Advertisement

Facilities of influentials In Jail: ಜೈಲಿನಲ್ಲಿ ಪ್ರಭಾವಿಗಳ ಐಷಾರಾಮಿ ಜೀವನ!

12:50 AM Aug 28, 2024 | Team Udayavani |

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಸಾಕಷ್ಟು ಸದ್ದು ಮಾಡುತ್ತಿದೆ. ಈ ರೀತಿಯ ರಾಜಾತಿಥ್ಯ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ “ಪ್ರಭಾವಿ’ಗಳ ಸಕಲ ಸೌಲಭ್ಯಗಳನ್ನು ಪಡೆದಿದ್ದಾರೆ. ಈಗಲೂ ಹಲವರು ಪಡೆಯುತ್ತಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Advertisement

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ!
ಕೈದಿಗಳ ವಿಶೇಷ ರಾಜಾತಿಥ್ಯ ಕಾರಣಕ್ಕಾಗಿ ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಈ ಹಿಂದೆಯೂ ಹಲವು “ಪ್ರಭಾವಿ’ಗಳಿಗೆ ವಿಶೇಷ ಸೌಲಭ್ಯ ಒದಗಿಸಿದ್ದಕ್ಕಾಗಿ ರಾಷ್ಟ್ರದ ಗಮನ ಸೆಳೆದಿತ್ತು. 2017ರಲ್ಲಿ ಜೈಲು ಐಜಿಪಿಯಾಗಿದ್ದ ಡಿ.ರೂಪಾ ಅವರು ಅಗ್ರಹಾರದಲ್ಲಿನ ಅಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಆಗ ಭಾರೀ ಚರ್ಚೆ ನಡೆದಿತ್ತು. ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದ ಕೆಲವು ಪ್ರಭಾವಿ ಕೈದಿಗಳ ಮಾಹಿತಿ ಇಲ್ಲಿದೆ.

ಶಶಿಕಲಾಗೆ ಪ್ರತ್ಯೇಕ ಅಡುಗೆ ಸೌಲಭ್ಯ
ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. 2017ರಲ್ಲಿ ಈ ಕುರಿತು ಮಾಹಿತಿಯನ್ನು ಐಪಿಎಸ್‌ ಅಧಿಕಾರಿ ಡಿ.ರೂಪಾ ಹೊರ ಹಾಕಿದ್ದರು. ಶಶಿಕಲಾಗೆ ಪ್ರತ್ಯೇಕ ಅಡುಗೆಮನೆ, ತಮ್ಮದೇ ಬಟ್ಟೆಗಳನ್ನು ಬಳಸಲು, ಅವಳನ್ನು ಭೇಟಿ ಮಾಡಲು ಬರುವವರಿಗೆ ಪ್ರತ್ಯೇಕ ಕೋಣೆ ನೀಡಲಾಗಿತ್ತು. ಜೀವಕ್ಕೆ ಬೆದರಿಕೆ ಇರದಿದ್ದರೂ ಐದು ಸೆಲ್‌ಗ‌ಳನ್ನು ಆಕೆಗೆ ನೀಡಲಾಗಿತ್ತು. ಆಕೆಗೆ ವಿಶೇಷ ಸೌಲಭ್ಯ ನೀಡಲು 2 ಕೋಟಿ ರೂ.ಲಂಚ ನೀಡುವ ಬಗ್ಗೆ ಮಾತುಕತೆ ನಡೆದಿತ್ತು ಎಂಬ ಮಾಹಿತಿ ಬಹಿರಂಗವಾಗಿತ್ತು.

ಮದನಿ ಆಸ್ಪತ್ರೆಯಲ್ಲಿದ್ದಿದ್ದೇ ಹೆಚ್ಚು!
2008ರ ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ, ಕೇರಳ ಪಿಡಿಪಿ ನಾಯಕ ಅಬ್ದುಲ್‌ ನಾಸರ್‌ ಮದನಿಗೂ ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿತ್ತು ಎಂಬ ಮಾಧ್ಯಮ ವರದಿಗಳಿವೆ. ಮದನಿ ಜೈಲಿನಲ್ಲಿದ್ದಕ್ಕಿಂತ ಆಸ್ಪತ್ರೆಯಲ್ಲೇ ಇದ್ದಿದ್ದು ಹೆಚ್ಚು. ಜತಗೆ, ಅನೇಕ ಬಾರಿ ಪೆರೋಲ್‌ ಕೂಡ ಪಡೆದಿದ್ದಾನೆ. ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಲು ಮದನಿಗೆ ಅನುಮತಿ ನೀಡಲಾಗಿತ್ತು.


