Advertisement
ಕೋಟ: ಬ್ರಹ್ಮಾವರ ತಾಲೂಕು ಅತೀ ಹೆಚ್ಚು ಗ್ರಾಮಾಂತರ ಪ್ರದೇಶವನ್ನು ಒಳಗೊಂಡಿದ್ದು ತಾಲೂಕು ವ್ಯಾಪ್ತಿಗೆ ಅದುವೇ ಪ್ರಮುಖ ಪಟ್ಟಣ ಹಾಗೂ ವಾಣಿಜ್ಯ ತಾಣವಾಗಿದೆ. ಆದರೆ ಸೂಕ್ತ ಮೂಲ ಸೌಕರ್ಯಗಳು ದೊರೆತಲ್ಲಿ ತಾಲೂಕಿನ ಏಕೈಕ ನಗರಾಡಳಿತ ಪ್ರದೇಶವಾಗಿರುವ ಕೋಟ ಹೋಬಳಿಯ ಸಾಲಿಗ್ರಾಮವು ಪ್ರಮುಖ ಪಟ್ಟಣವಾಗಿ ಬೆಳೆಯುವ ಎಲ್ಲಾ ಅವಕಾಶಗಳನ್ನು ಹೊಂದಿದೆ. 1975ರಲ್ಲಿ ಪುರಸಭೆಯಾಗಿದ್ದ ಸಾಲಿಗ್ರಾಮ 2001ರಲ್ಲಿ ಪ.ಪಂ.ಆಗಿ ಮೇಲ್ದರ್ಜೆಗೇರಿತು. ಇದೀಗ ಸುತ್ತುಮುತ್ತಲಿನ ಹಲವಾರು ಗ್ರಾಮಗಳಿಗೆ ಇದುವೇ ಪ್ರಮುಖವಾದ ವಾಣಿಜ್ಯ ತಾಣ.
ಸಾಲಿಗ್ರಾಮವು ಒಂದು ಪ.ಪಂ. ಹಾಗೂ ಐರೋಡಿ, ಕೋಡಿ, ಪಾಂಡೇಶ್ವರ, ಕೋಟ, ಕೋಟತಟ್ಟು, ವಡ್ಡರ್ಸೆ, ಯಡ್ತಾಡಿ, ಶಿರಿಯಾರ, ಬೇಳೂರು ಗ್ರಾ.ಪಂ. ವ್ಯಾಪ್ತಿಯ ಪ್ರದೇಶದೊಂದಿಗೆ ಹೊಂದಿಕೊಂಡಿದ್ದು, ಇಲ್ಲಿನ 20 ಗ್ರಾಮಗಳಲ್ಲಿ ಸುಮಾರು 65 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದೆ. ಇಲ್ಲಿನ ನಿವಾಸಿಗಳು ಒಂದಲ್ಲ ಒಂದು ಕಾರಣಕ್ಕೆ ಈ ಪ್ರದೇಶದೊಂದಿಗೆ ನಂಟು ಹೊಂದಿದ್ದಾರೆ. ಕೋಟ ಹೈಸ್ಕೂಲ್‌ನಿಂದ ದಕ್ಷಿಣಕ್ಕೆ ಹಾಗೂ ಡಿವೈನ್ ಪಾರ್ಕ್ ನಿಂದ ಉತ್ತರಕ್ಕೆ ಹಬ್ಬಿರುವ ಸಾಲಿಗ್ರಾಮ ಮುಖ್ಯ ಪೇಟೆಯಲ್ಲಿ ಹೆಚ್ಚಿನ ವಾಣಿಜ್ಯಿಕ ಚಟುವಟಿಕೆಗಳು ನಡೆಯುತ್ತವೆ. ಸಹಕಾರಿ ರಂಗದ ಸ್ವರ್ಗ
ಸುಮಾರು 20-25 ವರ್ಷಗಳ ಹಿಂದೆ ಸಾಲಿಗ್ರಾಮದಲ್ಲಿ ಕೇವಲ 2 ರಾಷ್ಟ್ರೀಕೃತ ಬ್ಯಾಂಕ್, ಒಂದು ಸಹಕಾರಿ ವ್ಯಾವಸಾಯಿಕ ಸಂಘದ ಶಾಖೆ ಇತ್ತು. ಆದರೆ ಇದೀಗ 4 ರಾಷ್ಟ್ರೀಕೃತ ಬ್ಯಾಂಕ್, 14ಸಹಕಾರಿ ಸಂಘದ ಶಾಖೆಗಳಿದೆ. ಅದು ಕೂಡ ಕೇವಲ 500 ಮೀಟರ್ ವ್ಯಾಪ್ತಿಯ ಮುಖ್ಯ ಪೇಟೆಯಲ್ಲಿ. ಹೀಗಾಗಿ ಸಹಕಾರಿ ರಂಗ ಇಲ್ಲಿ ಶರವೇಗದಲ್ಲಿ ಬೆಳೆದಿದೆ
Related Articles
ಸಾಲಿಗ್ರಾಮ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಮುಖ ಕಾರಣ ಇಲ್ಲಿನ ಗುರುನರಸಿಂಹ ಹಾಗೂ ಆಂಜನೇಯ ದೇವಸ್ಥಾನ. ಇಲ್ಲಿಗೆ ಪ್ರತಿ ಇತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ ಹಾಗೂ ಪ್ರತಿ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಆಗಮಿಸುವವರು ಪೇಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ನಡೆಸುತ್ತಾರೆ. ಇಲ್ಲಿನ ಡಿವೈನ್‌ಪಾರ್ಕ್ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಆಧಾತ್ಮಿಕ, ಯೋಗ ಕೇಂದ್ರವಾಗಿದೆ.
