ಕುಷ್ಟಗಿ: ಕೊಪ್ಪಳ ಜಿಲ್ಲೆಯಲ್ಲಿ ಮರಳು, ಕೆರೆಯಲ್ಲಿನ ಹೂಳು, ಮರಂ ಮಣ್ಣು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಸಂಬಂಧಿಸಿದ ಇಲಾಖೆಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಲೋಕಾಯುಕ್ತ ಸಿಪಿಐ ಎಚ್. ದೊಡ್ಡಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕೆರೆಗಳ ಹೂಳೆತ್ತುವ ಹೆಸರಲ್ಲಿ ಕೆರೆಯ ಫಲವತ್ತಾದ ಮಣ್ಣನ್ನು ಇಟ್ಟಿಗೆ ಭಟ್ಟಿಗಳಿಗೆ, ಅದೇ ರೀತಿ ಮರಳು, ಮರಂ ಮಣ್ಣು ಸಾಗಿಸಿದ ಹೆದ್ದಾರಿ, ರೈಲ್ವೆ ಕಾಮಗಾರಿಗಳಿಗೆ ರಾಯಲ್ಟಿ ವಿಧಿಸಿರುವ ಉದಾಹರಣೆ ಇಲ್ಲ. ಕೆರೆಗಳಿಂದ ಮಣ್ಣು, ಮರಂ, ಮರಳು ಹೋಗಿದ್ದು, ಸರ್ಕಾರಕ್ಕೆ ರಾಯಲ್ಟಿ ಹೋಗಿಲ್ಲ. ರಾಯಲ್ಟಿ ಜಮೆಯಿಂದ 6 ತಿಂಗಳಿಗಾಗುವಷ್ಟು ಸಿಬ್ಬಂದಿ ವೇತನ ಕೊಡಬಹುದಾಗಿತ್ತು ಎಂದರು.
ಕೆರೆ ಒತ್ತುವರಿ: ಹೂಲಗೇರಾ ಗ್ರಾಮದ ದುರಗಪ್ಪ ಅವರು ಗ್ರಾಮದ ಕೆರೆ ಒತ್ತುವರಿಯಾಗಿದೆ ಅಲ್ಲಿ ಕಟ್ಟಡ ನಿರ್ಮಾಣವಾಗಿರುವ ಕುರಿತು ದೂರಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಅಧಿಕಾರಿಗಳು, ಸಾರ್ವಜನಿಕರು ಸರ್ಕಾರದ ಆಸ್ತಿ ಒತ್ತುವರಿಯನ್ನು ಸಂಬಂಧಿಸಿದ ಪಿಡಿಒ ಗಮನಕ್ಕೆ ತಂದರೂ ಕ್ರಮ ಇಲ್ಲವೇಕೆ? ಒತ್ತುವರಿಯಾದ ಕೆರೆಯಲ್ಲಿ ಮನೆ ನಿರ್ಮಿಸಲು ಎನ್‌ಒಸಿ ಯಾವ ಆಧಾರದ ಮೇರೆಗೆ ಕೊಟ್ಟಿರುವಿರಿ? ಎಂದು ಪಿಡಿಒ ಸಂಗನಗೌಡ ಅವರನ್ನು ಪ್ರಶ್ನಿಸಿದರು.
ಗ್ರಾಪಂ ಕಚೇರಿ ವಿವಾದ: ಹೂಲಗೇರಾ ಗ್ರಾಮದಲ್ಲಿ ಶಶಿಕಾಂತ ಪಾಟೀಲ ಎಂಬುವರು ಗ್ರಾಪಂ ಅಧ್ಯಕ್ಷರಾಗಿದ್ದಾಗ 20 ಗುಂಟೆ ಜಮೀನು ಗ್ರಾಪಂ ಕಟ್ಟಡಕ್ಕೆ ಬಿಟ್ಟು ಕೊಟ್ಟಿದ್ದು, ಇದೀಗ ಗ್ರಾಪಂ ಕಟ್ಟಡ ತಮ್ಮ ಜಮೀನಿನಲ್ಲಿದೆ ಎಂದು ವಾದಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಲೋಕಾಯುಕ್ತರ ಗಮನಕ್ಕೆ ತಂದರು. ವ್ಯಕ್ತಿ 20 ಗುಂಟೆ ಜಮೀನಿಗೆ ಸರ್ಕಾರದಿಂದ ಹಣ ಪಡೆದಿದ್ದು, ರಾಜಕೀಯ ಪ್ರಭಾವದ ಬಗ್ಗೆ ಪ್ರಸ್ತಾಪಿಸಿದರು. ಗ್ರಾಪಂ ಕಟ್ಟಡ ಯಾವ ಯೋಜನೆಯಡಿ ನಿರ್ಮಿಸಲಾಗಿದೆ ಎಂದು ಪೂರಕ ದಾಖಲೆ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಸಿಪಿಐ ಎಚ್. ದೊಡ್ಡಪ್ಪ ಭರವಸೆ ನೀಡಿದರು.
