Advertisement

ನದಿ ನೀರಿನ ಸಮರ್ಪಕ ಬಳಕೆಯಲ್ಲಿ ವಿಫಲ

06:00 PM Apr 24, 2022 | Team Udayavani |

ತರೀಕೆರೆ: ಆಡಳಿತಾರೂಢ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ನದಿ ನೀರಿನ ಸಮರ್ಪಕ ಬಳಕೆ ಮಾಡುವಲ್ಲಿ ವಿಫಲವಾಗಿವೆ ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿದರು. ಶನಿವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ‘ಜನತಾ ಜಲಧಾರೆ ರಥಯಾತ್ರೆ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿ ನೀರಿನ ಸದ್ಬಳಕೆಯಾಗಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ರಾಜ್ಯವ್ಯಾಪಿ ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿದ್ದಾರೆ. ಸಮಗ್ರ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯದಲ್ಲಿ ರಾಜಕಾರಣ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಜನತೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸಿ ಸರ್ಕಾರ ರಚನೆಗೆ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ, ರಾಜ್ಯದಲ್ಲಿ ಮುಂದಿನ ಬಾರಿ ಅಧಿಕಾರ ಹಿಡಿಯಲು ಜೆಡಿಎಸ್‌ ಮಿಷನ್‌ 123 ಕಾರ್ಯಾಚರಣೆ ನಡೆಸುತ್ತಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮುಂದಿನ ಬಾರಿಯೂ ಸಿಎಂ ಆಗಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದು, ಬಗೆಹರಿಸುವ ಪ್ರಯತ್ನ ಯಾರಿಂದಲೂ ಆಗುತ್ತಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಅಡ್ಜೆಸ್ಟ್ ಮೆಂಟ್‌ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್‌ ನಾಯಕರು ಶಾಸಕರ ಆಡಳಿತದ ವೈಫಲ್ಯದ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ದೂರಿದರು. ಬಗರ್‌ ಹುಕುಂ ಸಾಗುವಳಿದಾರರಿಂದ ಎಕರೆಗಿಷ್ಟು ಹಣ ಪಡೆದು ದಾಖಲೆ ಮಾಡಿಕೊಡಲಾಗುತ್ತಿದ್ದು, ಶಾಸಕರು ಇದಕ್ಕೆ ಉತ್ತರಿಸಬೇಕಿದೆ. ಹಣ ಪಡೆಯುತ್ತಿಲ್ಲ ಎನ್ನುವುದಾದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ಅಥವಾ ಗ್ರಾಮ ದೇವತೆ ಶ್ರೀ ಸಾಲು ಮರದಮ್ಮ ದೇವಿ ಮುಂದೆ ಆಣೆ ಪ್ರಮಾಣ ಮಾಡಲು ಸಿದ್ಧರಾಗಲಿ. ಎಚ್‌. ರಂಗಾಪುರ ಗ್ರಾಮದ ನಿವೇಶನ ರಹಿತರು ನಿರ್ಮಿಸಿದ್ದ ಗುಡಿಸಲುಗಳನ್ನು ಅಧಿಕಾರಿಗಳ ಮೂಲಕ ಧ್ವಂಸಗೊಳಿಸಿದ್ದಾರೆ. ಭಾವನಾತ್ಮಕ ವಿಚಾರಗಳ ಮೂಲಕ ಭಾವೈಕ್ಯತೆ ಹಾಳುಗೆಡವುತ್ತಿರುವ ಬಿಜೆಪಿ ಸರ್ಕಾರ ಜನರ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದು, ಮುಂದಿನ ಬಾರಿ ಜನ ಸಾರಾಸಗಟಾಗಿ ಧಿಕ್ಕರಿಸಲಿದ್ದಾರೆ ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌, ಜೆಡಿಎಸ್‌ ರಾಜ್ಯ ಸಮಿತಿ ಸದಸ್ಯರಾದ ಎಸ್‌. ಶಿವಾನಂದ್‌, ಮಂಜುನಾಥ್‌ ಕಾಶಯ್ಯ, ಪ್ರಮುಖರಾದ ಲಕ್ಕವಳ್ಳಿ ಉಮಾಶಂಕರ್‌, ಎಂ.ಡಿ. ದೇವೇಗೌಡ, ಟಿ.ಎಂ. ಉಮಾಶಂಕರ್‌, ಇಬ್ರಾಹಿಂ, ಮಂಜುಳಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next