸಿ, ನಕಲಿ ಸೀಡಿಯನ್ನು ಬಿಡುಗಡೆಗೊಳಿಸಿದೆ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಧಿಕಾರಕ್ಕಾಗಿ ನಕಲಿ ಸಿಡಿ, ವಿಡಿಯೋ ಸೃಷ್ಟಿಸಿ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಟಾರ್ ಅವರೇ ಬಿಜೆಪಿಯ ಯಾವುದೇ ನಾಯಕರು ತಮ್ಮ ಕುಟುಂಬ ಹಾಗೂ ತಮಗೆ ಆಮಿಷ ಒಡ್ಡಿಲ್ಲ’ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ ಎಂದರು.
ತನಿಖೆಗೆ ಆಗ್ರಹ: ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಅವರು, ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಬಬಲೇಶ್ವರ ಕ್ಷೇತ್ರದ ವಿವಿ ಪ್ಯಾಟ್ ಯಂತ್ರಗಳನ್ನು ದುರುಪಯೋಗ ಮಾಡಿಕೊಂಡು ಗೆದ್ದಿದ್ದಾರೆಂಬ ಬಗ್ಗೆ ದೂರು ನೀಡಿದ್ದಾರೆ. ಸಾಕಷ್ಟು ಭದ್ರತೆ ನೀಡಿ ಇರಿಸಲಾಗುವ ವಿವಿ ಪ್ಯಾಟ್ ಯಂತ್ರಗಳು ಖಾಸಗಿ ವ್ಯಕ್ತಿಗೆ ಸೇರಿದ ಗೋದಾಮಿನಲ್ಲಿ ಹೇಗೆ ಲಭ್ಯವಾಯಿತು ಎಂದು ಪ್ರಶ್ನಿಸಿದರು.
ಬಿಜೆಪಿ ಪ್ರಭಾವ ಹೊಂದಿರುವ ಕಡೆಗಳಲ್ಲಿ ಬಿಜೆಪಿಗೆ ಕಡಿಮೆ ಮತಗಳು ಬರಲು ಹೇಗೆ ಸಾಧ್ಯ ಎಂಬ ಅನುಮಾನದೊಂದಿಗೆ ವಿಜುಗೌಡ ಪಾಟೀಲ್ ಅವರು ದೂರು ನೀಡಿದ್ದು, ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಹ ನಿರ್ಧರಿಸಲಾಗಿದೆ. ಜತೆಗೆ ರಾಹುಲ್ ಗಾಂಧಿ ನಿರ್ದೇಶನದಲ್ಲಿ ಉಗ್ರಪ್ಪ ಬಿಡುಗಡೆ ಮಾಡಿರುವ ನಕಲಿ ಸೀಡಿಗಳ ಸೃಷ್ಟಿಯ ಬಗ್ಗೆಯೂ ಕೇಂದ್ರ ಚುನಾವಣಾ ಆಯೋಗ ಶೀಘ್ರವೇ ತನಿಖೆ ನಡೆಸಬೇಕೆಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.