ಮುಂಬಯಿ: ಮುಂಬರುವ 5 ವರ್ಷಗಳವರೆಗೆ ಭಾರತೀಯ ಕ್ರಿಕೆಟ್‌ನ ಆನ್‌ಲೈನ್ ಹಕ್ಕು ಪಡೆಯಲು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಮತ್ತು ಹಾಟ್‌ಸ್ಟಾರ್ ಜತೆ ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ಮತ್ತು ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಸಂಸ್ಥೆಗಳು ಸ್ಪರ್ಧೆಗಿಳಿದಿವೆ. ಜಿಯೋ ಮತ್ತು ಹಾಟ್‌ಸ್ಟಾರ್‌ಗೆ ಫೇಸ್‌ಬುಕ್ ಮತ್ತು ಗೂಗಲ್ ಪ್ರಬಲ ಸ್ಪರ್ಧಿಯಾಗಲಿವೆ.
ಟೆಂಡರ್ ದಾಖಲಾತಿಗಳನ್ನು ಸ್ವೀಕರಿಸಿದವರಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ನೀಡುವ ಸಲುವಾಗಿ ಬಿಸಿಸಿಐ ಮಾ. 27ರಂದು ನಡೆಯಲಿದ್ದ ಇ-ಹರಾಜನ್ನು ಎ. 3ಕ್ಕೆ ಮುಂದೂಡಿದ್ದು, ಎಪ್ರಿಲ್ 2018ರಿಂದ ಮಾರ್ಚ್ 2023ರ ವರೆಗೆ 5 ವರ್ಷಗಳ ಅವಧಿಯ ಹಕ್ಕುಗಳಿಗಾಗಿ ಬಿಸಿಸಿಐ ಫೆ. 20ರಂದು ಟೆಂಡರ್‌ಗೆ ಆಮಂತ್ರಣ ನೀಡಿತ್ತು. ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಸಾರವನ್ನು ಬಿಸಿಸಿಐ ಕಡ್ಡಾಯವಾಗಿ ಮುಂದೂಡಿದೆ.
ಮೊದಲ ಐದು ವರ್ಷಗಳಿಗೆ ಪ್ರತಿ ಪಂದ್ಯಕ್ಕೆ ಡಿಜಿಟಲ್ ಹಕ್ಕಿನ ಮೂಲಬೆಲೆ 8 ಕೋ. ರೂ. ಆಗಿರಲಿದೆ. ಮುಂದಿನ ನಾಲ್ಕು ವರ್ಷಗಳಿಗೆ ಪ್ರತಿ ಪಂದ್ಯಕ್ಕೆ 7 ಕೋ. ರೂ. ಇರಲಿದೆ. ಟಿವಿ ಹಕ್ಕಿನ ಮೂಲ ಬೆಲೆ ಮೊದಲ ಐದು ವರ್ಷಕ್ಕೆ ಪ್ರತಿ ಪಂದ್ಯದಂತೆ 35 ಕೋ. ರೂ ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ಪ್ರತಿ ಪಂದ್ಯಕ್ಕೆ 33 ಕೋ. ರೂ. ಆಗಿರಲಿದೆ.
ಸದ್ಯ “ಮಾಹಿತಿ ಹಗರಣ’ ಆರೋಪದಲ್ಲಿ ಸಿಲುಕಿರುವ ಫೇಸ್‌ಬುಕ್ ಕಳೆದ ವರ್ಷ ಐಪಿಎಲ್ ಡಿಜಿಟಲ್ ರೈಟ್ಸ್ ಹರಾಜಿನಲ್ಲಿ 3,900 ಕೋ.ರೂ. ಬಿಡ್ ಮಾಡಿ ಗಮನ ಸೆಳೆದಿತ್ತು. ಆದರೆ 16,347 ಕೋ.ರೂ.ನಿಂದ ಸ್ಟಾರ್ ಇಂಡಿಯಾ ಬಿಡ್ ಗೆದ್ದುಕೊಂಡಿತ್ತು.
ಗ್ಲೋಬಲ್ ಟೆಲಿವಿಶನ್ ರೈಟ್ಸ್‌ಗಾಗಿ ಸ್ಪರ್ಧೆಯೊಡ್ಡಲಿರುವ ಮಾಧ್ಯಮಗಳಲ್ಲಿ ಸ್ಟಾರ್ ಟಿವಿ ಮತ್ತು ಸೋನಿ ಪಿಕ್ಚರ್ ನೆಟ್‌ವರ್ಕ್ ಮುಂಚೂಣಿಯಲ್ಲಿರುವುದಾಗಿ ನಿರೀಕ್ಷಿಸಲಾಗಿದೆ. ಮೊಬೈಲ್ ನೆಟ್‌ವರ್ಕ್ ಕಂಪೆನಿಗಳಲ್ಲೇ ಮುಂಚೂಣಿಯಲ್ಲಿರುವ ಗೂಗಲ್ ಕಳೆದ ವರ್ಷದಿಂದ ಐಪಿಎಲ್ ಡಿಜಿಟಲ್ ಹಕ್ಕನ್ನು ಪಡೆದಿತ್ತು. ಈ ಬಾರಿ ಅದು ಟೆಂಡರ್ ದಾಖಲಾತಿಯನ್ನು ಸ್ವೀಕರಿಸಿರುವುದನ್ನು ಗಮನಿಸಿದರೆ ಬಿಸಿಸಿಐ ಡಿಜಿಟಲ್ ರೈಟ್ಸ್ ಗಳಿಸುವಲ್ಲಿ ಅದು ಗಂಭೀರ ಪ್ರಯತ್ನ ನಡೆಸುವುದನ್ನು ನಿರೀಕ್ಷಿಸಬಹುದಾಗಿದೆ.