Advertisement
ವಿಶೇಷವೆಂದರೆ, ಕೇರಳ ಸರಕಾರದ ಪ್ರಬಲ ಲಾಬಿಗೆ ಮಣಿದು ಆ ರಾಜ್ಯವನ್ನು ಪರಿಸರ ಸೂಕ್ಷ್ಮ ಪ್ರದೇಶ ಪಟ್ಟಿಯಿಂದ ಸದ್ಯಕ್ಕೆ ಕೈಬಿಟ್ಟಿದ್ದರೆ, ರಾಜ್ಯದ ಕೋರಿಕೆಗೆ ಮನ್ನಣೆ ನೀಡಲೇ ಇಲ್ಲ. 2015ರಲ್ಲಿ ಹೊರಡಿಸಿದ್ದ ಅಧಿಸೂಚನೆ ಅವಧಿ ಶುಕ್ರವಾರ(ಮಾ. 4)ಕ್ಕೆ ಮುಗಿಯು ತ್ತಿರುವುದರಿಂದ ಕೇಂದ್ರ ಪರಿಸರ ಇಲಾಖೆ ಫೆ. 27ರಂದೇ ಹೊಸ ಅಧಿಸೂಚನೆ ಹೊರಡಿಸಿದೆ. ಹಿಂದಿನ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿ ಕೆಲ ವೊಂದು ಬದಲಾವಣೆ ಮಾಡುವಂತೆ ಕೋರಿ ರಾಜ್ಯ ಸರಕಾರ ವರದಿ ಸಲ್ಲಿಸಿತ್ತು. ಆದರೆ ಆ ವರದಿಯನ್ನು ಪರಿಗಣಿಸದೆ ಈ ಹಿಂದಿನ ಅಧಿ ಸೂಚನೆಯಲ್ಲಿ ಪ್ರಸ್ತಾವಿಸಿದ್ದ ಷರತ್ತುಗಳನ್ನೇ ಯಥಾಸ್ಥಿತಿ ಮುಂದುವರಿಸಿ ಹೊಸ ಅಧಿಸೂಚನೆಯನ್ನು ಹೊರಡಿಸಿರುವುದು ಅಚ್ಚರಿ ಮೂಡಿಸಿದೆ.
Related Articles
Advertisement
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ 11 ಹಳ್ಳಿಗಳು, ಸುಳ್ಯ ತಾಲೂಕಿನ ಒಟ್ಟು 18 ಗ್ರಾಮಗಳು, ಬೆಳ್ತಂಗಡಿ ತಾಲೂಕಿನ ಒಟ್ಟು 17 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
ಹಳೇ ಅಧಿಸೂಚನೆಗೆ ಮರುಜೀವಇಡೀ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಹಿಂದೆ ಡಾ| ಕಸ್ತೂರಿರಂಗನ್ ಹಾಗೂ ವಿ.ಎನ್. ಗಾಡ್ಗಿಲ್ ಅವರು ಸಿದ್ಧಪಡಿಸಿದ್ದ ವರದಿ ಆಧರಿಸಿಕೊಂಡು ಕೇಂದ್ರ ಸರಕಾರವು ಕರ್ನಾಟಕ ರಾಜ್ಯ ಸಹಿತ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಹಾದುಹೋಗುವ ರಾಜ್ಯಗಳಲ್ಲಿನ ನಿಗದಿತ ಜನವಸತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂಬುದಾಗಿ ಗುರುತಿಸಿ 2013ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಕರಡು ಅಧಿಸೂಚನೆಗೆ ಕರ್ನಾಟಕ ಸಹಿತ ಎಲ್ಲ ರಾಜ್ಯಗಳಿಂದಲೂ ತೀವ್ರ ವಿರೋಧ, ಆಕ್ಷೇಪಣೆ ವ್ಯಕ್ತವಾಗಿತ್ತು. ಏಕೆಂದರೆ, ಅಧಿಸೂಚನೆಯಲ್ಲಿ ಗುರುತಿಸಲಾಗಿದ್ದ ಹಳ್ಳಿಗಳಲ್ಲಿ ಜನಜೀವನ ಯಥಾಸ್ಥಿತಿ ಮುಂದುವರಿಸುವುದಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಅಧಿಸೂಚನೆಗೆ ಅಂದಿನ ಮುಖ್ಯಮಂತ್ರಿ ಸದಾನಂದಗೌಡರ ನೇತೃತ್ವದ ಸರಕಾರವು ವಿರೋಧವನ್ನು ವ್ಯಕ್ತಪಡಿಸಿತ್ತು. ಜತೆಗೆ ಜನವಸತಿಗೆ ತೊಂದರೆಯಾಗದಂತೆ ಕೆಲವೊಂದು ಬದಲಾವಣೆ ಮಾಡುವಂತೆ ಕೋರಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ರಮಾನಾಥ ರೈ, ” ಕೇಂದ್ರ ಸರಕಾರ ಹೊರಡಿಸಿರುವ ಈ ಅಧಿಸೂಚನೆ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ಆದರೆ, ಈ ಹಿಂದಿನ ಅಧಿಸೂಚನೆಗೆ ಅಂದಿನ ನಮ್ಮ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜತೆಗೆ ಅಧಿಸೂಚನೆಯನ್ನು ಕೆಲವೊಂದು ಮಾರ್ಪಾಟುಗಳನ್ನು ಮಾಡಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ತೊಂದರೆ ಆಗದಂತೆ ಒಂದು ವರದಿಯನ್ನು ತಯಾರಿಸಲಾಗಿತ್ತು. ಈ ವರದಿಯನ್ನು ಕೇಂದ್ರ ಸರಕಾರಕ್ಕೂ ಕಳುಹಿಸಲಾಗಿತ್ತು. ಆದರೆ, ನಮ್ಮ ರಾಜ್ಯದ ಬೇಡಿಕೆಗಳನ್ನು ಪರಿಗಣಿಸದೆ ಈಗ ಮತ್ತೆ ಹಿಂದಿನ ಅಧಿಸೂಚನೆಯನ್ನೇ ಹೊರಡಿಸಿದ್ದರೆ ಅದು ಗಂಭೀರ ವಿಚಾರ. ಹೀಗಾಗಿ, ಒಂದೆರಡು ದಿನಗಳಲ್ಲಿ ಅಧಿಸೂಚನೆ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯದ ಜನರ ಹಿತ ಕಾಪಾಡುವ ಜತೆಗೆ ಪಶ್ಚಿಮ ಘಟ್ಟದ ಅರಣ್ಯ ಸಂಪತ್ತಿನ ರಕ್ಷಣೆಗೆ ಅನುಕೂಲವಾಗುವಂತ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಪಶ್ಚಿಮ ಘಟ್ಟದ ಜನವಸತಿ ಪ್ರದೇಶದಲ್ಲಿ ವಾಸಿಸುವವರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಕ್ಕೆ ಎಲ್ಲ ಪ್ರಯತ್ನ ನಡೆಸಲಾಗುವುದು’ ಎಂದು ಅವರು “ಉದಯವಾಣಿ’ಗೆ ತಿಳಿಸಿದರು.