Advertisement

“ಫೇಸ್ಬುಕ್ , ವಾಟ್ಸಾಪ್‌ ತ್ಯಜಿಸಿ ಪುಸ್ತಕ ಹಿಡಿದರೆ ಆರೋಗ್ಯ ವೃದ್ಧಿ’

12:14 AM Oct 15, 2019 | Sriram |

ಕೋಟ: ನಾವು ಆರೋಗ್ಯದ ಉದ್ದೇಶಕ್ಕಾಗಿ ವೈದ್ಯರ ಸಲಹೆಯಂತೆ ಕೆಟ್ಟ ವಸ್ತುಗಳನ್ನು ತ್ಯಜ್ಯಿಸಿ, ಒಳ್ಳೆಯ ವಸ್ತುಗಳನ್ನು ಸ್ವೀಕರಿಸುತ್ತೇವೆ. ಅದೇ ರೀತಿ ಒಂದು ತಿಂಗಳು ಫೇಸ್ಬುಕ್ ವಾಟ್ಸಾಪ್‌ಗ್ಳನ್ನು ತ್ಯಜಿಸಿ ಪುಸ್ತಕವನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ. ಪುಸ್ತಕ ನಮಗೆ ಉತ್ತಮ ಜ್ಞಾನದೊಂದಿಗೆ ಜೀವ, ಜೀವನಕ್ಕೆ ಆರೋಗ್ಯ ನೀಡುತ್ತದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.

Advertisement

ಅವರು ಕೋಟ ಕಾರಂತ ಕಲಾಭವನದಲ್ಲಿ ಕಾರಂತೋತ್ಸವದ ಪ್ರಯುಕ್ತ ಅ.13ರಂದು ಜರಗಿದ ಕಾರಂತ ನಮನ-ಜಯಂತ ಗಾನ ವೈಭವ ಕಾರ್ಯಕ್ರಮದಲ್ಲಿ ಸಿನೆಮಾ ಒಂದು ಮಾಯೆ ಎಂಬ ವಿಚಾರದ ಕುರಿತು ಮಾತನಾಡಿದರು.ಸಿನಿಮಾ ಅಚ್ಚಳಿಯದ ನೆನಪು ಉಳಿಸಿಬಿಡುತ್ತದೆ ಕೆಲವೊಮ್ಮೆ ಸಿನೆಮಾಗಳು ನಮ್ಮ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿ ಬಿಡುತ್ತದೆ ಹಾಗೂ ನಮ್ಮ ಜೀವನದ ಯಾವುದಾದರೊಂದು ಘಟನೆಯ ಜತೆ ಬೆಸೆದುಕೊಂಡಿರುತ್ತದೆ ಎಂದರು.

ವಿರಹ ಗೀತೆ ಬರೆಯುವವರೆಲ್ಲ ವಿರಹಿಗಳಲ್ಲ
ಸಾಮಾನ್ಯವಾಗಿ ವಿರಹಗೀತೆಗಳನ್ನು ಬರೆಯುವವರನ್ನು ವಿರಹಿಗಳು ಎಂದು ಜನ ತಿಳಿದಿರುತ್ತಾರೆ. ನನಗೂ ಕೂಡ ಸಾಕಷ್ಟು ಜನ ಆ ರೀತಿ ಕೇಳಿದ್ದಾರೆ. ಆದರೆ ಕಥೆ, ಸನ್ನಿವೇಶಕ್ಕೆ ತಕ್ಕಂತೆ ವಿಹರಗೀತೆಯ ಸಂದರ್ಭ ವಿರಹಿಗಳಾಗಿ, ಪ್ರೇಮಗೀತೆಗೆ ಪ್ರೇಮಿಯಂತೆ ಕಲ್ಪಿಸಿಕೊಂಡು ಹಾಡುಗಳನ್ನು ರಚಿಸುತ್ತೇವೆ ಹೊರತು ವಿರಹಗೀತೆ ಬರೆಯುವವರೆಲ್ಲ ವಿರಹಿಗಳಲ್ಲ. ಪ್ರೇಮ ಗೀತೆ ಬರೆಯುವವರು ಪ್ರೇಮಿಗಳಲ್ಲ ಎಂದರು.

ಉದ್ಯಮಿ ಪ್ರಶಾಂತ್‌ ಕುಂದರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮೋದ್‌ ಹಂದೆ,ನಿತ್ಯಾನಂದ ಗಾಂವ್ಕರ್‌, ರಘು ತಿಂಗಳಾಯ, ಶಿವರಾಮ ಪೂಜಾರಿ, ಯು.ಎಸ್‌. ಶೆಣೈ, ವರದೇಶ್‌, ಶ್ರೀರಾಜ್‌ ಗುಡಿ, ಅವಿನಾಶ್‌ ಕಾಮತ್‌ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಅನಂತರ ಖ್ಯಾತ ಗಾಯಕರಿಂದ ಜಯಂತ ಕಾಯ್ಕಿಣಿಯವರು ರಚಿಸಿದ ಹಾಡುಗಳ ಜಯಂತ ಗಾನ ವೈಭವ ಜರಗಿತು.

Advertisement

ಸಿನೆಮಾವೇ ಒಂದು ದೊಡ್ಡ ಧರ್ಮ
ಸಿನೆಮಾ ಭಾಷೆ, ಧರ್ಮ,ದೇಶಗಳನ್ನು ಮೀರಿದ ಭಾವನಾತ್ಮಕ ಜಗತ್ತು.ಎಲ್ಲರನ್ನೂ, ಎಲ್ಲವನ್ನೂ ಒಂದಾಗಿಸುವ ದೊಡ್ಡ ಶಕ್ತಿ ಇದಕ್ಕಿದೆ. ವ್ಯಕ್ತಿಯೊಬ್ಬ ಹೇಗೆ ಜೀವಿಸಬೇಕು, ಯಾವುದನ್ನು ಆದರ್ಶವಾಗಿ ಪಾಲಿಸಬೇಕು ಎನ್ನುವುದನ್ನು ಸಿನೆಮಾ ನಮಗೆ ತಿಳಿಸಿಕೊಡುತ್ತದೆ. ಕಲಾವಿದನಿಗೆ ತಾಯಿಯಂತೆ ಪ್ರೀತಿ ತೋರುತ್ತದೆ. ಆದ್ದರಿಂದ ಸಿನಿಮಾಕ್ಕಿಂತ ದೊಡ್ಡ ಧರ್ಮ ಬೇರೆ ಇಲ್ಲ ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು ಹಾಗೂ ಸಿನಿಮಾದಲ್ಲಿ ಅಭಿನಯ ಸಹಜವಾಗಿರಬೇಕು, ಅಭಿನಯ ಭಾವನೆಯ ಪ್ರತಿ ಬಿಂಬವಾಗಿರಬೇಕು,ಚಹರೆಯ ಮೂಲಕವೇ ಎಲ್ಲವನ್ನು ಅರ್ಥ ಮಾಡಿಕೊಳ್ಳುವಂತಿರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next