ಹುಬ್ಬಳ್ಳಿ: ಅಸಂಘಟಿತ ಕಾರ್ಮಿಕರಲ್ಲಿ ಒಬ್ಬರಾದ ಶಾಮಿಯಾನ ಕಾರ್ಮಿಕರಿಗೂ ಕಾರ್ಮಿಕ ಇಲಾಖೆಯಿಂದ ಕಲ್ಯಾಣ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರವು ಶ್ರಮಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಕೇಶ್ವಾಪುರ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ದಲ್ಲಿ ಉತ್ತರ ಕರ್ನಾಟಕ ಶಾಮಿಯಾನ ಸಪ್ಲಾಯರ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಜೇಶನ್ ನವದೆಹಲಿ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಶಾಮಿಯಾನ ಸಪ್ಲಾಯರ್ ಅಸೋಸಿಯೇಶನ್ ಹುಬ್ಬಳ್ಳಿ ಆಯೋಜಿಸಿರುವ 18ನೇ ಹಾಗೂ ಶೃಂಗಾರ 2ನೇ ಮಹಾ ಅಧಿವೇಶನದ ಎರಡನೇ ದಿನದ
ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಮಿಯಾನ ಉದ್ಯಮಿದಾರರು ತಮ್ಮ ವಹಿವಾಟಿನಲ್ಲಿನ ಒಂದಿಷ್ಟು ಹಣ ಸೆಸ್ ರೂಪದಲ್ಲಿ ಸರ್ಕಾರಕ್ಕೆ ವಿನಿಯೋಗಿಸಿದರೆ ಸರ್ಕಾರ ಒಂದಿಷ್ಟು ಅನುದಾನ ಒದಗಿಸುವ ಮೂಲಕ ಶಾಮಿಯಾನ ಉದ್ಯಮದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ, 1ಲಕ್ಷಕ್ಕೂ ಅಧಿಕ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ, ಭದ್ರತೆ ಒದಗಿಸುವ ಆಲೋಚನೆ ಹೊಂದಿದೆ. ಶಾಮಿಯಾನ ಉದ್ಯಮದಾರರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಕಡ್ಡಾಯವಾಗಿ ಗ್ರೂಪ್ ಇನ್ಸುರೆನ್ಸ್ ಮಾಡಿದರೆ ಕಾರ್ಮಿಕರ ಜತೆಗೆ ಮಾಲೀಕರಿಗೂ ಹೆಚ್ಚು ಅನುಕೂಲವಾಗಲಿದೆ ಎಂದರು.
ಆನ್‌ಲೈನ್ ಸೇವಾ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಲ್ಯಾಣ ಸೌಲಭ್ಯ ಕಲ್ಪಿಸಲು ಆನ್‌ಲೈನ್ ಕಂಪನಿಯವರಿಂದ ಸೆಸ್ ಸಂಗ್ರಹಿಸಲು ಸರ್ಕಾರ ಮುಂದಾಗಿದೆ. ಅದೇ ರೀತಿ ಶಾಮಿಯಾನ ಉದ್ಯಮದಾರರು ಮುಂದಾದರೆ ಸರ್ಕಾರ ಮುತುವರ್ಜಿ ವಹಿಸಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಒತ್ತು ಕೊಡಲಿದೆ. ದೇಶದಲ್ಲಿ ಕೃಷಿ, ಕಟ್ಟಡ ಕಾರ್ಮಿಕರಿಂದ ಹಿಡಿದು ಶೇ. 90ಅಸಂಘಟಿತ ಕಾರ್ಮಿಕರಿದ್ದಾರೆ. ಹೀಗಾಗಿ ಟ್ರಾನ್ಸ್‌ಪೊàರ್ಟ್ ಮೇಲಿನ ಸೆಸ್‌ನಲ್ಲಿ ಶೇ.3-4ಸೆಸ್ ಪಡೆದು ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ. ಶಾಮಿಯಾನ ಉದ್ಯಮಕ್ಕೆ ವಿಧಿಸಲಾದ ಶೇ.18 ಜಿಎಸ್‌ಟಿಯನ್ನು ಶೇ.6ಕ್ಕೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು. ಶಾಮಿಯಾನ ಸಂಘದವರು ಕಡಿಮೆ ದರದಲ್ಲಿ ಗೋದಾಮು
ಖರೀದಿಸುವ ಸಲುವಾಗಿ ಕೆಐಎಡಿಬಿ ಅಥವಾ ಇತರೆ ಇಲಾಖೆಯಲ್ಲಿ ಜಾಗ ಗುರುತಿಸಿದರೆ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಅನುಕೂಲ ಮಾಡಲು ಪ್ರಯತ್ನಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಮಾತನಾಡಿ, ಶಾಮಿಯಾನ ಮಾಲೀಕರು ಸಂಘಟನೆ ಮಾಡಿ ಕಾರ್ಮಿಕರಿಗೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಸುಖ, ದುಃಖ ಹಂಚಿಕೆಕೊಳ್ಳುವ ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವವರ ಹಿತ ಕಾಯಲು, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸಂಘ ಸಹಾಯಕಾರಿಯಾಗಿದೆ. ಸರಕಾರದಿಂದ ಎಲ್ಲ ರೀತಿಯಲ್ಲೂ ತಮಗೆ ಸಹಕಾರ ನೀಡಲು ಪ್ರಯತ್ನಿಸಲಾಗುವುದು. ಅದರೊಟ್ಟಿಗೆ ಶಾಮಿಯಾನ ಉದ್ಯಮದಾರರು ಆಧುನಿಕ ತಂತ್ರಜ್ಞಾನ ಬಳಸಿ ವೃತ್ತಿಗೆ ಹೊಸ ಮೆರಗು ತರಬೇಕು ಎಂದರು.
ಪಾಲಿಕೆ ಸದಸ್ಯ ಮಯೂರ ಮೋರೆ, ಅನಿಲಕುಮಾರ ಪಾಟೀಲ, ಎನ್. ರಾಮರಾವ್, ಕೆ. ನರಸಿಂಹಮೂರ್ತಿ ಅಪ್ಪಣ್ಣ, ರವಿ ಶೆಟ್ಟಿ, ಜಿ. ಶ್ರೀನಿವಾಸರಾವ್, ಗಂಗಾಧರ ದುಬೆ, ಮನೋಹರ ಶೆಟ್ಟಿ, ಬಿ. ಕಿಶೋರ, ಮೋಹನ ಗಜಕೋಶ ಸೇರಿದಂತೆ ವಿವಿಧ ರಾಜ್ಯ ಮತ್ತು
ಜಿಲ್ಲೆಗಳ ಶಾಮಿಯಾನ ಸಂಘದ ಪದಾಧಿಕಾರಿಗಳು, ಕಾರ್ಮಿಕರು ಮೊದಲಾದವರಿದ್ದರು. ಬಿ.ಎಂ. ಸೋಮಶೇಖರ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಜಿ. ಪೂರ್ಣಚಂದ್ರ ರಾವ್ ಪ್ರಾಸ್ತಾವಿಕ ಮಾತನಾಡಿದರು.