Advertisement

ಸಾಮಾಜಿಕ ಅಂತರಕ್ಕಾಗಿ ಫ್ಯಾಬ್ರಿಕೇಟೆಡ್‌ ಜಾಳಿಗೆ..

12:28 PM May 14, 2020 | mahesh |

ಹುಬ್ಬಳ್ಳಿ: ಕೋವಿಡ್ ವೈರಸ್‌ ಕೋವಿಡ್‌ -19 ಹರಡುವುದನ್ನು ತಪ್ಪಿಸಲು ನಗರದ ಕೊಪ್ಪಿಕರ ರಸ್ತೆಯ ನೆಹರು ಮೈದಾನ ಬಳಿಯ ರಾಮದೇವ ಆಟೋಮೊಬೈಲ್ಸ್‌ ಅಂಗಡಿ ಮಾಲಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಅಂಗಡಿಯ ಪ್ರವೇಶ ದ್ವಾರದಲ್ಲೇ ಸುಮಾರು 3-4 ಅಡಿ ಅಂತರದಲ್ಲಿ ಫ್ಯಾಬ್ರಿಕೇಟೆಡ್‌(ಕೃತ್ರಿಮ) ಜಾಳಿಗೆ ಬಿಡಿಸಿ ಇತರೆ ವ್ಯಾಪಾರಿಗಳಿಗೆ ಮಾದರಿಯಾಗಿದೆ.

Advertisement

ಕೋವಿಡ್‌-19 ನಿಮಿತ್ತ ಸುಮಾರು ಸುಮಾರು ಒಂದೂವರೆ ತಿಂಗಳಿನಿಂದ ಲಾಕ್‌ ಡೌನ್‌ದಿಂದ ಅಂಗಡಿ ತೆರೆದಿರಲಿಲ್ಲ. ಆದರೆ ರಾಜ್ಯ ಸರಕಾರ ಕಳೆದ ಸೋಮವಾರದಿಂದ
ಕಂಟೇನ್ಮೆಂಟ್‌ ಪ್ರದೇಶ ಹೊರತುಪಡಿಸಿ ಇನ್ನುಳಿದೆಡೆ ಲಾಕ್‌ಡೌನ್‌ದಲ್ಲಿ ಸಡಿಲಿಕೆ ಮಾಡಿದ್ದರಿಂದ ಆಟೋಮೊಬೈಲ್‌, ಇಲೆಕ್ಟ್ರಿಕಲ್‌, ಬಟ್ಟೆ, ಕಿರಾಣಿ, ಬೇಕರಿ, ಪೇಂಟ್ಸ್‌, ಸ್ಟೇಶನರಿ, ಹಾರ್ಡ್‌ವೇರ್‌, ಪ್ಲಂಬಿಂಗ್‌ ಸಾಮಗ್ರಿ ಸೇರಿದಂತೆ ಇನ್ನಿತರೆ ವ್ಯಾಪಾರಿಗಳು ತಮ್ಮ ವ್ಯಾಪಾರ ಆರಂಭಿಸಿದ್ದಾರೆ. ಆದರೆ ಬಹುತೇಕ ಅಂಗಡಿಗಳಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದಾರೆ. ಅಂಗಡಿಯವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದರೂ ಅದಕ್ಕೆ ಖ್ಯಾರೆ ಎನ್ನದೆ ವಸ್ತುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ.  ಕೆಲವರು ಅಂಗಡಿಕಾರರೊಂದಿಗೆ ವಾಗ್ವಾದ ಕೂಡ ಮಾಡಿದ್ದಾರೆ. ರಾಮದೇವ ಆಟೋಮೊಬೈಲ್ಸ್‌ ಅಂಗಡಿಯ ಮಾಲಕ ಗಜಾರಾಮ ಪ್ರಜಾಪತ್‌ ಅವರು ತಮ್ಮ
ವ್ಯಾಪಾರವು ನಡೆಯಬೇಕು. ಜತೆಗೆ ಇನ್ನೊಬ್ಬ(ಗ್ರಾಹಕ)ರಿಂದ ತಮಗೆ ಸೋಂಕು ತಗುಲಬಾರದು. ಪದೇ ಪದೇ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುವುದು, ಇದರಿಂದ ಅವರು ಅಸಮಾಧಾನಗೊಂಡು ಮಾತಿಗೆ ಮಾತು ಬೆಳೆದು ವ್ಯಾಪಾರಕ್ಕೆ ಮತ್ತಷ್ಟು ಹೊಡೆತ ಬೀಳುವುದು ಹಾಗೂ ಕಾಯಂ ಗ್ರಾಹಕರನ್ನು ಕಳೆದುಕೊಳ್ಳುವುದು ಬೇಡ.
ಅದರ ಬದಲು ನಾವೇ ಸಾಮಾಜಿಕವಾಗಿ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಿದರಾಯ್ತು ಎಂದು ಅಂಗಡಿಯ ಪ್ರವೇಶ ದ್ವಾರದಲ್ಲಿಯೇ ಫ್ಯಾಬ್ರಿಕೇಟೆಡ್‌ ಅಳವಡಿಸಿ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡುತ್ತಿದ್ದಾರೆ.

ಸಾಮಾಜಿಕ ಅಂತರ ಹಗಲು ಗನಸು: ರಾಜ್ಯ ಸರಕಾರವು ಸೋಮವಾರದಿಂದ ಲಾಕ್‌ ಡೌನ್‌ದಲ್ಲಿ ಸಡಿಲಿಕೆ ಮಾಡಿದಾಗಿನಿಂದ ನಗರದ ಮಾರುಕಟ್ಟೆ ಪ್ರದೇಶ ಹಾಗೂ ವಿವಿಧ ಪ್ರಮುಖ ರಸ್ತೆ ಮತ್ತು ಪ್ರದೇಶಗಳಲ್ಲಿ ಅಂಗಡಿಗಳು ತೆರೆದುಕೊಂಡಿವೆ. ಆದರೆ ಬಹುತೇಕ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಎಂಬುದು ಹಗಲು ಗನಸು. ಕೆಲವು ಅಂಗಡಿಗಳ ಮಾಲಕರು ಅಂಗಡಿಯ ಪ್ರವೇಶ ದ್ವಾರದಲ್ಲಿ ಕಟ್ಟಿಗೆಯಗಳ, ಬಂಬೂ ಕಟ್ಟಿದ್ದರೆ, ಇನ್ನು ಕೆಲವರು ಹಗ್ಗ ಕಟ್ಟಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುತ್ತಿದ್ದರೆ, ಬಹುತೇಕ ಅಂಗಡಿಕಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸಿಕೊಳ್ಳದೆ ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲದೆ ಜನರಲ್ಲೂ ಕೋವಿಡ್‌-19ರ ಬಗ್ಗೆ ನಿರ್ಲಕ್ಷ್ಯ ಭಾವನೆಯೇ ಹೆಚ್ಚು ಎಂಬಂತಾಗಿದೆ. ಮಾರುಕಟ್ಟೆ ಹಾಗೂ ರಸ್ತೆಗಳಲ್ಲಿ ಬಹುತೇಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತಿರುಗಾಡುತ್ತಿದ್ದಾರೆ. ಅಂಗಡಿಗಳಲ್ಲಿ ಮುಗಿಬಿದ್ದು ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು ಚಿಕ್ಕ ಮಕ್ಕಳನ್ನು ತಮ್ಮ ಜತೆಗೆ ಕರೆದುಕೊಂಡು ಬರುತ್ತಿದ್ದಾರೆ.

ಅಂಗಡಿಗಳಲ್ಲಿ ಕಾರ್ಮಿಕರ ಕೊರತೆ: ಕೊರೊನಾ ವೈರಸ್‌ ನಿಮಿತ್ತ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಬಟ್ಟೆ, ಆಟೋಮೊಬೈಲ್‌, ಇಲೆಕ್ಟ್ರಿಕಲ್‌, ಹಾರ್ಡ್‌ವೇರ್‌, ಔಷಧಿ, ಕಿರಾಣಿ ಸೇರಿದಂತೆ ಇನ್ನಿತರೆ ಅಂಗಡಿಗಳಲ್ಲಿ ದುಡಿಯಲು ಅನ್ಯ ರಾಜ್ಯಗಳಿಂದ  ನಗರಕ್ಕೆ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರಿಂದ ಇರುವಕೆಲಸಗಾರರನ್ನೇ ಬಳಸಿ ವ್ಯಾಪಾರ
ಮಾಡಲಾಗುತ್ತಿದ್ದಾರೆ.

