Advertisement

ದಲಿತ ಸಂಘಟನೆಗಳಿಂದ ಸಿಎಂಗೆ ಕೃತಜ್ಞತೆ

01:00 AM Mar 27, 2017 | Karthik A |

ಬೆಂಗಳೂರು: ಕೇಂದ್ರ ಸರಕಾರ ಈ ವರ್ಷದ ಬಜೆಟ್‌ನಲ್ಲಿ ಇಡೀ ದೇಶದ ದಲಿತರಿಗೆ 39 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟರೆ, ನಮ್ಮ ಸರಕಾರ ರಾಜ್ಯದ ದಲಿತರಿಗಾಗಿ 27 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ರವಿವಾರ ಏರ್ಪಡಿಸಿದ್ದ ಕೃತಜ್ಞತೆ ಸಮರ್ಪಣಾ ಸಮಾವೇಶದಲ್ಲಿ ಅವರು ಮಾತನಾಡಿದರು. ದಲಿತರಿಗೆ ಅವರ ಜನಸಂಖ್ಯೆಗೆ ತಕ್ಕಂತೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಾಗ ಮಾತ್ರ ಆ ವರ್ಗದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆ (ಎಸ್‌ಸಿಪಿ-ಟಿಎಸ್‌ಪಿ) ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆ ಬಂದಿರುವುದರಿಂದ ದಲಿತರ ಅಭಿವೃದ್ಧಿಗೆ ಹೆಚ್ಚು ಹಣ ಸಿಗುತ್ತದೆ. ಅದರಂತೆ 2017-18ನೇ ಸಾಲಿನ ಬಜೆಟ್‌ನಲ್ಲಿ ನಮ್ಮ ಸರಕಾರ 27 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದರು.

Advertisement

ಮೀಸಲಾತಿ ಹೆಚ್ಚಳಕ್ಕೆ ಚಿಂತನೆ: ಮೀಸಲಾತಿ ಪ್ರಮಾಣ ಶೇ. 51 ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ತಮಿಳುನಾಡಿನಲ್ಲಿ ಎಸ್ಸಿ, ಎಸ್ಟಿಗಳ ಮೀಸಲಾತಿಯನ್ನು ಶೇ. 69ಕ್ಕೆ ಏರಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. 72ಕ್ಕೆ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಕಾನೂನು ಅವಕಾಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಒಂದೊಮ್ಮೆ ಕಾನೂನಿನಲ್ಲಿ ಅವಕಾಶ ಇದ್ದರೆ ಖಂಡಿತವಾಗಿಯೂ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಶೇ. 72ಕ್ಕೆ ಹೆಚ್ಚಿಸಲು ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಸಂಸದರಾದ ಕೆ.ಎಚ್‌.ಮುನಿಯಪ್ಪ, ಪ್ರಕಾಶ್‌ ಹುಕ್ಕೇರಿ, ಬಿ.ಎನ್‌. ಚಂದ್ರಪ್ಪ, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಸಚಿವರಾದ ಟಿ.ಬಿ. ಜಯಚಂದ್ರ, ರಮಾನಾಥ ರೈ, ರಮೇಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ, ಉಮಾಶ್ರೀ, ವಿಧಾನಪರಿಷತ್‌ ಸದಸ್ಯರಾದ ವಿ.ಎಸ್‌. ಉಗ್ರಪ್ಪ, ಎಚ್‌.ಎಂ. ರೇವಣ್ಣ, ಕವಿ ಡಾ| ಸಿದ್ದಲಿಂಗಯ್ಯ ಸಹಿತ ದಲಿತ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next