Advertisement
ಗೆಲುವಿಗೆ 468 ರನ್ ಗುರಿ ಪಡೆದಿರುವ ಇಂಗ್ಲೆಂಡ್, 4ನೇ ದಿನದಾಟದ ಅಂತ್ಯಕ್ಕೆ 82 ರನ್ನಿಗೆ 4 ಪ್ರಮುಖ ವಿಕೆಟ್ ಉದುರಿಸಿಕೊಂಡಿದೆ. ಬರ್ನ್ಸ್ (34), ಹಮೀದ್ (0), ಮಲಾನ್ (20) ಮತ್ತು ದಿನದ ಅಂತಿಮ ಓವರ್‌ನಲ್ಲಿ ನಾಯಕ ಜೋ ರೂಟ್ (24) ಅವರ ವಿಕೆಟ್ ಕಳೆದುಕೊಂಡು ಭಾರೀ ಆಘಾತಕ್ಕೆ ಸಿಲುಕಿದೆ. ಜೇ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್ ಮತ್ತು ಮೈಕಲ್ ನೆಸೆರ್ ಆಂಗ್ಲರಿಗೆ ಕಂಟಕವಾಗಿ ಪರಿಣಮಿಸಿದ್ದಾರೆ.
ಇಂಗ್ಲೆಂಡ್ ಇನ್ನೂ 386 ರನ್ ಗಳಿಸಬೇಕಿದೆ. ಇದಂತೂ ಸಾಧ್ಯವಿಲ್ಲದ ಮಾತು. ಹಾಗೆಯೇ ಆರರಲ್ಲಿ ಒಂದೆರಡು ವಿಕೆಟ್‌ಗಳನ್ನಾದರೂ ಉಳಿಸಿಕೊಂಡು ಪಂದ್ಯವನ್ನು ಡ್ರಾಗೊಳಿಸುವುದು ಕೂಡ ಈಗಿನ ಸ್ಥಿತಿಯಲ್ಲಿ ಅಸಾಧ್ಯವೆಂದೇ ಹೇಳಬೇಕು. ಕಾರಣ, ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ. ಹೀಗಾಗಿ ಕಾಂಗರೂ ಪಡೆಯ 2-0 ಮುನ್ನಡೆಯ ಬಗ್ಗೆ ಯಾವುದೇ ಅನುಮಾನ ಉಳಿದಿಲ್ಲ. 237 ರನ್ನುಗಳ ಬೃಹತ್ ಮುನ್ನಡೆ ಸಾಧಿಸಿದ ಬಳಿಕ ಆಸ್ಟ್ರೇಲಿಯ 9ಕ್ಕೆ 230 ರನ್ ಮಾಡಿ ದ್ವಿತೀಯ ಸರದಿಯನ್ನು ಡಿಕ್ಲೇರ್ ಮಾಡಿತು. ಮಾರ್ನಸ್ ಲಬುಶೇನ್ ಮತ್ತು ಹೆಡ್ ತಲಾ 51 ರನ್ ಹೊಡೆದರು. ಕ್ಯಾಮರಾನ್ ಗ್ರೀನ್ ಅಜೇಯ 33 ರನ್ ಮಾಡಿದರು. ಇಂಗ್ಲೆಂಡಿನ ಸ್ಟಾರ್ ಬೌಲರ್‌ಗಳಾದ ಆ್ಯಂಡರ್ಸನ್ ಮತ್ತು ಬ್ರಾಡ್ ವಿಶೇಷ ಯಶಸ್ಸು ಕಾಣಲಿಲ್ಲ. ತಲಾ ಒಂದು ವಿಕೆಟ್ ಕಿತ್ತರು. ರಾಬಿನ್ಸನ್, ರೂಟ್ ಮತ್ತು ಮಲಾನ್ ತಲಾ 2 ವಿಕೆಟ್ ಹಾರಿಸಿ ಸ್ಟ್ರೆಕ್ ಬೌಲರ್‌ಗಳನ್ನು ಮೀರಿ ನಿಂತರು.
Related Articles
Advertisement
ಇದನ್ನೂ ಓದಿ:ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್: ಶ್ರೀಕಾಂತ್‌ಗೆ ಬೆಳ್ಳಿ ,ಲಕ್ಷ್ಯ ಸೇನ್‌ಗೆ ಕಂಚು
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-9ಕ್ಕೆ 473 ಡಿಕ್ಲೇರ್ ಮತ್ತು 9ಕ್ಕೆ 230 ಡಿಕ್ಲೇರ್ (ಲಬುಶೇನ್ 51, ಹೆಡ್ 51, ಗ್ರೀನ್ ಔಟಾಗದೆ 33, ರೂಟ್ 27ಕ್ಕೆ 2, ಮಲಾನ್ 33ಕ್ಕೆ 2, ರಾಬಿನ್ಸನ್ 54ಕ್ಕೆ 2). ಇಂಗ್ಲೆಂಡ್-236 ಮತ್ತು 4 ವಿಕೆಟಿಗೆ 82 (ಬರ್ನ್ಸ್ 34, ರೂಟ್ 24, ಮಲಾನ್ 20, ರಿಚರ್ಡ್‌ಸನ್ 17ಕ್ಕೆ 2).
ಪ್ರಸಾರ ತಂಡದ ಸಿಬಂದಿಗೆ ಕೊರೊನಾಅಡಿಲೇಡ್ ಟೆಸ್ಟ್ ಪಂದ್ಯದ ಪ್ರಸಾರ ತಂಡದ ಸಿಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದ 4ನೇ ದಿನ ಈ ಪ್ರಕರಣ ಕಂಡುಬಂದಿದೆ. ಸೋಂಕಿತ ಸಿಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ, ಜತೆಗೆ ಸೋಂಕಿತನ ನಿಕಟ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚಲು ಸೂಚಿಸಲಾಗಿದೆ ಎಂದು ಕ್ರಿಕೆಟ್ ಸೌತ್ ಆಸ್ಟ್ರೇಲಿಯ ಪ್ರಕಟನೆಯಲ್ಲಿ ತಿಳಿಸಿದೆ.