Advertisement
ಆಗಬೇಕಾದ್ದೇನು?– ಕೈಗಾರಿಕೆಗಳು, ಕೌಶಲ ತರಬೇತಿ ಕೇಂದ್ರ
– ನರ್ಸಿಂಗ್ ಹೋಮ್ , ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ
– ಕಾರಂತ ಬೀದಿಯ ಅಭಿವೃದ್ಧಿ, ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ, ವ್ಯವಸ್ಥಿತ ಬಸ್ಸು ತಂಗುದಾಣ,
– ಉನ್ನತ ಶಿಕ್ಷಣ ಸಂಸ್ಥೆಗಳು
– ಕೃಷಿ ಯಂತ್ರೋಪಕರಣಗಳ ಮಳಿಗೆ, ರೈತ ಮಾಹಿತಿ ಕೇಂದ್ರಗಳು
– ತ್ಯಾಜ್ಯ ಸಮಸ್ಯೆಗೆ ಮುಕ್ತಿ
– ಮಾರುಕಟ್ಟೆ, ರಂಗಮಂದಿರ ನಿರ್ಮಾಣ.
– ಸರ್ವೀಸ್ ರಸ್ತೆ ನಿರ್ಮಾಣ ಆಗಬೇಕು.
– ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆ ಬೇಕಿದೆ.
– ಪಾರಂಪಳ್ಳಿ-ಪಡುಕರೆ ಸಂಪರ್ಕ ಸೇತುವೆ ನಿರ್ಮಾಣ
– ಪಾರಂಪಳ್ಳಿ-ಪಡುಕರೆ ಕಡಲ ತೀರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪೇಟೆ ಅಭಿವೃದ್ಧಿಗೆ ಅನುದಾನ ಬೇಕು
ಅನುದಾನ ಕೊರತೆಯಿಂದ ಹಾಗೂ ನಗರೋತ್ಥಾನದಲ್ಲಿ ಅನುದಾನ ಎಲ್ಲಾ ವಾರ್ಡ್‌ಗೆ ಹಂಚಿಕೆಯಾಗುವುದರಿಂದ ನಗರದ ಅಭಿವೃದ್ಧಿ ಅಸಾಧ್ಯವಾಗುತ್ತಿದೆ. ಹೀಗಾಗಿ ಪೇಟೆಯ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು. ನಗರೋತ್ಥಾನ ಅನುದಾನದಲ್ಲಿ ನಗರೀಕರಣಕ್ಕೆ ಒತ್ತು ನೀಡಬೇಕು.
-ರತ್ನಾ ನಾಗರಾಜ್ ಗಾಣಿಗ, ಪೇಟೆ ವಾರ್ಡ್ ಸದಸ್ಯೆ ಸ್ಪಷ್ಟ ಪರಿಕಲ್ಪನೆ ಇರಲಿ
ಸಾಲಿಗ್ರಾಮವನ್ನು ಪ್ರಮುಖ ನಗರವಾಗಿ ಅಭಿವೃದ್ಧಿಪಡಿಸಬೇಕಾದರೆ ಆಡಳಿತ ವ್ಯವಸ್ಥೆ ಪಕ್ಷಭೇದ ಮರೆತು ಸ್ಪಷ್ಟ ಪರಿಕಲ್ಪನೆ, ಗುರಿ, ಯೋಜನೆಯನ್ನು ಹಾಕಿಕೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ದೂರದೃಷ್ಟಿವಹಿಸಬೇಕು. ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಅನುದಾನ ಬೇಕು.
-ಶ್ರೀನಿವಾಸ ಅಮೀನ್, ಪೇಟೆ ಪಶ್ಚಿಮ ವಾರ್ಡ್‌ನ ಸದಸ್ಯರು ಯೋಜನೆ ರೂಪಿಸಲಾಗುವುದು
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಅನಂತರ ನೂತನ ಸದಸ್ಯರೊಂದಿಗೆ ಚರ್ಚಿಸಿ ಪಟ್ಟಣ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸಲಾಗುವುದು.
-ಅರುಣ್ ಕುಮಾರ್, ಮುಖ್ಯಾಧಿಕಾರಿಗಳು ಪ.ಪಂ. ರಾಜೇಶ ಗಾಣಿಗ ಅಚ್ಲಾಡಿ