ಪಟ್ಟಣದಲ್ಲಿ ನಿವೇಶನವೊಂದು ಹುಸೇನಸಾಬ್ ಮುಕ್ತುಸಾಬ್ ಹೆಸರಲ್ಲಿದೆ. ಆದರೆ ಪುರಸಭೆಯವರು ಇದಕ್ಕೆ ಮೂಲ ದಾಖಲೆ ನೀಡುವಂತೆ ಮಾಜಿ ಸೈನಿಕರೊಬ್ಬರನ್ನು ಸತಾಯಿಸುತ್ತಿದ್ದಾರೆಂದು ನಿವೃತ್ತ ಗ್ರೇಡ್-2 ತಹಶೀಲ್ದಾರ್ ತಾಜುದ್ದೀನ್ ಆರೋಪಿಸಿದರು. ಇದಕ್ಕೆ ಲೋಕಾಯುಕ್ತ ಸಿಪಿಐ ಎಚ್. ದೊಡ್ಡಪ್ಪ ಪ್ರತಿಕ್ರಿಯಿಸಿ, ಸ್ಥಳೀಯವಾಗಿ ಪಂಚನಾಮೆ ನಡೆಸಿ, ಮುಂದಿನ ಕ್ರಮದ ಬಗ್ಗೆ ಯೋಜನಾ ನಿರ್ದೇಶಕರಿಗೆ ಪತ್ರ ಬರೆದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಇತ್ತು, ವಿನಾಕಾರಣ ಅಲೆದಾಡಿಸುವುದು ಸರಿಯಲ್ಲ. ತಂದೆ ಹೆಸರು ಬರೆಯುವಾಗ ಸಿಬ್ಬಂದಿ ತಪ್ಪು ಮಾಡಿರಬಹುದು. ಹುಸೇನಸಾಬ್ ಯಾರೆಂಬುದು ಮೊದಲು ಖಾತ್ರಿ ಪಡಿಸಿಕೊಂಡು, ನಿವೇಶನದ ವಾಸ್ತವ ಸ್ಥಿತಿಯ ಬಗ್ಗೆ ಸ್ಥಳೀಯವಾಗಿ ಪಂಚನಾಮೆ ವರದಿ ನೀಡುವಂತೆ ಸೂಚಿಸಿದರು.
ಇದೇ ವೇಳೆ ಕೃಷ್ಣಗಿರಿ ಕಾಲೋನಿಯ ನಿವೃತ್ತ ಕೃಷಿ ಅಧಿಕಾರಿ ಮೋಹನಸಿಂಗ್ ಅವರು, ಮನೆಗೆ ಸಂಬಂಧಿಸಿದ ಖಾತಾ ಉತಾರ ನೀಡಲು ಪುರಸಭೆ ವಿನಾಕಾರಣ ಅಲೆದಾಡಿಸುತ್ತಿರುವ ಕುರಿತು, ಅರಣ್ಯ ಇಲಾಖೆಯ ಸೌರ ದೀಪ, ಹೀಟರ್ ವಿತರಣೆಯಲ್ಲಿ ಎಸ್ಸಿ ಜನಾಂಗಕ್ಕೆ ಅನ್ಯಾಯದ ಬಗ್ಗೆ ಹುಸೇನಪ್ಪ ಮುದೇನೂರು ಪ್ರಶ್ನಿಸಿದರು. ಅರಾಳಗೌಡ್ರು ಪಪೂ ಕಾಲೇಜಿನ ಎಕರೆ ಜಮೀನಿನಲ್ಲಿ ದಾರಿಯ ಸಮಸ್ಯೆಯ ಶಿವಕುಮಾರ ಅರಾಳಗೌಡ್ರು ಲೋಕಾಯುಕ್ತರ ಗಮನಕ್ಕೆ ತಂದರು. ಸರ್ಕಾರದ ಜಾಗೆಯಲ್ಲಿ ಗಿಡಮರ ಕಡಿಯುವುದಕ್ಕೆ ಅರಣ್ಯ ಇಲಾಖೆಯ ಪರವಾನಗಿ ಪಡೆಯಬೇಕು. ರೈತರ ಜಮೀನಿನಲ್ಲಿ ರೈತರು ಕಡಿದರೆ ಸಮಸ್ಯೆಯಿಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಹೇಳಿಕೆಗೆ ಲೋಕಾಯುಕ್ತರು ಅಚ್ಚರಿ ವ್ಯಕ್ತಪಡಿಸಿದರು. ಹೆದ್ದಾರಿ ಬದಿಯ ಡಾಬಾಗಳಲ್ಲಿ ಮದ್ಯ ಮಾರಾಟ, ತೂಕ ಮೋಸದ ಬಗ್ಗೆ ಲೋಕಾಯುಕ್ತರು ಪ್ರಸ್ತಾಪಿಸಿದರು. ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್, ಲೋಕಾಯುಕ್ತ ಪಿಎಸ್‌ಐ ವಿಕಾಸ ಲಮಾಣಿ, ತಾಪಂ ಇಒ ಕೆ. ತಿಮ್ಮಪ್ಪ ಹಾಜರಿದ್ದರು.