ಆಟೋಮೊಬೈಲ್‌ ಕ್ಷೇತ್ರದಲ್ಲಿ ಅದರಲ್ಲೂ ದ್ವಿಚಕ್ರ ವಾಹನದಂತಹ ಸಣ್ಣ-ಪುಟ್ಟ ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರು ಬಹುತೇಕವಾಗಿ ಅಶಿಕ್ಷಿತರೆ ಹೆಚ್ಚು. ಅವರಿಗೆ ಎಷ್ಟು ತಿಳಿವಳಿಕೆ ಹೇಳಿದರೂ ಕಡಿಮೆಯೇ. ಕೋವಿಡ್‌-19 ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮುಗಿ ಬಿದ್ದು ವ್ಯಾಪಾರ ಮಾಡದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸೋಂಕು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಗ್ರಾಹಕರಿಗೆ ಪದೇ ಪದೇ ಹೇಳಿದರು ಕೇಳದಿದ್ದಾಗ ರಾಮದೇವ ಆಟೋಮೊಬೈಲ್ಸ್‌ನ ಮಾಲಕರಲ್ಲಿ ಹೊಸದೊಂದು ಪರಿಕಲ್ಪನೆ ಮೂಡಿತು. ಆಗ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಡಮಾಡದೆ ಅಂಗಡಿ ಮುಂದೆ ತಳಮಟ್ಟದಿಂದ ಅಂಗಡಿಯ ಎತ್ತರದವರೆಗೂ ಫ್ಯಾಬ್ರಿಕೇಟೆಡ್‌ನಿಂದ ವೆಲ್ಡಿಂಗ್‌ ಮಾಡಿಸಿದ್ದಾರೆ. ಅಲ್ಲದೆ ಗ್ರಾಹಕರಿಗೆ ಆಟೋಮೊಬೈಲ್‌ ಸಾಮಗ್ರಿ ಕೊಡುವ ಸಲುವಾಗಿ ಕೌಂಟರ್‌ನ ಸಮಮಟ್ಟದಲ್ಲಿಯೇ ಜಾಗ ಬಿಡಿಸಿದ್ದಾರೆ. ಇದರಿಂದ ಅವರು ಗ್ರಾಹಕರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇವರ ಈ ಪರಿಕಲ್ಪನೆ ಇನ್ನಿತರೆ ವ್ಯಾಪಾರಸ್ಥರಿಗೆ ಮಾದರಿಯಾಗಿದೆ.

Advertisement

ರಾಜ್ಯ ಸರಕಾರವು ಸೋಮವಾರದಿಂದ ಲಾಕ್‌ಡೌನ್‌ದಲ್ಲಿ ಸಡಲಿಕೆ ಮಾಡಿದ್ದರಿಂದ ಆಟೋಮೊಬೈಲ್‌ ಅಂಗಡಿ ತೆರೆದೆವು. ಆದರೆ ಆಟೋಮೊಬೈಲ್ಸ್‌ ಕ್ಷೇತ್ರದ
ಸಣ್ಣ-ಪುಟ್ಟ ಗ್ಯಾರೇಜ್‌ಗಳಲ್ಲಿ ಶಿಕ್ಷಿತರು ಕಡಿಮೆ. ಅಲ್ಲಿ ಕೆಲಸ ಮಾಡುತ್ತಿದ್ದವರು ವಾಹನಗಳ ಬಿಡಿಭಾಗಗಳನ್ನು ಖರೀದಿಸಲು ಅಂಗಡಿಗೆ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸಿ ಎಂದು ಎಷ್ಟೇ ಬಾರಿ ಹೇಳಿದರೂ ಕೇಳದೇ ಕೌಂಟರ್‌ ಮೇಲೆ ಮುಗಿಬಿದ್ದು ಖರೀದಿಸುತ್ತಿದ್ದರು. ಅಲ್ಲದೆ ಅಂಗಡಿಯಲ್ಲಿದ್ದ ಕೆಲ ಕೆಲಸಗಾರರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ. ಹೀಗಾಗಿ ನಮಗೂ ಸಮಸ್ಯೆ ಆಗುತ್ತಿತ್ತು. ಸೋಂಕು ಇನ್ನೊಬ್ಬರಿಗೆ ಹರಡಬಾರದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕೆಂದು ಯೋಚಿಸಿ ಅಂಗಡಿಯ ಸುತ್ತಲೂ ತಳಮಟ್ಟದಿಂದ ಎತ್ತರದವರೆಗೆ 3-4 ಅಡಿ ದೂರದಲ್ಲಿ ಫ್ಯಾಬ್ರಿಕೇಟೆಡ್‌(ಜಾಳಿಗೆ)ನಿಂದ ವೆಲ್ಡಿಂಗ್‌ ಮಾಡಿಸಲಾಗಿದೆ. ಈಗ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡುತ್ತಿದ್ದೇವೆ. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಜಬರಾರಾಮ ಪ್ರಜಾಪತ್‌, ರಾಮದೇ ಆಟೋಮೊಬೈಲ್ಸ್‌ ಮಾಲಕ

ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next