Advertisement

ಸಂತ ಪದವಿಯತ್ತ ಬ್ರಹ್ಮಾವರ ಮೂಲದ ರೆ|ಫಾ|ಆಲ್ಫ್ರೆಡ್ ರೋಚ್‌

02:46 AM Dec 24, 2021 | Team Udayavani |

ಉಡುಪಿ: ಬ್ರಹ್ಮಾವರ ಬಾರ್ಕೂರು ಮೂಲದ ರೆ| ಫಾ| ಗುರು ಆಲ್ಫ್ರೆಡ್ ರೋಚ್‌ ಅವರ ಸಾತ್ವಿಕ ಜೀವನ ಹಾಗೂ ಜನರ ಬೇಡಿಕೆಯನ್ನು ಪರಿಗಣಿಸಿ ವ್ಯಾಟಿಕನ್‌ನ “ಸಂತರು ಮತ್ತು ಪುನೀತರನ್ನಾಗಿ ಘೋಷಿಸುವ ವಿಭಾಗ’ ವು ಅವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆ ಯನ್ನು ಆರಂಭಿಸಲು ಅನುಮತಿ ನೀಡಿದೆ. ಈ ಪ್ರಕ್ರಿಯೆಗೆ ಡಿ. 27ರಂದು ಚಾಲನೆ ಸಿಗಲಿದೆ.

Advertisement

ಸಂತ ಪದವಿಗೇರುವುದು ಬಹುದೊಡ್ಡ ಸಾಧನೆ ಹಾಗೂ ಗೌರವ. ಇದು ಸುದೀರ್ಘ‌ ಅವಧಿಯ ಪ್ರಕ್ರಿಯೆಯಾಗಿದ್ದು, ಹಲವು ರೀತಿಯ ಅಧ್ಯಯನ ನಡೆಸಿದ ಬಳಿಕ ಸಂತ ಪದವಿ ಪ್ರಾಪ್ತಿಯಾಗುತ್ತದೆ.

ಆಲ್ಫ್ರೆಡ್ ರೋಚ್‌ ಬಗ್ಗೆ ಕಪುಚಿನ್‌ ಸಭೆಯ ಧರ್ಮಗುರು ವಂ| ಗುರು ಆಲ್ಫ್ರೆಡ್ ರೋಚ್‌ 1924ರಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಹುಟ್ಟಿ ಬೆಳೆದು ಕ್ರೈಸ್ತ ಧರ್ಮಗುರುವಾಗಿ ಕರ್ನಾಟಕ ದಾದ್ಯಂತ ಸೇವೆ ಸಲ್ಲಿಸಿದ್ದರು. ಬ್ರಹ್ಮಾವರದಲ್ಲೇ ಹದಿನಾರು ವರ್ಷಗಳ ಕಾಲ ಜನಸೇವೆಯಲ್ಲಿ ತೊಡಗಿ 1996ರಲ್ಲಿ ದೈವಾಧೀನರಾದರು. ಅವರ ಸಾತ್ವಿಕ ಜೀವನ, ಜನರಿಗೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ, ಬಡಜನರ ಅಭಿವೃದ್ಧಿಗಾಗಿ ಅವರು ಮಾಡಿದ ಸಹಾಯ, ಇನ್ನಿತರ ದಯಾ ಕಾರ್ಯಗಳಿಂದ ಅವರನ್ನು ಆಧ್ಯಾತ್ಮಿಕತೆ ಹಾಗೂ ಜನಸೇವೆಯ ಮಾದರಿಯಾಗಿ ಪರಿಗಣಿಸಿ ಜಾತಿ-ಮತ ಬೇಧವಿಲ್ಲದೆ ಜನರು ಗೌರವಿಸಿದರು. ಅವರು ನಿಧನರಾಗಿ ಇಪ್ಪತ್ತೈದು ವರ್ಷ ಕಳೆದರೂ, ಅವರನ್ನು ಪುನೀತ ಪದವಿಗೆ ಏರಿಸಬೇಕೆಂಬ ಜನರ ಬೇಡಿಕೆಯು ದಿನೇ ದಿನೇ ಹೆಚ್ಚಳವಾಗ ತೊಡಗಿತು. ಈ ಎಲ್ಲ ಅಂಶಗಳನ್ನು ಗಮನಿಸಿ ಕೊಂಡು ಅವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸೂಚಿಸಲಾಗಿದೆ.

