ಶ್ರೀನಿವಾಸಪುರ: ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೂಲ ಸೌಕರ್ಯ, ಅಕ್ರಮ ತಡೆ, ಖಾಲಿ ಇರುವ ಹುದ್ದೆಗಳ ಭರ್ತಿ, ಕಮಿಷನ್ ಹಾವಳಿಗೆ ಕಡಿವಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಆಗ್ರಹಿಸಿತು.
ಕಳೆದ ವರ್ಷ ಕಾರ್ಯದರ್ಶಿಯಾಗಿದ್ದವರು 60 ಲಕ್ಷ ರೂ. ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಅಮಾನತು ಮಾಡಿರುವ ಉದಾಹರಣೆ ಇದೆ. ರೈತರ ಮಾರುಕಟ್ಟೆ ಇಂದು ದಲ್ಲಾಳಿಗಳದ್ದಾಗಿದೆ. ಕಷ್ಟಾಪಟ್ಟು ಮಳೆ, ಬಿಸಿಲು, ಹಗಲು ರಾತ್ರಿಯನ್ನದೇ ತೀವ್ರ ಬರಗಾಲ ಮತ್ತು ಸರ್ಕಾರಗಳ ನಿರ್ಲಕ್ಷ್ಯದ ಮಧ್ಯದಲ್ಲೂ ತನ್ನ ಸ್ವಾಭಿಮಾನ ಬದುಕಿಗಾಗಿ ಕೃಷಿಯನ್ನೇ ನಂಬಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದರೆ ಅದನ್ನು ಕಾಲಕಸದಂತೆ ಕಾಣುವ ದಲ್ಲಾಳಿಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿ ವರ್ಗ ಇವರ ಮದ್ಯೆ ನಲಗಿರುವ ರೈತರ ರಕ್ಷಣೆಗಾಗಿ ಜಿಲ್ಲಾಡಳಿತ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಮಾವಿನ ಮಡಿಲೆಂದೇ ವಿಶ್ವವಿಖ್ಯಾತಿ ಪಡೆದಿರುವ ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳಿಲ್ಲ ಎಂದು ದೂರಿದರು.
ಪ್ರತಿವರ್ಷ ಮಾವಿನ ಆವಕ ಹೆಚ್ಚಾದಾಗ ಮಾರುಕಟ್ಟೆಗೆ ಬರುವ ರೈತರಿಗೆ ಸಮರ್ಪಕ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ, ಗುಣಮಟ್ಟದ ಊಟದ ವ್ಯವಸ್ಥೆ ಇಲ್ಲ. ಬಯಲಲ್ಲೇ ಮಲಗುವಂತ ಪರಿಸ್ಥಿತಿ ಉಂಟಾಗಿದೆ ಎಂದು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಿಯಮ ಪಾಲಿಸಲ್ಲ: ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಮಾತನಾಡಿ, ಪ್ರತಿವರ್ಷ ಮಾವಿನ ಸುಗ್ಗಿಯ ಕಾಲದಲ್ಲಿ ಮಾತ್ರ ಅಧಿಕಾರಿಗಳಿಗೆ ಮಾರುಕಟ್ಟೆ ಜ್ಞಾಪಕಕ್ಕೆ ಬರುತ್ತದೆ. ಮುಂಚಿತವಾಗಿ ಇರುವ ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ಇಲ್ಲ. ವಿಶ್ರಾಂತಿ ಗೃಹ ಪ್ರಾರಂಭವಾಗದೆ ಹಾಳು ಬೀಳುತ್ತಿವೆ. ಮಾವು ಮಂಡಿ ಕೆಲಸಕ್ಕೆ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಕಾರ್ಮಿಕರು ಮಾರುಕಟ್ಟೆಗೆ ಬರುವುದರಿಂದ ಇಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಕಾರಣ ರೋಗ ರುಜಿನಗಳಿಂದ ನರಳಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಸಿಬ್ಬಂದಿ ನೆಪದಲ್ಲಿ ಸರ್ಕಾರಕ್ಕೆ ಬರುವ ಆದಾಯ ಲೂಟಿ ಮಾಡುವಲ್ಲಿ ಇಲ್ಲಿನ ಸಿಬ್ಬಂದಿ ನಿರತವಾಗಿರುತ್ತಾರೆಯೇ ಹೊರತು, ಸರ್ಕಾರದ ನಿಯಮ ಪಾಲನೆ ಮಾಡುವುದಿಲ್ಲ ಎಂದು ಹೇಳಿದರು.
Advertisement
ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್‌ಗೆ ಮನವಿ ನೀಡಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆ ಮಾವಿನ ಸುಗ್ಗಿ ಸಮಯದಲ್ಲಿ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಮಾರುಕಟ್ಟೆಯಾಗಿದೆ. ರೈತರ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡುವ ಕಾಯಕವೇ ಹೊರತು ಯಾವುದೇ ಮೂಲ ಸೌಕರ್ಯ, ರೈತರ ಸಂರಕ್ಷಣೆ ಮಾಡುವಂತ ಕಾರ್ಯವಾಗುತ್ತಿಲ್ಲ ಎಂದು ದೂರಿದರು.
Related Articles
Advertisement
ಮಾರುಕಟ್ಟೆ ಸಮರ್ಪಕ ನಿರ್ವಹಣೆ: ಮನವಿ ಸ್ವೀಕರಿಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಮಾತನಾಡಿ, ಮಾವಿನ ಮಾರುಕಟ್ಟೆಗೆ ಜಾಗದ ಕೊರತೆ ಜೊತೆಗೆ ಕುಡಿಯುವ ನೀರು, ಶೌಚಾಲಯಗಳ ಅವ್ಯವಸ್ಥೆ ಇರುವುದು ನಿಜ. ಅದರ ಜೊತೆಗೆ ಹಿಂದೆ ಇದ್ದ, ಕಾರ್ಯದರ್ಶಿ ಹಣ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಮಾರುಕಟ್ಟೆ ಸಮರ್ಪಕ ನಿರ್ವಹಣೆ ಮಾಡಲು ಆಗುತ್ತಿಲ್ಲ. ಆದರೂ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸರಿಪಡಿಸುವ ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷೆ ಎ.ನಳಿನಿ, ಹಸಿರುಸೇನೆ ಅಧ್ಯಕ್ಷ ಆಚಂಪಲ್ಲಿ ಗಂಗಾಧರ, ಹೊಸಹಳ್ಳಿ ಚಂದ್ರಪ್ಪ, ಬಂಗವಾದಿ ಮುನಿಯಪ್ಪ, ತೆರ್ನಹಳ್ಳಿ ರಮೇಶ್, ನಾಗರಾಜ, ವೆಂಕಿ, ರಾಯಲ್ಪಾಡು ಹರೀಶ್, ಕೆಂಬೋಡಿ ಕೃಷ್ಣೇಗೌಡ, ಪುತ್ತೇರಿ ರಾಜು ಮುಂತಾದವರಿದ್ದರು.