Advertisement

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

07:58 AM Feb 06, 2019 | |

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಇನ್ನು ಹೆಚ್ಚು ಸಮಯ ಪಠ್ಯದ ಮೇಲೆ ಗಮನವಿಟ್ಟುಕೊಂಡು ದಿನ ನಿತ್ಯ ವೇಳಾಪಟ್ಟಿಯನ್ನು ತಯಾರಿಸಿ ಅದರಂತೆ ಪ್ರತಿದಿನ ಒಂದೊಂದು ಪಠ್ಯದ ಅಧ್ಯಯನ ನಡೆಸಿದರೆ ಪರೀಕ್ಷಾ ಸಮಯದಲ್ಲಿ ಓದಿ ಆಗಲಿಲ್ಲ ಎಂಬ ಆತಂಕ ಅಥವಾ ತಲೆ ನೋವು ಇರುವುದಿಲ್ಲ.

Advertisement

ಪರೀಕ್ಷಾ ದಿನಗಳು ಸನಿಹವಾಗುತ್ತಿವೆೆ ಎಂದಾಕ್ಷಣ ವಿದ್ಯಾರ್ಥಿಗಳಲ್ಲಿ ಅವ್ಯಕ್ತ ಭಯ ಶುರುವಾಗಿ ಬಿಡುತ್ತದೆ. ಯಾವ ವಿಷಯ ಮೊದಲು ಓದಲಿ, ಓದಿದರೂ ನೆನಪುಳಿಯುವುದಿಲ್ಲ, ಪಾಸಾಗೋದು ಹೇಗೆ ಎಂಬ ಚಿಂತೆಯಲ್ಲಿ ಪರೀಕ್ಷೆಯನ್ನು ಎದುರಿಸುವುದೊಂದು ಭೀತಿಯನ್ನೇ ಸೃಷ್ಟಿಸಿ ಬಿಡುತ್ತದೆ. ಭಯದಿಂದ ಒತ್ತಡ, ಖನ್ನತೆ, ಆರೋಗ್ಯದಲ್ಲಿ ಏರುಪೇರು ಉಂಟಾಗುವುದೂ ಇದೆ. ಈ ಪರೀಕ್ಷಾ ಜ್ವರ ಎನ್ನುವುದು ಉತ್ತಮ ಅಂಕ ಪಡೆಯುವ ವಿದ್ಯಾರ್ಥಿಗಳನ್ನೂ ಬಿಟ್ಟಿಲ್ಲ.

ಇನ್ನೇನು ಈ ಶೈಕ್ಷಣಿಕ ವರ್ಷದ ತರಗತಿಗಳು ಕೊನೆಯ ಹಂತದಲ್ಲಿವೆ. ಮಾರ್ಚ್‌ನಿಂದಲೇ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗೆ ಇನ್ನಿರುವುದು ಒಂದೇ ತಿಂಗಳು ಎಂದಾಗಲೇ ವಿದ್ಯಾರ್ಥಿಗಳಲ್ಲಿ ಅವ್ಯಕ್ತ ನಡುಕವೊಂದು ಶುರುವಾಗಿ ಬಿಟ್ಟಿದೆ. ಕೆಲವರಿಗೆ ಪಾಸಾಗುವ ಚಿಂತೆಯಾದರೆ, ಇನ್ನು ಕೆಲ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಬಾರದಿದ್ದರೆ ಎಂಬ ಚಿಂತೆ.

ಆದರೆ ಈ ಭಯ ಶುರುವಾಗಲು ಮುಖ್ಯ ಕಾರಣ ಸರಿಯಾದ ಪೂರ್ವತಯಾರಿ ನಡೆಸದೇ ಇರುವುದು. ಆರಂಭದಿಂದಲೂ ಕ್ರಮಬದ್ಧವಾಗಿ ಓದಿಕೊಳ್ಳುವುದನ್ನು ರೂಢಿಸಿಕೊಂಡರೆ ಪರೀಕ್ಷೆಗಳು ಹತ್ತಿರವಾಗುವಾಗ ಅನಗತ್ಯ ಒತ್ತಡಕ್ಕೆ ಒಳಗಾಗುವ ಪ್ರಮೇಯವೇ ಬರುವುದಿಲ್ಲ. ಹೇಳೀಕೇಳಿ ಇದು ಸ್ಪರ್ಧಾತ್ಮಕ ಯುಗ. ಭವಿಷ್ಯ ನಿಂತಿರುವುದೇ ಗಳಿಸುವ ಅಂಕದ ಮೇಲೆ. ಹೀಗಿರುವಾಗ ಅಂಕ ಅಂತೂ ಬೇಕೇ ಬೇಕು. ಉತ್ತಮ ಸಾಧನೆ ತೋರದಿದ್ದರೆ ಬದುಕು ಕತ್ತಲೆಯಾಗುತ್ತದೆ. ಹಾಗಾಗದಿರಲು ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುವುದು ಅಗತ್ಯ.

ಪೂರ್ವ ತಯಾರಿ
ಪ್ರತಿ ವಿದ್ಯಾರ್ಥಿಯು ಮುಖ್ಯ ಸಮಸ್ಯೆ ಎಂದರೆ ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ ಎಂಬುದು. ಕಾರಣ ಓದಿನ ಬಗ್ಗೆ ಸರಿಯಾದ ಪ್ಲಾನ್‌ ಮಾಡದೇ ಇರುವುದು. ಓದುವುದರ ಜತೆಗೆ ಪಕ್ಕದಲ್ಲೊಂದು ನೋಟ್ ಪುಸ್ತಕ ಇಟ್ಟುಕೊಂಡು ಓದಿದ್ದಲ್ಲಿ ಪ್ರಾಮುಖ್ಯವಾದದ್ದನ್ನು ಬರೆದಿಟ್ಟುಕೊಳ್ಳಿ. ಎರಡನೇ ಬಾರಿಯೂ ಅದೇ ಪ್ರಶ್ನೆಗೆ ಉತ್ತರವನ್ನು ಮನನ ಮಾಡಿಕೊಳ್ಳಿ. ಒಂದು ಚಾಪ್ಟರ್‌ ಮುಗಿದ ಅನಂತರ ಪುನಃ ಇನ್ನೊಮ್ಮೆ ಅಧ್ಯಯಿಸಿ. ಅನಂತರ ಕನಿಷ್ಠ ಅರ್ಧ ಗಂಟೆ ವಿಶ್ರಾಂತಿ ಪಡೆದುಕೊಳ್ಳಿ. ಪ್ರತಿ ಪಾಠವನ್ನೂ ಇದೇ ರೀತಿ ಮಾಡುತ್ತಾ ಹೋದರೆ ಓದಿದ್ದು ಮರೆತು ಹೋಗದು.

Advertisement

ಪರೀಕ್ಷೆಗೆ ಕಾಯಬೇಡಿ
ವಿದ್ಯಾರ್ಥಿಗಳು ಮಾಡುವ ಬಹುದೊಡ್ಡ ತಪ್ಪೆಂದರೆ, ಪರೀಕ್ಷೆ ಸನಿಹವಾದಾಗ ಓದಿದರಾಯಿತು ಎಂದುಕೊಂಡು ಉಳಿದ ದಿನಗಳನ್ನು ಸುಮ್ಮನೆ ಕಳೆದು ಬಿಡುವುದು. ಇದರಿಂದ ಪರೀಕ್ಷೆ ವೇಳೆ ಒಮ್ಮೆಲೆ ಹೊರೆಯಾಗಿ ಕಳಪೆ ಸಾಧನೆ ತೋರಬೇಕಾಗುತ್ತದೆ. ಅದರ ಬದಲಾಗಿ ಅಂದಂದಿನ ಪಾಠಗಳನ್ನು ಅಂದಿಗೇ ಓದಿ ಮುಗಿಸಿಕೊಂಡರೆ, ಪರೀಕ್ಷಾ ಸಮಯದಲ್ಲಿ ಒಮ್ಮೆ ಪುಸ್ತಕದ ಮೇಲೆ ಕಣ್ಣಾಡಿಸಿದರೂ ಸಾಕು. ಓದಿದ್ದೆಲ್ಲವೂ ನೆನಪುಳಿಯುತ್ತದೆ.

ಚೆನ್ನಾಗಿ ನಿದ್ದೆ ಮಾಡಿ
ಪರೀಕ್ಷಾ ದಿನ ಹತ್ತಿರ ಬಂದಾಗ ನಿದ್ದೆ ಬಿಟ್ಟು ಓದುವುದು ಬಹುತೇಕ ವಿದ್ಯಾರ್ಥಿಗಳು ಮಾಡುವ ತಪ್ಪುಗಳಲ್ಲೊಂದು. ಇದರಿಂದ ಪರೀಕ್ಷೆ ಹಾಲ್‌ನಲ್ಲಿ ನಿದ್ದೆ ಬರುವುದು, ನಿಶ್ಶಕ್ತಿ, ಸುಸ್ತು, ತಲೆ ತಿರುಗುವಿಕೆ, ತಲೆನೋವಿನಂಥ ಕಾಯಿಲೆಗಳು ಬಾಧಿಸುತ್ತವೆ. ದಿನಕ್ಕೆ ಕನಿಷ್ಠ ಆರು ಗಂಟೆ ನಿದ್ದೆ ಮನುಷ್ಯನ ದೇಹಕ್ಕೆ ಅವಶ್ಯ. ಹಾಗಿರುವಾಗ ನಿದ್ದೆಗೆಟ್ಟು ಓದಿದರೆ, ಅನಗತ್ಯ ಅನಾರೋಗ್ಯವನ್ನು ಮೈಗೆಳೆದುಕೊಂಡಂತಾಗುತ್ತದೆ. ರಾತ್ರಿ ನಿದ್ದೆಗೆಟ್ಟು ಓದುವುದಕ್ಕಿಂತ ರಾತ್ರಿ ಬೇಗ ಮಲಗಿ, ಮುಂಜಾವ 4 ಗಂಟೆಗೇ ಎದ್ದು ಓದಿ. ಮುಂಜಾವ ಹೊತ್ತಿನಲ್ಲಿ ಪ್ರಶಾಂತ ವಾತಾವರಣವಿರುವುದರಿಂದ ಓದಿಗೂ ಆ ಹೊತ್ತು ಪೂರಕವಾಗಿರುತ್ತದೆ. ಓದಿದ್ದು ನೆನಪಿನ ಲ್ಲುಳಿಯುವಲ್ಲಿ ಮುಂಜಾವದ ಓದು ಪೂರಕ.

ಮಿತ ಆಹಾರ ಸೇವನೆ
ಪರೀಕ್ಷೆ ಸಮಯದಲ್ಲಿ ಪೋಷಕಾಂಶಯುಕ್ತ ಆಹಾರ ತೆಗೆದುಕೊಳ್ಳಬೇಕು. ಆಹಾರ ಸೇವನೆಯನ್ನು ಕಡೆಗಣಿಸಿ ಓದಿಗೇ ಪ್ರಾಮುಖ್ಯ ನೀಡಿದರೆ ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಹಾಗಂತ ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆಯೂ ಹಿತಕರವಲ್ಲ. ಹಣ್ಣು-ತರಕಾರಿಗಳನ್ನು ಸೇವಿಸುವುದರೊಂದಿಗೆ ಮಿತ ಆಹಾರಕ್ಕೆ ಪ್ರಾಮುಖ್ಯ ನೀಡಬೇಕಾದುದು ಅವಶ್ಯ.

ವೇಳಾಪಟ್ಟಿ  ಹಾಕಿಕೊಳ್ಳಿ
ಕಾಲೇಜಿನಲ್ಲಿ ಪ್ರತಿ ವಿಷಯಕ್ಕೂ ಹೇಗೆ ವೇಳಾಪಟ್ಟಿಗಳಿರುತ್ತವೆಯೋ, ಹಾಗೆಯೇ ಮನೆಯಲ್ಲಿ ನಿಮ್ಮದೇ ಆದ ವೇಳಾಪಟ್ಟಿಯೊಂದನ್ನು ತಯಾರಿಸಿಕೊಳ್ಳಿ ಮತ್ತು ಅದನ್ನು ಪ್ರಾಮಾಣಿಕವಾಗಿ ಪಾಲಿಸಿ. ದಿನದಲ್ಲಿ ಎಷ್ಟು ಹೊತ್ತು ಓದಬೇಕು, ಎಷ್ಟು ಹೊತ್ತು ಟಿವಿ ನೋಡಬೇಕು, ಎಷ್ಟು ಹೊತ್ತು ಆಡಬೇಕು ಎಂಬುದನ್ನೆಲ್ಲ ಮೊದಲೇ ಯೋಚಿಸಿಕೊಂಡರೆ ಸಮಯದ ಅಭಾವ ಕಾಡುವುದಿಲ್ಲ. ಪರೀಕ್ಷಾ ಸಮಯದಲ್ಲಿ ಆದಷ್ಟು ಮೊಬೈಲ್‌ನಿಂದ ದೂರವಿರಿ.

ಪರೀಕ್ಷೆಯನ್ನು ಸಂಭ್ರಮಿಸಿ
ಪರೀಕ್ಷೆ ಎಂದರೆ ಭಯ ಬೇಡ. ಗೆದ್ದೇ ಗೆಲ್ಲುವೆನೆಂಬ ಸಂಭ್ರಮವಿರಲಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ, ಫೇಲಾದರೂ ಬದುಕಲು ನೂರಾರು ದಾರಿಗಳಿವೆ. ಹಾಗಾಗಿ ಬದುಕುವ ಛಲದೊಂದಿಗೆ ಪರೀಕ್ಷೆ ಎದುರಿಸಿದರೆ, ಪರೀಕ್ಷೆ ಅಗ್ನಿ ಪರೀಕ್ಷೆಯಾಗಲಾರದು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತಾ ನಿಮ್ಮದಾಗುತ್ತದೆ.

•ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next