ದೀರ್ಘಾವಧಿ ಪ್ರಕ್ರಿಯೆ
ಇದೊಂದು ಅತೀ ಸಂಕೀರ್ಣ ಹಾಗೂ ಬಹಳ ಕಾಲ ತಗಲುವ ಪ್ರಕ್ರಿಯೆಯಾಗಿದ್ದು, ಕೆಥೋಲಿಕ್‌ ಧರ್ಮಸಭೆಯ ನೀತಿ-ನಿಯಮಗಳ ಪ್ರಕಾರ ನಡೆಯಲಿದೆ. ಈ ಪ್ರಕ್ರಿಯೆಯ ಅಂತ್ಯದಲ್ಲಿ, ಮೊದಲು ಪುನೀತ, ಅನಂತರ ಕೊನೆಯದಾಗಿ ಸಂತ ಪದವಿಯನ್ನು ಪೋಪ್‌ ಜಗದ್ಗುರುಗಳು ದಯಪಾಲಿಸಲಿದ್ದಾರೆ. ಈ ಸಂಕೀರ್ಣ ಪ್ರಕ್ರಿಯೆಯ ಪ್ರಥಮ ಹಂತವನ್ನು ವ್ಯಕ್ತಿಯು ಜೀವಿಸಿದ ಪರಿಸರದಲ್ಲಿ ನಡೆಸಲಾಗುತ್ತದೆ.

ಅಧ್ಯಯನಕ್ಕೆ ಸಮಿತಿ
ಪುನೀತ ಪದವಿಗೆ ಏರಿಸುವ ಪ್ರಕ್ರಿಯೆ ಆರಂಭ ಗೊಂಡ ಬಳಿಕ ಉಡುಪಿ ಬಿಷಪ್‌, ವ್ಯಾಟಿಕನ್‌ನಿಂದ ನೇಮಕಗೊಳ್ಳುವ ವೈಸ್‌ ಪೊಸ್ಟುಲೇಟರ್‌, ಧರ್ಮಶಾಸ್ತ್ರ ಅಧ್ಯಯನ ಮಾಡಿದವರು, ನೋಟರಿ, ನೈತಿಕ ಶಾಸ್ತ್ರ ಪರಿಣತರನ್ನೊಳಗೊಂಡ 8ರಿಂದ 10 ಮಂದಿಯ ಸಮಿತಿಯನ್ನು ರಚಿಸ ಲಾಗುತ್ತದೆ. ಇವರು ವಂ| ಗುರು ಆಲ್ಫೆ†ಡ್‌ ರೋಚ್‌ ಅವರ ವಿಚಾರಗಳು, ಸೇವಾ ಮನೋಭಾವ, ಧಾರ್ಮಿಕ, ಸಾಮಾಜಿಕ ಸೇವೆ, ಆಚಾರ-ವಿಚಾರಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಕಾಲಕಾಲಕ್ಕೆ ವರದಿ ನೀಡಲಿದ್ದಾರೆ. ಅವರ ಆರಾಧನೆಯಿಂದ ನಡೆದ ಪವಾಡ, ಜನರ ಅನಿಸಿಕೆಗಳನ್ನು ಸಂಗ್ರಹಿಸುವ ಕೆಲಸವನ್ನು ಈ ಸಮಿತಿ ಮಾಡಲಿದೆ.

Advertisement

ಇದನ್ನೂ ಓದಿ:ವರದಕ್ಷಿಣೆ ಇರುವ ಮದುವೆಗೆ ಹೋಗಲ್ಲ: ನಿತೀಶ್‌ ಕುಮಾರ್‌

ದೇಶದಲ್ಲಿ ಕೆಲವೇ ಮಂದಿ ಸಂತರು
ಇಸ್ರೇಲ್‌ನಲ್ಲಿ ಕ್ರೈಸ್ತ ಧರ್ಮ ಉಗಮವಾಗಿದ್ದು, ಬಳಿಕ ಪಶ್ಚಿಮ ಯುರೋಪ್‌ ಕಡೆಗೆ ಹರಡಿತು. ಇಟಲಿ, ರೋಮ್‌ ಸಹಿತ ಈ ಭಾಗಗಳಲ್ಲಿ ಸಹಸ್ರಾರು ಮಂದಿ ಈಗಾಗಲೇ ಸಂತ ಪದವಿಯನ್ನು ಪಡೆದುