ಮುಂಬಯಿ: ಮಹಾರಾಷ್ಟ್ರದಲ್ಲಿ ಮನೆಗೇ ಮದ್ಯ ಪೂರೈಕೆ ಶುರು ಮಾಡಿದ ಮೇಲೆ ಮೋಸ ಮಾಡುವ ಪ್ರಕರಣಗಳೂ ವರದಿಯಾಗಲಾರಂಭಿಸಿದೆ. ಮದ್ಯ ಪ್ರಿಯರ ಚಟವನ್ನೇ ದಾಳವನ್ನಾಗಿ ಬಳಸಿಕೊಂಡ ಕೆಲವರು ಈ ಕೃತ್ಯವೆಸಗುತ್ತಿದ್ದಾರೆ. ಇಂಥ ಜಾಲಕ್ಕೆ ಬೇಸ್ತು ಬಿದ್ದವರಲ್ಲಿ ನೌಕಾ ಪಡೆಯ ನಿವೃತ್ತ ಅಧಿಕಾರಿ, ಸಿನಿಮಾ ನಿರ್ಮಾಪಕ, ಮಾಜಿ ಶಾಸಕರೊಬ್ಬರ ಸ್ನೇಹಿತರೂ ಇದ್ದಾರಂತೆ. ಮದ್ಯ ಪೂರೈಕೆದಾರರು ಎಂಬ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಮದ್ಯ ಪ್ರಿಯರಿಗೆ ಮೋಸ ಮಾಡುತ್ತಿದ್ದಾರೆ. ಮದ್ಯದ ಅಂಗಡಿಗಳ ಹೆಸರಿನಲ್ಲಿ ಈ ಖಾತೆಗಳನ್ನು ತೆರೆಯಲಾಗಿದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವಂತೆ ಜನರಿಗೆ ಸೂಚನೆ ನೀಡುತ್ತಾರೆ.
ಅಂದ ಹಾಗೆ ಈ ರೀತಿ ಮೋಸ ಹೋದವರಲ್ಲಿ ಒಬ್ಬರ ಪೈಕಿ ಸಿನೆಮಾ ನಿರ್ಮಾಕರೂ ಇದ್ದಾರೆ. “ಪಿಟಿಐ’ ಸುದ್ದಿಸಂಸ್ಥೆಗೆ ಜತೆಗೆ ಮಾತನಾಡಿದ ಅವರು ಮುಂಬೈನ ಜುಹೂನಲ್ಲಿರುವ ಜನಪ್ರಿಯ ಮದ್ಯದಂಗಡಿಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆಯಲಾಗಿತ್ತು. ಅದನ್ನು ನಿಜವೆಂದೇ ನಂಬಿದ್ದ ಅವರು 40 ಸಾವಿರ ರೂ. ಮೌಲ್ಯದ ಮದ್ಯ ಖರೀದಿಗೆ ಉದ್ದೇಶಿಸಿದ್ದರು. ಅದಕ್ಕಾಗಿ ಅವರು 5 ಸಾವಿರ ರೂ. ಮುಂಗಡ ಹಣ ಪಾವತಿಸಿದ್ದರು.
ನಿಗದಿತ ಸಮಯ ಕಳೆದರೂ, ಮದ್ಯ ಮನೆಗೆ ಬಾರದೇ ಇದ್ದಾಗ ಆ ಬಡಪಾಯಿ ಪರಿಚಯದವರ ಜತೆಗೆ ವಿಚಾರ ತಿಳಿಸಿ, ಚರ್ಚೆ ನಡೆಸಿದಾಗ ಮೋಸ ಹೋದದ್ದು ಅರಿವಾಯಿತು. ಪಶ್ಚಿಮ ಬಂಗಾಳದ ಅಸನ್‌ಸೋಲ್, ಬಿಹಾರದ ಕೆಲ ಸ್ಥಳಗಳಿಂದ ಕೆಲ ಕಿಡಿಗೇಡಿಗಳು ಪರಿಸ್ಥಿತಿ ದುರುಪಯೋಗ ಮಾಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇಂಥ ಜಾಲಕ್ಕೆ ಬಿದ್ದವರೆಲ್ಲ ಉನ್ನತ ಹುದ್ದೆಯಲ್ಲಿದ್ದವರೇ. ಈ ಪೈಕಿ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರು 1,400 ರೂ. ಮೌಲ್ಯದ ಮದ್ಯ ಖರೀದಿ ಸಲು ಹೋಗಿ ಬೇಸ್ತು ಬಿದ್ದಿದ್ದಾರೆ. ಮಾಜಿ ಶಾಸಕರೊಬ್ಬರ ಸ್ನೇಹಿತರೂ ಈ ರೀತಿ ಮೋಸ ಹೋಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗಿ ದ್ದರೆ ಆನ್‌ಲೈನ್‌ನಲ್ಲಿ ಮದ್ಯ ಖರೀದಿ ಮಾಡುತ್ತೀರಾ? ಎಚ್ಚರಿಕೆ ಇರಲಿ!