Advertisement

ದೇವನಗರಿಯಲ್ಲಿ ಜಾತ್ರೆ ಸಡಗರ..ಭಕ್ತಿ ಸಾಗರ..

10:48 AM Mar 17, 2022 | Team Udayavani |

ದಾವಣಗೆರೆ: ದಾವಣಗೆರೆ ಜಿಲ್ಲೆ ಜನ ಬುಧವಾರ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ, ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಿ, ಎಸ್‌ಒಜಿ ಕಾಲೋನಿಯ ಶ್ರೀ ದುರ್ಗಾಂಬಿಕಾ ಜಾತ್ರಾ ಮಹೋತ್ಸವದ ಸಂಭ್ರಮ, ಸಡಗರ, ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಮಂಗಳವಾರದ ರಾತ್ರಿಯಿಂದಲೇ ಎಲ್ಲ ರಸ್ತೆಗಳು ದಾವಣಗೆರೆ ದುಗ್ಗಮ್ಮನ ದೇವಸ್ಥಾನದ ಕಡೆಗೆ ಎನ್ನುವಂತೆ ಎಲ್ಲ ದಿಕ್ಕುಗಳಿಂದ ಭಕ್ತಾದಿಗಳು ಆಗಮಿಸಿದರು. ದುಗ್ಗಮ್ಮ ನಿನ್ನಾಲ್ಕು ಉಧೋ… ಉಧೋ… ದೇವಿ ನಿನ್ನಾಲ್ಕು… ಉಧೋ… ಎಂಬ ಘೋಷಣೆ ಎಲ್ಲ ಕಡೆಯಿಂದ ಮಂತ್ರ ಘೋಷದಂತೆ ಮೊಳಗಿತು. ಒಂದು, ಎರಡು, ಮೂರು, ನಾಲ್ಕು ಕಿಲೋಮೀಟರ್‌ ದೂರದಿಂದಲೂ ದುಗ್ಗಮ್ಮನ ದೇವಸ್ಥಾನಕ್ಕೆ ಭಕ್ತರು ಉಧೋ… ಉಧೋ… ಎಂದು ದೇವಿ ಸ್ಮರಣೆಯೊಂದಿಗೆ ಸಾಗಿ ಬಂದರು.

Advertisement

ಹರಕೆ ತೀರಿಸಿದ ಭಕ್ತರು:
ಮಂಗಳವಾರ ರಾತ್ರಿಯಿಂದ ಪ್ರಾರಂಭವಾದ ಹರಕೆ ತೀರಿಸುವ ಕಾರ್ಯ ನಿರಂತರವಾಗಿ ಬುಧವಾರ ರಾತ್ರಿಯವರೆಗೂ ನಡೆಯಿತು. ಭಕ್ತರು ದೀಡ್‌ ನಮಸ್ಕಾರ, ಬೇವಿನುಡುಗೆ ಇತರೆ ಹರಕೆ ತೀರಿಸಿದರು. ಬಿಸಿಲು, ಕತ್ತಲು, ಧಗೆ, ನೀರು, ಕಾಲಿಡಲೂ ಯೋಚಿಸುವಷ್ಟು ನೆರೆದಿದ್ದ ಭಕ್ತರು ಯಾವುದನ್ನೂ ಲೆಕ್ಕಿಸದೆ ತಮ್ಮ ಹರಕೆ ತೀರಿಸುವ ಮೂಲಕ ದೇವಿಗೆ ಭಕ್ತಿ ಸಮರ್ಪಿಸಿದರು. ಭಕ್ತ ವರ್ಗ ಅಕ್ಷರಶಃ ಪರಾಕಾಷ್ಠೆಯಲ್ಲಿ ಮಿಂದೆದ್ದಿತು. ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಪ್ರತಿ ಬಾರಿಯಂತೆ ತಮ್ಮ ಕುಟುಂಬ ಸದಸ್ಯರೊಡನೆ ಉರುಳು ಸೇವೆ ಸಲ್ಲಿಸಿದರು.


