Advertisement

ಉಕ್ಕಿನ ಮಹಿಳೆ ಶರ್ಮಿಳಾಗೆ ದಯನೀಯ ಸೋಲು

03:45 AM Mar 12, 2017 | Team Udayavani |

ಜನಪ್ರಿಯತೆ, ಆಡಳಿತ ವಿರೋಧಿ ಅಲೆ, ಆಪ್‌ ಬೆಂಬಲವಿದ್ದರೂ 90ಕ್ಕಿಂತ ಹೆಚ್ಚು ಮತ ಗಳಿಸಲಿಲ್ಲ!

Advertisement

ಇಂಫಾಲ್‌: ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿರುದ್ಧ 16 ವರ್ಷಗಳ ಕಾಲ ಎಡೆಬಿಡದೆ ಉಪವಾಸ ಸತ್ಯಾಗ್ರಹ ನಡೆಸಿ, ಈಚೆಗಷ್ಟೇ ಕೈಬಿಟ್ಟಿದ್ದ ಉಕ್ಕಿನ ಮಹಿಳೆ ಇರೋಮ್‌ ಶರ್ಮಿಳಾ ಚುನಾವಣೆಯಲ್ಲಿ ದಯನೀಯ ಸೋಲನುಭವಿಸಿದ್ದಾರೆ. ಹೀಗಾಗಿ ಸಕ್ರಿಯ ರಾಜಕೀಯದಿಂದಲೇ ದೂರ ಸರಿಯುವುದಾಗಿ ಹೇಳಿದ್ದು, ತಮ್ಮ ಪಕ್ಷ ಪೀಪಲ್ಸ್‌ ರಿಸರ್ಜನ್ಸ್‌ ಆ್ಯಂಡ್‌ ಜಸ್ಟೀಸ್‌ ಅಲಯನ್ಸ್‌ (ಪಿಆರ್‌ಜೆಎ) ಕಾಯ್ದೆ ವಿರುದ್ಧ ಹೋರಾಟ ಮುಂದುವರಿಸಲಿದೆ ಎಂದಿದ್ದಾರೆ.
ಕಾಂಗ್ರೆಸ್‌ ಅಭ್ಯರ್ಥಿ, ಮುಖ್ಯಮಂತ್ರಿ ಓಕ್ರಮ್‌ ಐಬೋಬಿ ವಿರುದ್ಧ ಸ್ಪರ್ಧಿಸಿದ್ದ ಶರ್ಮಿಳಾ ಕೇವಲ 90 ಮತಗಳನ್ನು ಗಳಿಸಿದ್ದು, ಸ್ಪಷ್ಟವಾಗಿ ತಿರಸ್ಕೃತಗೊಂಡಿದ್ದಾರೆ. ಓಕ್ರಮ್‌ ಐಬೋಬಿ 18,000 ಕ್ಕಿಂತ ಅಧಿಕ ಮತ ಗಳಿಸುವಲ್ಲಿ ಸಫ‌ಲರಾಗಿದ್ದಾರೆ.

ತಮ್ಮ 16 ವರ್ಷಗಳ ಉಪವಾಸ ಸತ್ಯಾಗ್ರಹವನ್ನು ಕಳೆದ ವರ್ಷ ಆಗಸ್ಟ್‌ನಲ್ಲಷ್ಟೇ ನಿಲ್ಲಿಸಿದ್ದ ಶರ್ಮಿಳಾ, ಪೀಪಲ್ಸ್‌ ರಿಸರ್ಜನ್ಸ್‌ ಆ್ಯಂಡ್‌ ಜಸ್ಟೀಸ್‌ ಅಲಯನ್ಸ್‌ (ಪಿಆರ್‌ಜೆಎ) ಹೆಸರಿನ ಹೊಸ ರಾಜಕೀಯ ಪಕ್ಷವನ್ನೂ ಸ್ಥಾಪಿಸಿದ್ದರು. ಹಾಲಿ ಮುಖ್ಯಮಂತ್ರಿ ವಿರುದ್ಧವೇ ಖುರಾಯಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಸಂಚಲನೆ ಉಂಟುಮಾಡಿದ್ದರು. ಆಡಳಿತ ವಿರೋಧಿ ಅಲೆಯ ಮಧ್ಯೆ ದಶಕಗಳ ಹೋರಾಟದಿಂದ ಗಳಿಸಿದ್ದ ಜನಪ್ರಿಯತೆಯ ಹಿನ್ನೆಲೆಯಲ್ಲಿ ಗೆಲುವಿನ ನಿರೀಕ್ಷೆಯನ್ನೂ ಮೂಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಆಮ್‌ ಆದ್ಮಿ ಕೂಡ ಇವರನ್ನು ಬೆಂಬಲಿಸಿತ್ತು. ಆದರೆ, ಚುನಾವಣೆ ಚದುರಂಗದಲ್ಲಿ ಇನ್ನಿಲ್ಲದಂತೆ ಸೋತುಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next