ಆಲಮಟ್ಟಿ : ಯುಗಾದಿ ಹಬ್ಬದ ಅಂಗವಾಗಿ ನೂರಾರು ಕಿ.ಮೀ. ಗಳ ದೂರದಿಂದ ಪಲ್ಲಕ್ಕಿಗಳೊಂದಿಗೆ ಬಂದ ಭಕ್ತರು ಡೊಳ್ಳು ಕುಣಿತ, ಹಲಗೆ ನಾದದೊಂದಿಗೆ ಹರ ಹರ ಮಹಾದೇವ ಘೋಷಣೆ ಮೊಳಗಿಸಿದರು. ನೆತ್ತಿ ಸುಡುವ ಕಡು ಬಿಸಿಲಿನ ತಾಪದ ಪರಿವೆಯಿಲ್ಲದ ದೇವತೆಗಳ ಪಲ್ಲಕ್ಕಿ, ಛತ್ರಿ ಚಾಮರದೊಂದಿಗೆ ಆಗಮಿಸಿದ್ದ ಭಕ್ತರು ಗಂಗಾಸ್ಥಳದಲ್ಲಿ ಪೂಜಾ ಕೈಂಕರ್ಯ ಮುಗಿಸಿದರು. ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶವಾದ ಚಂದ್ರಮ್ಮ ದೇವಸ್ಥಾನದಿಂದ ಪಾರ್ವತಿ ಕಟ್ಟೆ ಸೇತುವೆಯಾಚೆಗೂ ಮತ್ತು ಮುಂಭಾಗದಲ್ಲಿರುವ ಕೃಷ್ಣಾ ಸೇತುವೆ ಬಳಿ ನದಿ ದಡದಲ್ಲಿ ಪಲ್ಲಕ್ಕಿ, ಛತ್ರಿ ಚಾಮರಗಳೊಂದಿಗೆ ಬಂದ ಭಕ್ತರು, ಎತ್ತಿನ ಗಾಡಿ, ಟ್ರ್ಯಾಕ್ಟರ್, ಲಾರಿ, ಮಿನಿ ಬಸ್ ಹಾಗೂ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಭಕ್ತರು ನದಿಯಲ್ಲಿ ದೇವರ ಮೂರ್ತಿ, ಪಲ್ಲಕ್ಕಿ ಶುಚಿಗೊಳಿಸುತ್ತಿರುವುದು, ವಾಹನಗಳನ್ನು ಶುಚಿಗೊಳಿಸುತ್ತಿರುವುದು ಕಂಡು ಬಂತು.
ವಿವಿಧ ದರ್ಗಾಗಳಿಗೆ ಪವಿತ್ರ ಜಲ ಒಯ್ಯಲು ಆಗಮಿಸಿದ್ದ ಮಹಿಳಾ ಹಾಗೂ ಪುರುಷ ಭಕ್ತರು ಕೃಷ್ಣೆಯಲ್ಲಿ ಮಿಂದೆದ್ದು ಒದ್ದೆ ಬಟ್ಟೆಯಲ್ಲಿಯೇ ಹೊಸ ಮಣ್ಣಿನ ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಸಾಗಿದರು. ನದಿ ದಡದಲ್ಲಿ ಡೊಳ್ಳಿನ ಹಾಡು-ಭಜನಾ ಪದ: ಭಕ್ತರು ನದಿ ತೀರದ ಊರು ಹಾಗೂ ನದಿಯ ಪಕ್ಕದಲ್ಲಿ ಪಲ್ಲಕ್ಕಿಗಳ ಮುಂದೆ ಡೊಳ್ಳಿನ ಹಾಡು, ಚೌಡಕಿ ಪದ, ಭಜನಾ ಹಾಡು ಹಾಡಿ ನೆರೆದ ಭಕ್ತರಲ್ಲಿ ಅಧ್ಯಾತ್ಮದ ರಸದೌತಣ ನೀಡಿದರು.
ತೆಪ್ಪದಾರುತಿ: ನೂರಾರು ಕಿ.ಮೀ.ದೂರದಿಂದ ಆಗಮಿಸಿರುವ ಭಕ್ತರು ಪವಿತ್ರ ಕೃಷ್ಣೆಯಲ್ಲಿ ಮಿಂದೆದ್ದು ಮೂರ್ತಿ ಹಾಗೂ ಪಲ್ಲಕ್ಕಿ, ಛತ್ರಿ ಚಾಮರಗಳನ್ನು ಜಲದಲ್ಲಿ ತೊಳೆದು ಶುಚಿಗೊಳಿಸಿದ ನಂತರ ನದಿ ದಡದಲ್ಲಿ ಐದು ಕಲ್ಲುಗಳನ್ನಿಟ್ಟು ಅವುಗಳಿಗೆ ಪೂಜೆ ಸಲ್ಲಿಸಿ ನಂತರ ಉಡಿ ತುಂಬುವ ಕಾರ್ಯ ಮಾಡಿ ಸ್ಥಳದಲ್ಲಿಯೇ ನೈವೇದ್ಯ ತಯಾರಿಸಿ ನೈವೇದ್ಯ ಮಾಡಿ ನಂತರ ಜೋಳದ ದಂಟಿನಲ್ಲಿ ಮಾಡಿದ ತೆಪ್ಪದ ಮೇಲೆ ಹಗುರವಾದ ದೀಪವನ್ನಿಟ್ಟು ನದಿಯಲ್ಲಿ ತೇಲಿ ಬಿಡಲಾಗುತ್ತದೆ ಇದರಿಂದ ಗಂಗಾ ಮಾತೆ ಸಂತುಷ್ಟಳಾಗುತ್ತಾಳೆ ಅಲ್ಲದೇ ತಾವು ನಂಬಿದ ದೇವರುಗಳು ಮಳೆ-ಬೆಳೆ ಉತ್ತಮವಾಗಿ ಬರಲು ಆಶೀರ್ವದಿಸುತ್ತವೆ ಎಂಬ ನಂಬಿಕೆ ಇದೆ.
ನದಿ ದಂಡೆಯಲ್ಲಿ ಭೋಜನ ಸವಿದ ಭಕ್ತರು: ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಸಾಮೂಹಿಕವಾಗಿ ಭೋಜನ ಸವಿಯುದರೊಂದಿಗೆ ಬೇರೆ ಭಕ್ತರಿಗೂ ಪ್ರಸಾದ ವಿತರಿಸುತ್ತಿರುವುದು ಕಂಡು ಬಂತು.