ವಿಜಯಪುರ : ಫೇಸ್‍ಬುಕ್‍ನಲ್ಲಿ ಪರಿಚಯವಾದ ಹಾಸನ ಮೂಲದ ವಿಳಾಸ ನೀಡಿರುವ ಯುವತಿಯೊಬ್ಬಳು ಕೇವಲ 4 ತಿಂಗಳಲ್ಲಿ ಯವಕನೊಬ್ಬನಿಂದ ಆನ್‍ಲೈನ್ ಮೂಲಕ ಬರೋಬ್ಬರಿ 39 ಲಕ್ಷ ರೂ. ವಂಚಿಸಿರುವ ಪ್ರಕರಣ ವರದಿಯಾಗಿದೆ.
ಸಿಂದಗಿ ತಾಲೂಕು ಬಗಲೂರು ಮೂಲದ ಪರಮೇಶ್ವರ ಹಿಪ್ಪರಗಿ ಎಂಬ 30 ವರ್ಷದ ಯುವಕ ತೆಲಂಗಾಣದ ಆದಿಬಟ್ಲ ಎಂಬಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಜೂನ್ 29 ರಂದು ಪರಮೇಶ್ವರಗೆ ಫೇಸ್‍ಬುಕ್‍ನಲ್ಲಿ ಮಂಜುಳಾ ಕೆ.ಆರ್. ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ರಿಕ್ವೆಸ್‍ಗೆ ಒಪ್ಪಿಗೆ ನೀಡಿದ್ದಾನೆ.
ಇದಾದ ಬಳಿಕ ಪರಸ್ಪದ ಇಬ್ಬರ ಮಧ್ಯೆ ಮೆಸೆಂಜರ್‍ನಲ್ಲಿ ಸಂದೇಶ ವಿನಿಮಯವಾಗಿ, ಸ್ನೇಹದ ಮಾತುಗಳು ಪ್ರೀತಿಗೆ ತಿರುಗಿ, ಅಂತಿಮವಾಗಿ ಯುವತಿ ನಿನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿದ್ದಾಳೆ. ಇದರ ಬೆನ್ನ ಹಿಂದೆಯೇ ಆಗಸ್ಟ್ 14 ರಂದು ಮೆಸೇಜ್ ಮಾಡಿದ ಯುವತಿ ತನ್ನ ತಾಯಿಗೆ ಅನಾರೋಗ್ಯವಾಗಿದ್ದು, ತುರ್ತಾಗಿ 700 ರೂ. ಫೋನ್‍ಪೇ ಮಾಡುವಂತೆ ಕೋರಿದ್ದಾಳೆ. ಎರಡು ದಿನಗಳ ಬಳಿಕ ತನ್ನ ತಾಯಿ ನಿಧನರಾಗಿದ್ದು ತುರ್ತಾಗಿ 2 ಸಾವಿರ ರೂ. ಹಾಕುವಂತೆ, ಮತ್ತೆ ಎರಡು ದಿನಗಳ ಬಳಿಕ ತಾತಿಯ ತಿಥಿ ಕಾರ್ಯಕ್ಕೆ 5 ಸಾವಿರ ರೂ. ಹಾಕುವಂತೆ ಬೇಡಿಕೆ ಇಟ್ಟು, ಆನ್‍ಲೈನ್ ಮೂಲಕ ಹಣ ಪಡೆದಿದ್ದಾಳೆ.
ಇದಾದ ಬಳಿಕ ನನ್ನ ತಾಯಿ ನಿಧನದ ಹಿನ್ನೆಲೆಯಲ್ಲಿ ಹಾಸನದಲ್ಲಿ ನನಗೆ ಯಾರೂ ಇಲ್ಲವಾಗಿದ್ದು, ಐಎಎಸ್ ಪಾಸಾಗಿರುವ ನಾನು ಬೆಂಗಳೂರು ವಾಸಕ್ಕೆ ತುರ್ತಾಗಿ 20 ಸಾವಿರ ರೂ. ಬೇಕಿದೆ ಎಂದು, ಬಳಿಕ ಬೇರೆ ಬೇರೆ ನೆಪಗಳನ್ನು ಹೇಳಿ ಪರಮೇಶ್ವರನಿಂದ ಆನ್‍ಲೈನ್ ಮೂಲಕವೇ ಯುವತಿ ಒಟ್ಟು 41,26,800 ರೂ. ಹಣ ಪಡೆದಿದ್ದಾಳೆ.
ಬಳಿಕ ಇದರಲ್ಲಿ 2,21,930 ರೂ. ಮರಳಿ ಪಡೆದಿದ್ದು, ಇದಾದ ನಂತರ ಮತ್ತೆ ಹಣ ನೀಡುವಂತೆ ಮಂಜುಳಾ ಹೆಸರು ಹೇಳಿಕೊಂಡ ಯುವತಿ ಬೇಡಿಕೆ ಇಡುತ್ತಲೇ ಸಾಗಿದ್ದಳು. ಇದರಿಂದ ಅನುಮಾನ ಬಂದ ಪರಮೇಶ್ವರ ತನ್ನ ಸಹೋದರರಾದ ಪ್ರಭು ಪಾಟೀಲ ಹಾಗೂ ರಮೇಶ ಇವರಿಗೆ ಮಾಹಿತಿ ನೀಡಿದ್ದಾನೆ. ತನ್ನ ಸಹೋದರನೊಂದಿಗೆ ಯುವತಿ ನಡೆಸಿದ ಎಲ್ಲ ಬೆಳವಣಿಗೆ ಗಮನಿಸಿದ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾಗಿ ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತ ಯುವಕ ಪರಮೇಶ್ವರ ವಿಜಯಪುರ ಸೈಬರ್ ಕ್ರೈಂ ಸಿಪಿಐ ರಮೇಶ ಅವಜಿ ಅವರನ್ನು ಸಂಪರ್ಕಿಸಿ ತನಗೆ ಪೇಸ್‍ಬುಕ್ ಸ್ನೇಹಿತೆಯಿಂದಾದ ಆರ್ಥಿಕ ವಂಚನೆ ಕುರಿತು ವಿವರ ನೀಡಿದ್ದು, ಯುವತಿಯಿಒಂದ ತನಗೆ 39,04,870 ರೂ. ವಂಚನೆ ಆಗಿದೆ ಎಂದು ನ.15 ರಂದು ದೂರು ನೀಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು, ತನಿಖೆ ಆರಂಭಿಸಿದ್ದಾರೆ.