ಹುನಗುಂದ: ಮಕ್ಕಳು ಬಿಳಿ ಹಾಳೆ ಇದ್ದಂತೆ. ವಿದ್ಯಾರ್ಥಿಗಳ ಭವಿಷ್ಯದ ಬಿಳಿ ಹಾಳೆಯ ಮೇಲೆ ಶಿಕ್ಷಕರು ಮತ್ತು ಪಾಲಕರು ಒಳ್ಳೆಯ ಚಿತ್ರ ಬಿಡಿಸುವ ಕಾರ್ಯವಾಗಬೇಕಿದೆ ಎಂದು ಎಸ್ ಆರ್‌ಎನ್‌ಇ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿ ಹಿರೇಮಠ ಹೇಳಿದರು.
ಕೂಡಲಸಂಗಮ ಪುನರ ವಸತಿ ಕೇಂದ್ರದಲ್ಲಿರುವ ಸಿದ್ದಗಂಗಾ ಪಬ್ಲಿಕ್ ಸ್ಕೂಲ್‌ದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮಾತಾ ಮತ್ತು ಪಿತೃ ವಂದನಾ ಮತ್ತು ಪಾಲಕರೊಂದಿಗೆ ಸಂವಾದ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕಾದರೇ ಶಿಕ್ಷಕರು ಮತ್ತು ಪಾಲಕರು ಮಕ್ಕಳಲ್ಲಿ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ತುಂಬಬೇಕು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದ ಬಡವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಖರ್ಚನ್ನು ನಮ್ಮ ಫೌಂಡೇಶನ್ ನೋಡಿಕೊಳ್ಳಲಿದೆ ಎಂದರು.
ಪ್ರಾಚಾರ್ಯ ರಾಘವೇಂದ್ರ ಕೆ.ಬಿ. ಮಾತನಾಡಿದರು. ಶಾಲೆ ಆಡಳಿತಾಧಿಕಾರಿ ಎಸ್.ಬಿ.ಕೋಟಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರಿಗಿಂತ ಪೋಷಕರ ಪಾತ್ರವೇ ದೊಡ್ಡದಾಗಿರುತ್ತದೆ. ಮಕ್ಕಳಿಗೆ ಕಷ್ಟಪಟ್ಟು ಕಲಿಯಬಾರದು. ಇಷ್ಟಪಟ್ಟು ಕಲಿಯುವ ವಾತಾವರಣವನ್ನು ಪಾಲಕರು ಸೃಷ್ಟಿಸಬೇಕು ಎಂದರು.
ಶಾಲೆಯ ಅಧ್ಯಕ್ಷ ಸಿದ್ದು ನವಲಿಹಿರೇಮಠ, ರೇಖಾ ನವಲಿಹಿರೇಮಠ, ಗಂಗಾಂಬಿಕಾ ನವಲಿಹಿರೇಮಠ, ಶ್ವೇತಾ ಹಿರೇಮಠ, ನೀಲಾಂಬಿಕಾ ಅಂಗಡಿ, ವೀರೇಶ ವಾಸನದ, ವಿನಯ ಚೆಟ್ಟೆರ, ಭಾಷಾ ಶಿಕ್ಷಕ ರವಿಕುಮಾರ ಮುರಾಳ ಇದ್ದರು.