ಪೊಲೀಸರ ಹರಸಾಹಸ:

ದೇವಸ್ಥಾನದ ಸುತ್ತಮುತ್ತ ಕಾಲಿಡಲೂ ಆಗದಷ್ಟು ಜನ ನೆರೆದಿದ್ದರು. ಹೊತ್ತು ಕಳೆಯುತ್ತಿದ್ದಂತೆ ಜನ ಸಂದಣಿಯೂ ಹೆಚ್ಚಾಗತೊಡಗಿತು. ಸಾಗರದ ಅಲೆಯಂತೆ ಧಾವಿಸಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಕಿಲೋ ಮೀಟರ್‌ನಷ್ಟು ಉದ್ದನೆಯ ಸರತಿ ಸಾಲಲ್ಲಿ ನಿಂತು ಜನ ದೇವಿ ದರ್ಶನ ಪಡೆದರು. ದೇವಸ್ಥಾನದ ಒಳಭಾಗದಲ್ಲಿ ಭಕ್ತರ ದಂಡೇ ನೆರೆದಿತ್ತು.

ಚರಗ ಚೆಲ್ಲಿದರು:
ಮಂಗಳವಾರದ ಮಧ್ಯರಾತ್ರಿ ಚರಗ ಚೆಲ್ಲುವ ಕಾರ್ಯ ಬಿರುಸುಗೊಂಡಿತು. ದುಗ್ಗಮ್ಮನ ಜಾತ್ರೆಯ ಪ್ರಮುಖ ಚರ್ಚಾ ವಿಷಯ ಕೋಣಬಲಿಗೆ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಸಿರಿಂಜ್‌ ಮೂಲಕ ಪಟ್ಟದ ಕೋಣದಿಂದ ರಕ್ತ ತೆಗೆದರು. ಕೋಣದ ಮುಖವಾಡ ಮಾದರಿಯನ್ನು ದೇವಿಯ ಮುಂದಿಟ್ಟು ಬೇಯಿಸಿಟ್ಟಿದ್ದ ಚರಗಕ್ಕೆ ಕೋಣದ ರಕ್ತ ತರ್ಪಣ ಮಾಡಲಾಯಿತು. ದೇವಸ್ಥಾನ ಬಳಿ ಇರುವ ಕೊಠಡಿಯೊಂದರಲ್ಲಿ ಚರಗ (ಬಿಳಿ ಜೋಳ) ಬೇಯಿಸಲಾಯಿತು. ಜೋಳವನ್ನು ಮಡಿಕೆಯಲ್ಲಿ ಬೇಯಿಸಿ ಸಿದ್ಧಪಡಿಸಿಟ್ಟು ಕೊಳ್ಳಲಾಯಿತು. ನಂತರ ಮಹಾಪೂಜೆಯ ವಿ ಧಿವಿಧಾನಗಳು ಆರಂಭಗೊಂಡವು. ಸಂಪ್ರದಾಯದಂತೆ ಮಧ್ಯರಾತ್ರಿ ಕೆಲಕಾಲ ದೇವಿ ದರ್ಶನ ನಿಲ್ಲಿಸಲಾಯಿತು. ದೇವಸ್ಥಾನದ ಎಲ್ಲ ಕಿಟಕಿ, ಬಾಗಿಲು ಮುಚ್ಚಲಾಯಿತು. ಸಂಪ್ರದಾಯದಂತೆ ಬಲಿ ಪ್ರಕ್ರಿಯೆ ನಂತರವೇ ದುರ್ಗಾಂಬಿಕಾದೇವಿಗೆ ಮಹಾಪೂಜೆ ನೆರವೇರಿಸಿದ ನಂತರ ಮತ್ತೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. 10 ಕ್ಕೂ ಹೆಚ್ಚು ಯುವಕರ ತಂಡ ನಗರದ ಎಲ್ಲ ದಿಕ್ಕುಗಳತ್ತ ಸಾಗಿ ಹುಲಿಗ್ಯೋ… ಹುಲಿಗ್ಯೋ… ಎಂದು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ ಚರಗ ಚೆಲ್ಲಿದರು. ಚರಗದಲ್ಲಿನ ಜೋಳ ಪಡೆಯಲು ಜನ ಹರಸಾಹಸ ಪಟ್ಟರು.

