ನವದೆಹಲಿ: ಕಳೆದ ಶನಿವಾರ ವಿಶ್ವಾದ್ಯಂತ ಹ್ಯಾಕ್ ಆದ 5 ಕೋಟಿ ಮಂದಿಯ ಫೇಸ್‌ಬುಕ್ ಖಾತೆಗಳ ಪೈಕಿ ಭಾರತೀಯರ ಖಾತೆಗಳೇ ಹೆಚ್ಚಿರಬಹುದು ಹಾಗೂ ಅದನ್ನು ಬಳಕೆ ಮಾಡಿಕೊಂಡು ಬೇರೆ ಆ್ಯಪ್ ಲಾಗ್‌ಇನ್ ಆದವರ ಮಾಹಿತಿಯೂ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಹ್ಯಾಕ್ ಆಗಿರುವ ಪ್ರಮಾಣ ಕೇವಲ ಫೇಸ್‌ಬುಕ್‌ಗೆ ಸೀಮಿತವಾಗಿಲ್ಲ. ಅದಕ್ಕಿಂತಲೂ ವಿಸ್ತೃತವಾಗಿದೆ ಎಂದು ಸೈಬರ್ ತಂತ್ರಜ್ಞಾನ ಮತ್ತು ಭದ್ರತಾ ಕ್ಷೇತ್ರದ ಪರಿಣತರು ಪ್ರತಿಪಾದಿಸಿದ್ದಾರೆ. ಟಿವಿ ಕಾರ್ಯಕ್ರಮ ಗಳನ್ನು ವೀಕ್ಷಿಸುವ ಮತ್ತು ಗ್ರಾಹಕರ ಆಯ್ಕೆಯ ಊಟ, ಉಪಾಹಾರಗಳನ್ನು ಮನೆಗೆ ತರಿಸಿಕೊಳ್ಳುವ ಆ್ಯಪ್‌ಗ್ಳಿಗೆ ಫೇಸ್‌ಬುಕ್ ಮೂಲಕ ಲಾಗ್ ಇನ್ ಆದವರ ಮಾಹಿತಿಯೂ ಸೋರಿಕೆಯಾಗಿರುವ ಸಾಧ್ಯತೆ ಇದೆ. ಜುಲೈ ಅಂತ್ಯಕ್ಕೆ ಇಂಥ ಆ್ಯಪ್‌ಗ್ಳ ಬಳಕೆದಾರರ ಸಂಖ್ಯೆ ದೇಶದಲ್ಲಿ 27 ಕೋಟಿಗೇರಿದೆ. ಹ್ಯಾಕರ್‌ಗಳು ಖಾತೆದಾರರ ಪ್ರೊಫೈಲ್ ಮಾಹಿತಿ ಕದಿಯಲೂ ಮುಂದಾಗಿದ್ದರು ಎಂದು ಕಾಣಿಸುತ್ತಿದೆ ಎಂದು ಬೆಂಗಳೂರಿನ ಸೈಬರ್ ಸೆಕ್ಯುರಿಟಿ ಕ್ಷೇತ್ರದ ಪರಿಣತ ಪ್ರಕಾಶ್ ಆನಂದ್ ಹೇಳಿದ್ದಾರೆ.