ಕುಷ್ಟಗಿ: ಕಳೆದ 25 ವರ್ಷಗಳಿಂದ ಒಂದಿಲ್ಲ ಒಂದು ಕಾರಣದಿಂದ ಅಭಿವೃದ್ಧಿ ವಂಚಿತವಾಗಿರುವ ಕುಷ್ಟಗಿ ಪಟ್ಟಣದ 3ನೇ ವಾರ್ಡಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ವಾರ್ಡಿನ ನಿವಾಸಿಗಳು ಬುಧವಾರ ಪುರಸಭೆಗೆ ಮನವಿ ಸಲ್ಲಿಸಿದರು.
3ನೆ ವಾರ್ಡಿನ ವಾಪ್ತಿಯಲ್ಲಿರುವ ಶ್ರೀ ಅನ್ನದಾನೇಶ್ವರ ನಗರ, ಶ್ರೀ ಬುತ್ತಿಬಸವೇಶ್ವರ ನಗರ, ಗೌರಿನಗರ ಈ ಬಡಾವಣೆಗಳಲ್ಲಿ ಕಳೆದ 25 ವರ್ಷಗಳಿಂದ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲಿಯವರೆಗೆ ಸಮರ್ಪಕವಾಗಿ ಸಿಕ್ಕಿಲ್ಲ. ಸದರಿ ವಾರ್ಡ ಪ್ರತಿನಿಧಿಸುವ ವಾರ್ಡ ಸದಸ್ಯರ ನಿರ್ಲಕ್ಷವೂ ಇದೆ. ವಾರ್ಡಿನ ಈಗಿನ ಸದಸ್ಯೆ ಗೀತಾ ತುರಕಾಣಿ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವುದು ಬಿಟ್ಟರೆ ಅಭಿವೃದ್ಧಿಗೆ ಗಮನ ಹರಿಸದೇ ಇರುವುದು ಈ ವಾರ್ಡಿನ ದೌರ್ಭಾಗ್ಯ ಆಗಿದೆ.
ಇಲ್ಲಿನ ನಿವಾಸಿಗಳು ತಪ್ಪದೇ ತಮ್ಮ ಗೃಹ ಹಾಗೂ ನಿವೇಶನಗಳಿಗೆ ಪುರಸಭೆ ನಿಗದಿಪಡಿಸಿದ ತೆರಿಗೆಯನ್ನು ಭರಣ ಮಾಡಿದರೂ ಸಹ ಇಲ್ಲಿನ ನಾಗರೀಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿಯೇ ಇದ್ದಾರೆ. ಸಮರ್ಪಕ ಚರಂಡಿ ವ್ಯವಸ್ಥೆ ಮೊದಲಾದ್ಯತೆಯಾಗಿದೆ.
ಮುಖ್ಯ ಹಾಗೂ ಸಂಪರ್ಕ ರಸ್ತೆಗಳ ಜೋಡಣೆ ಮತ್ತು ಅಭಿವೃದ್ಧಿ, ವಿದ್ಯುತ್ ಕಂಬಗಳು ಮತ್ತು ದೀಪಗಳನ್ನು ಸಕಾಲದಲ್ಲಿ ನಿರ್ವಹಣೆ. ಕಸ ಹಾಗೂ ಘನತ್ಯಾಜ್ಯಗಳನ್ನು ಶೀಘ್ರ ವಿಲೇವಾರಿ ಮಾಡುವುದು. ರಾಜಕಾಲುವೆಯ ಗಡಿ ಗುರುತಿಸಿ, ಆತಿಕ್ರಮಣ ತೆರವುಗೊಳಿಸಿ ಕೂಡಲೇ ನಿರ್ಮಿಸಬೇಕಿದೆ. ಸದರಿ ವಾರ್ಡಿನ ವ್ಯಾಪ್ತಿಯ ಉದ್ಯಾನವನಗಳನ್ನು ಗುರುತಿಸಿ, ಒತ್ತುವರಿ ತೆರವು, ಪರಿವರ್ತಿತ ಉದ್ಯಾನವನಗಳನ್ನು ಮೂಲಸ್ವರೂಪದಲ್ಲಿ ನಾಮಫಲಕ ಅಳವಡಿಸಿ ಅಭಿವೃದ್ಧಿಪಡಿಸುವುದು.
ಈ ವಾರ್ಡಿಗೆ ಹೊಂದಿಕೊಂಡಿರುವ ಕೊಪ್ಪಳ ರಸ್ತೆಗೆ ಬೇಕಾಬಿಟ್ಟಿಯಾಗಿ ಬಿಸಾಡಿರುವ ತ್ಯಾಜ್ಯವಸ್ತುಗಳಿಂದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ಬಿಸಾಡದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಕಂದಾಯ ಅಧಿಕಾರಿ ಖಾಜಾ ಹುಸೇನ್, ರಾಘವೇಂದ್ರ ಬೇನಾಳ ಅವರಿಗೆ ಮನವಿ ಸಲ್ಲಿಸಿದರು.
3ನೇ ವಾರ್ಡ ರಹವಾಸಿ ಸಂಘದ ಶಾರದಾ ಕಟ್ಟಿಮನಿ, ಡಿ.ಬಿ.ಗಡೇದ, ಅಭಿನಂದನ್ ಗೋಗಿ,ಎ.ವೈ.ಲೋಕರೆ, ಶುಕರಾಮಪ್ಪ ಗೋತಗಿ, ಈಶಪ್ಪ ತಳವಾರ, ರಾಘವೇಂದ್ರ ನೀಲಿ, ಶಶಿಧರ ಗುಮಗೇರಿ,ಬಸವರಾಜ ಗಾಣಗೇರ, ತಿರುಮಲರಾವ್ ದಂಡಿನ, ನಾಗರಾಜ ಶೆಟ್ಟರ್ ಮತ್ತೀತರಿದ್ದರು.