ಕರೀಮ್‌ ಲಾಲ್‌ ತೆಲಗಿಗೆ ಬಾಡಿ ಮಸಾಜ್‌

ಬಹುಕೋಟ್ಯಂತರ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕರೀಮ್‌ ಲಾಲ್‌ ತೆಲಗಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿತ್ತು. ಆದರೆ 2017ರಲ್ಲಿ ಬೆಂಗಳೂರು ಸೆಂಟ್ರಲ್‌ ಜೈಲಿನ ಅಂದಿನ ಅಧಿಕಾರಿ ಅಲ್ಲಗಳೆದಿದ್ದರು. ಆತನಿಗೆ ಬಾಡಿ ಮಸಾಜ್‌ ಸೌಲಭ್ಯ ನೀಡಲಾಗಿತ್ತು ಎನ್ನಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತೆಲಗಿಗೆ ಇಬ್ಬರು ಸಹಾಯಕರನ್ನು ನೀಡಲಾಗಿದೆ ಎಂದಿದ್ದರು ಅಧಿಕಾರಿ. ವಿಶೇಷ ಸೌಲಭ್ಯಗಳಿಗೆ ಜೈಲು ಅಧಿಕಾರಿಗಳಿಗೆ ಆತ ಲಂಚ ನೀಡುತ್ತಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿತ್ತು.

Advertisement

ಕೆಲವರ ವಿಶೇಷ ಸೌಲಭ್ಯ ಮಾಹಿತಿ ನೀಡುವ “ಬಿಹೈಂಡ್‌ ಬಾರ್’ ಕೃತಿ
ಪತ್ರಕರ್ತೆ ಸುನೇತ್ರಾ ಚೌಧರಿ ಅವರ “ಬಿಹೈಂಡ್‌ ಬಾರ್: ಪ್ರಿಸನ್‌ ಟೇಲ್ಸ್‌ ಆಫ್ ಇಂಡಿಯಾಸ್‌ ಮೋಸ್ಟ್‌ ಫೇಮಸ್‌’ ಕೃತಿಯು ಜೈಲುಗಳಲ್ಲಿ ಪ್ರಭಾವಿಗಳಿಗೆ ವಿಐಪಿ ಸೌಲಭ್ಯ ಸಂಬಂಧಿ ಸಿದ ಅಧಿಕೃತ ಮಾಹಿತಿ ಯಾಗಿದೆ. ಅನ್ಕಾ ವರ್ಮಾ, ಪೀಟರ್‌ ಮುಖರ್ಜಿ, ಅಮರ್‌ ಸಿಂಗ್‌, ಪಪ್ಪು ಯಾದವ್‌, ಕೋಬಾಡ್‌ ಘಾÂಂಡಿ, ಎ. ರಾಜಾ ಸೇರಿ ಮತ್ತಿತರರ ಜೈಲು ಐಷಾರಾಮಿ ಜೀವನದ ಮಾಹಿತಿ ಇದರಲ್ಲಿದೆ.

ಬೇರೆ ಜೈಲಲ್ಲೂ ಅದೇ ಕತೆ!
ಸುಬ್ರತಾ ರಾಯ್‌ಗೆ ಎಸಿ ರೂಮ್‌!
ಬಹುಶಃ ತಿಹಾರ್‌ ಜೈಲಿನಲ್ಲಿ ಸುಬ್ರತಾ ರಾಯ್‌ಗೆ ಸಿಕ್ಕಷ್ಟು ರಾಜಾತಿಥ್ಯ ಭಾರತದ ಯಾವುದೇ ಕೈದಿಗೆ ಸಿಕ್ಕಿಲ್ಲ! ಜೈಲಿನಲ್ಲಿ ಎಸಿ ರೂಂ, ಪಾಶ್ಚಿಮಾತ್ಯ ಶೈಲಿ ಟಾಯ್ಲೆಟ್‌, ಮೊಬೈಲ್‌ ಫೋನ್‌, ವೈಫೈ ಮತ್ತು ವೀಡಿಯೋ ಕಾನ್ಫರೆನ್ಸಿಂಗ್‌ ಸೌಲಭ್ಯ ನೀಡಲಾಗಿತ್ತು. ಜೈಲು ಕೋಣೆ ಅಕ್ಷರಶಃ ಐಷಾರಾಮಿ ಹೊಟೇಲ್‌ ಕೋಣೆಯಂತಿತ್ತು. ಜೈಲಿನಲ್ಲಿ ಭದ್ರತಾ ಸಿಬಂದಿಯನ್ನೂ ನೀಡಲಾಗಿತ್ತು! 20 ಸಾವಿರ ಕೋ.ರೂ. ವಂಚಿಸಿದ ಪ್ರಕರಣದಲ್ಲಿ ಜೈಲಲ್ಲಿದ್ದರು.