Advertisement

ನೈವೇದ್ಯ ಅರ್ಪಣೆ:
ದುರ್ಗಾಂಬಿಕಾ ದೇವಸ್ಥಾನದಲ್ಲಿ ಬಲಿ ಪ್ರಕ್ರಿಯೆ, ಚರಗ ಚೆಲ್ಲುವ ಕಾರ್ಯ ಮುಗಿಯುತ್ತಿದ್ದಂತೆ ಜನ ಬಾಡೂಟಕ್ಕೆ ಸಜ್ಜಾದರು. ಮನೆಗಳು, ಅನುಕೂಲವಾದ ಜಾಗಗಳಲ್ಲಿ ಕುರಿ, ಕೋಳಿಗಳ ಹರಕೆ ನೀಡಲಾಯಿತು. ಅಡುಗೆ ನಂತರ ದೇವಸ್ಥಾನಕ್ಕೆ ತೆರಳಿ ನೈವೇದ್ಯ ಸಲ್ಲಿಸಿದರು. ಕೆಲ ಹೊತ್ತಿನಲ್ಲಿ ಮಾಂಸದ ಅಡುಗೆಯ ಘಮಲು ವ್ಯಾಪಿಸತೊಡಗಿತು. ದುಗ್ಗಮ್ಮನ ಜಾತ್ರೆಯ ಸ್ಪೆಷಲ್‌ ಬಾಡೂಟಕ್ಕೆ ಬಂದವರಿಗೆ ಶಾಮಿಯಾನ ಇತರೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಕುರಿ, ಕೋಳಿಗಳು ಹರಕೆಯ ರೂಪದಲ್ಲಿ ಸಮರ್ಪಿಸಲ್ಪಟ್ಟವು.

ಬಾಡೂಟದ ಸವಿ:
ವಿನೋಬ ನಗರ ಎರಡನೇ ಮುಖ್ಯ ರಸ್ತೆ, ಕೆಟಿಜೆ ನಗರ ರಸ್ತೆ, ಡಾಂಗೇ ಪಾರ್ಕ್‌, ಭಾರತ್‌ ಕಾಲೋನಿ, ಗಾಂಧಿ ನಗರ, ಬೂದಾಳ್‌ ರಸ್ತೆ, ಶಿವಾಲಿ ಟಾಕೀಸ್‌ ರಸ್ತೆ, ಯಲ್ಲಮ್ಮ ನಗರ, ನಿಟುವಳ್ಳಿ… ಹೀಗೆ ಅನೇಕ ಭಾಗದಲ್ಲಿ ಜನ ಮಂಗಳವಾರ ರಾತ್ರಿಯಿಂದಲೇ ಮಾಂಸದ ಖರೀದಿಯಲ್ಲಿ ತೊಡಗಿದ್ದರು. ವಿನೋಬ ನಗರದಲ್ಲಿ ಟ್ರಾಫಿಕ್‌ ಜಾಮ್‌ ಸಹ ಉಂಟಾಗುತ್ತಿತ್ತು. ಮಾಂಸದ ಅಂಗಡಿಗಳಂತೆ ಗ್ರೈಂಡರ್‌ ಅಂಗಡಿಗಳ ಮುಂದೆಯೂ ಸಾಲು ಸಾಲು ಜನ ಕಂಡು ಬಂದರು. ರಾತ್ರಿಯಿಡೀ ಬಾಡೂಟ ನಡೆಯಿತು. ಇದಲ್ಲದೇ ವಿನೋಬನಗರ ಚೌಡೇಶ್ವರಿ ದೇವಿ, ಎಸ್‌ಒಜಿ ಕಾಲೋನಿಯ ದುರ್ಗಾಂಬಿಕಾ ಜಾತ್ರೆಯೂ ಅದ್ಧೂರಿಯಾಗಿ ನಡೆಯಿತು. ಮೇಯರ್‌ ಜಯಮ್ಮ ಗೋಪಿನಾಯ್ಕ, ಉಪ ಮೇಯರ್‌ ಗಾಯತ್ರಿಬಾಯಿ ಖಂಡೋಜಿರಾವ್‌, ದೂಡಾ ಮಾಜಿ ಅಧ್ಯಕ್ಷ ಮಾಲತೇಶ್‌ ಜಾಧವ್‌, ಯಶವಂತರಾವ್‌ ಜಾಧವ್‌, ಯುವ ಮುಖಂಡ ಎಚ್‌.ಎಸ್‌. ನಾಗರಾಜ್‌ ಇತರರು ದೇವಿಯ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next