ನವದೆಹಲಿ: “ಫೋನಿ” ಎಂಬ ಚಂಡ ಮಾರುತ ಶುಕ್ರವಾರ ಬಂಗಾಲಕೊಲ್ಲಿ ಮೂಲಕ ಒಡಿಶಾಗೆ ಬಂದಪ್ಪಳಿಸಿದೆ. 180ರಿಂದ 200 ಕಿಲೋ ಮೀಟರ್ ವೇಗದಲ್ಲಿ ಬಂದಪ್ಪಳಿಸಿದ ಚಂಡಮಾರುತದ ಹೊಡೆತಕ್ಕೆ ಮರ, ವಾಹನಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಐದಾರು ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ. ಏತನ್ಮಧ್ಯೆ ಚಂಡಮಾರುತ ಪೀಡಿತ ಪ್ರದೇಶದಲ್ಲಿರುವ ಜನರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ತನ್ನ ಬಳಕೆದಾರರಿಗೆ ಸಹಾಯಕವಾಗಲಿ ಎಂದು “ ಐ ಯಾಮ್ ಸೇಫ್” ಎಂಬ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡಿದೆ.
ಫೇಸ್ ಬುಕ್ ನಲ್ಲಿ ಸೈಕ್ಲೋನ್ ಫೋನಿ ಸೇಫ್ಟಿ ಚೆಕ್ ಎಂದು ಆ್ಯಕ್ಟಿವೇಟ್ ಆಗಿದ್ದು ಅದರಲ್ಲಿ ಐ ಆ್ಯಮ್ ಸೇಫ್ ಎಂಬ ಆಯ್ಕೆಯನ್ನು ನೀಡಿದೆ. ಇದರಿಂದಾಗಿ ಚಂಡಮಾರುತ ಹೊಡೆತದಿಂದ ನಲುಗಿರುವ ಪ್ರದೇಶದಲ್ಲಿರುವ ಜನರು ತಾವು ಸೇಫ್ ಆಗಿದ್ದೇವೆ ಎಂಬ ಆಯ್ಕೆಯನ್ನು ಒತ್ತಿದರೆ, ಆ ನೋಟಿಫಿಕೇಶನ್ ಅದು ಮತ್ತೊಬ್ಬ ಗೆಳೆಯನಿಗೆ ಹೋಗುತ್ತದೆ..ಹೀಗೆ ಸೇಫ್ ಆಗಿರುವವರು, ತೊಂದರೆ ಸಿಲುಕಿರುವವರ ಪತ್ತೆ ಹಚ್ಚಲು ತುಂಬಾ ಸಹಾಯಕವಾಗಲಿದೆ. ಫೇಸ್ ಬುಕ್ ಆ್ಯಪ್ ಮೂಲಕ ಈ ಆಯ್ಕೆ ಪಡೆದುಕೊಳ್ಳಬಹುದಾಗಿದೆ ಎಂದು ಫೇಸ್ ಬುಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ನೇಪಾಳ ಭೂಕಂಪ, ಕೋಲ್ಕತಾ ಸೇತುವೆ ಕುಸಿತ ಹೀಗೆ ಪ್ರಮುಖ ದುರಂತಗಳು ಸಂಭವಿಸಿದಾಗ ಫೇಸ್ ಬುಕ್ “ಐ ಆ್ಯಮ್ ಸೇಫ್” ಎಂಬ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡುವ ಮೂಲಕ ಅಪಾಯದ ಸ್ಥಳದಲ್ಲಿರುವ ಜನರ ಸುರಕ್ಷತೆ ಮತ್ತು ತೊಂದರೆಗೊಳಗಾದ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿತ್ತು.
ಶುಕ್ರವಾರ ಬೆಳಗ್ಗೆ 8ಗಂಟೆಯಿಂದ ಹತ್ತು ಗಂಟೆವರೆಗೆ ಫೋನಿ ಚಂಡಮಾರುತ ಪುರಿಯನ್ನು ಹಾದು ಹೋಗಿತ್ತು. ಮಧ್ಯಾಹ್ನ 1ಗಂಟೆವರೆಗೂ ಚಂಡಮಾರುತದ ಅಬ್ಬರವಿದ್ದಿದ್ದು, ಬಳಿಕ ಅದರ ವೇಗ ಕಡಿಮೆಯಾಗತೊಡಗಿತ್ತು ಎಂದು ವರದಿ ತಿಳಿಸಿದೆ.