ಅಮರ್‌ ಸಿಂಗ್‌ಗೆ ಸಕಲ ಸೌಲಭ್ಯ
ಮತಕ್ಕಾಗಿ ಲಂಚ ಪ್ರಕರಣದಲ್ಲಿ ತಿಹಾರ್‌ ಜೈಲುಪಾಲಾಗಿದ್ದ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್‌ ಸಿಂಗ್‌ ಪ್ರತ್ಯೇಕ ವಾರ್ಡ್‌ನಲ್ಲೇ ಇದ್ದರು. ಮನೆಯೂಟ, ಮಿನರಲ್‌ ವಾಟರ್‌, ಪಾಶ್ಚಾತ್ಯ ಶೈಲಿ ಟಾಯ್ಲೆಟ್‌ ಸೇರಿ ಬಹುತೇಕ ಆರಾಮದಾಯಕ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದರು.

ಲಾಲುಗೆ ಜೈಲು ಫೀಲು ಆಗಲೇ ಇಲ್ಲ!
ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ರಾಂಚಿ ಜೈಲಿನಲ್ಲಿಡಲಾಗಿತ್ತು. ಲಾಲುಗೆ ಟಿವಿ, ಇಬ್ಬರು ಬಾಣಸಿಗರನ್ನು ನೀಡಲಾಗಿತ್ತು. ಅನ್ನ, ತಾಜಾ ತರಕಾರಿ, ಮಟನ್‌, ಚಿಕನ್‌, ಮೀನು, ತುಪ್ಪ ಮತ್ತು ಹಣ್ಣುಗಳನ್ನು ನೀಡಲಾಗುತ್ತಿತ್ತು. ಭೇಟಿಗೆ ಬಂದವರ ಜತೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಗುತ್ತಿತ್ತು.

ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌
ಬಾಲಕಿಯರಿಬ್ಬರ ರೇಪ್‌ ಕೇಸಿನಲ್ಲಿ 20 ವರ್ಷ ಶಿಕ್ಷೆ ಅನುಭವಿ ಸುತ್ತಿರುವ ವಿವಾದಿತ ದೇವಮಾನವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಂ ಹರಿಯಾಣದ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ. ಆಗಾಗ ಫ‌ರ್ಲೋ ಮೇಲೆ ಹೊರಗೂ ಬರುತ್ತಾರೆ. ಜೈಲುಧಿಕಾರಿಗಳು ಈ ಬಾಬಾಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಬಗ್ಗೆ ಆಗಾಗ ವರದಿಯಾಗುತ್ತದೆ. ಭೇಟಿಗೆ ಬಂದವರಿಗೆ 2 ಗಂಟೆ ಅವಕಾಶ ನೀಡಲಾಗುತ್ತಿತ್ತು. ಬಾಬಾ ಎಲ್ಲ ರೀತಿಯ ಸೌಲಭ್ಯಪಡೆಯುತ್ತಾರೆ.

ಆಸಾರಾಮ್‌ಗೆ ಗಂಗಾ ನದಿ ನೀರು!
ಬಾಲಕಿ ರೇಪ್‌ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿವಾದಿತ ದೇವಮಾನವ ಆಸಾರಾಮ್‌ ಬಾಪುಗೆ ಜೋಧಪುರ ಜೈಲಿನಲ್ಲಿದ್ದಾರೆ. ವರದಿಗಳ ಪ್ರಕಾರ, ಬಾಬಾ ಸ್ನಾನಕ್ಕೆ ಗಂಗಾ ನದಿ ನೀರು ಬೇಕಂತೆ. ಜೈಲು ಅಧಿಕಾರಿಗಳ ಮನೆಯಲ್ಲಿ ತಯಾರಿಸಿದ ಊಟವೇ ಬೇಕಂತೆ. ಹೀಗೆ ನಾನಾ ಸೌಲಭ್ಯಗಳನ್ನು ಆಸಾರಾಮ್‌ ಬಾಪು ಜೈಲಿನಲ್ಲೇ ಪಡೆಯುತ್ತಾರೆ.

ಸುಪ್ರೀಂ ಕೋರ್ಟ್‌ ತಪರಾಕಿ!
ಯುನಿಟೆಕ್‌ ಎಂಡಿ ಸಂಜಯ್‌ ಚಂದ್ರ, ಆತನ ಸಹೋದರ ಅಜಯ್‌ಗೆ ತಿಹಾರ್‌ ಜೈಲಿನಲ್ಲಿ ರಾಜಾ ತಿಥ್ಯ ನೀಡುತ್ತಿರುವ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಚಾಟಿ ಬೀಸಿತ್ತು. “ಕೈದಿಗಳು ಜೈಲಿನಲ್ಲಿ ಟವಿ, ಸೋಫಾಸೆಟ್‌ ಬಳಸುತ್ತಿದ್ದಾರೆ. ಅವರು ಜೈಲಿನಲ್ಲಿ ಸಮಾನಾಂತರ ವ್ಯವಸ್ಥೆಯನ್ನು ನಡೆಸುತ್ತಿದ್ದಾರಾ, ವಿಶೇಷ ಹಕ್ಕುಗಳಿವೆ ಯೇ ಎಂದು ಮದನ್‌ ನ್ಯಾ|ಬಿ.ಲೋಕುರ್‌ ನೇತೃತ್ವದ ಪೀಠವು ಪ್ರಶ್ನಿಸಿತ್ತು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

ಜೈಲುಗಳಲ್ಲಿ ಕೈದಿಗೆ ಇರುವ ನಿಯಮಗಳು

* ರಾಜ್ಯದ ಜೈಲುಗಳಲ್ಲಿ ಕ್ರಿಮಿನಲ್‌, ವಿಚಾರಣಾಧೀನ ಮತ್ತು ನಾಗರಿಕ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು.

* ಕ್ರಿಮಿನಲ್‌ ಕೈದಿಗಳ ಜತೆಗೆ ನಾಗ ರಿಕ ಕೈದಿಗಳು ಸಂವಹನ ನಡೆಸಲು ಅವಕಾಶವನ್ನು ನೀಡುವಂತಿಲ್ಲ.

* ನಾಗರಿಕ ಕೈದಿಗಳಿಗೆ ಪ್ರತ್ಯೇಕ ಕೋಣೆ ಕೊಡಬಹುದು ಇಲ್ಲವೇ ಕೊಡದೆಯೂ ಇರಬಹುದು.

*ಜೈಲಿನಲ್ಲಿ ಅಗತ್ಯ ವಸ್ತುಗಳು ಮತ್ತು ಸ್ಟೇಷನರಿ ಐಟಂಗಳನ್ನು ಖರೀದಿಸಲು ಅವಕಾಶವಿರುತ್ತದೆ.

*ನ್ಯಾಯಾಲಯದ ಅನುಮತಿ ಯೊಂದಿಗೆ ಜೈಲುಗಳಲ್ಲಿ ಕೈದಿಗಳಿಗೆ ಮನೆಯೂಟ ಕೊಡಬಹುದು.

*ಕೈದಿಗಳು ತುರ್ತು ಸಂದರ್ಭದಲ್ಲಿ ಜೈಲಿನಲ್ಲೇ ವೈದ್ಯಕೀಯ ಸೌಲಭ್ಯ ಪಡೆಯಬಹುದು. ಇದಕ್ಕೆ ಅಡ್ಡಿ ಇಲ್ಲ.

* ಮನೆಯಿಂದ ತರಿಸಲಾದ ಬಟ್ಟೆ ಬಳಸಬಹುದು. ಆದರೆ ಇದಕ್ಕೆ ಅಧೀಕಕ್ಷರ ಅನುಮತಿ ಪಡೆಯಬೇಕು.

*ವಿಚಾರಣಾಧೀನ ಕೈದಿಗಳು ಕೆಲಸ ಮಾಡಬೇಕಿಲ್ಲ. ಶಿಕ್ಷೆಗೆ ಗುರಿಯಾದವರು ಕೆಲಸ ಮಾಡಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next