ನ್ಯೂಯಾರ್ಕ್: ಫೇಸ್ ಬುಕ್ ತನ್ನ ಮೆಸೆಂಜರ್ ಆ್ಯಪ್ ನಲ್ಲಿ ಫಾರ್ವರ್ಡ್ ಮೆಸೇಜ್ ಗಳಿಗೆ ಮಿತಿಯನ್ನು (ಲಿಮಿಟ್) ವಿಧಿಸಿದೆ. ಇದೀಗ ಮೆಸೆಂಜರ್ ಬಳಕೆದಾರರು ಏಕಕಾಲದಲ್ಲಿ ಕೇವಲ 5 ಮಂದಿಗೆ ಅಥವಾ 5 ಗ್ರೂಪ್ ಗಳಿಗೆ ಮಾತ್ರ ಯಾವುದೇ ಸಂದೇಶವನ್ನು ಫಾರ್ವರ್ಡ್ ಮಾಡಬಹುದು.
2018ರಲ್ಲಿ ವಾಟ್ಸಾಪ್ ಕೂಡ ಫಾರ್ವರ್ಡ್ ಮಿತಿಗಳನ್ನು ಜಾರಿಗೆ ತಂದಿತ್ತು. ಇದೀಗ ಮೆಸೆಂಜರ್ ಕೂಡ ಅದೇ ವಿಧಾನ ಅನುಸರಿಸಿದ್ದು, ತನ್ನ ಫ್ಲಾಟ್ ಫಾರ್ಮ್ ನಲ್ಲಿ ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
‘ಇದೀಗ ಮೆಸೆಂಜರ್ ನಲ್ಲಿ ಫಾರ್ವರ್ಡ್ ಮೆಸೇಜ್ ಗಳಿಗೆ ಮಿತಿಯನ್ನು ಪರಿಚಯಿಸುತ್ತಿದ್ದೇವೆ. ಇದರ ಮುಖ್ಯ ಉದ್ದೇಶವೇ ದುರುದ್ದೇಶಪೂರಿತ ಮಾಹಿತಿಯನ್ನು ತಡೆಯುವುದು. ಆ ಮೂಲಕ ಇನ್ನು ಮುಂದೆ ನಿಖರವಾದ ಮಾಹಿತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು’ ಎಂದು ಫೇಸ್ ಬುಕ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.
ಇನ್ನು ಮುಂದೆ ಫೋಟೋ, ವಿಡಿಯೋ ಸಹಿತ ಯಾವುದೇ ಸಂದೇಶವನ್ನು ಐದಕ್ಕಿಂತ ಹೆಚ್ಚಿನ ವ್ಯಕ್ತಿಗಳಿಗೆ ಒಮ್ಮೆಲೆ ಶೇರ್ ಮಾಡಲಾಗುವುದಿಲ್ಲ. ಕೋವಿಡ್ 19 ಕುರಿತ ತಪ್ಪು ಮಾಹಿತಿಗಳು, ಹಾಗೂ ಮುಂಬರುವ ಅಮೇರಿಕಾ ಮತ್ತು ನ್ಯೂಜಿಲ್ಯಾಂಡ್ ಚುನಾವಣೆ ಕುರಿತ ದುರುದ್ದೇಶಪೂರಿತ ಸಂದೇಶಗಳು ಹೆಚ್ಚೆಚ್ಚು ಹರಿದಾಡುತ್ತಿರುವುದರಿಂದ ಈ ನಿರ್ಧಾರ ತಳೆಯಾಲಾಗಿದೆ. ಮಾತ್ರವಲ್ಲದೆ ಚುನಾವಣೆಗೂ ಒಂದು ವಾರಕ್ಕೆ ಮೊದಲು ಎಲ್ಲಾ ರೀತಿಯ ಚುನಾವಣಾ ಜಾಹೀರಾತುಗಳನ್ನು ತಮ್ಮ ಫ್ಲ್ಯಾಟ್ ಫಾರ್ಮ್ ಗಳಲ್ಲಿ ನಿರ್ಬಂಧಿಸಲಾಗುವುದು ಎಂದು ಜುಕರ್ ಬರ್ಗ್ ತಿಳಿಸಿದ್ದಾರೆ.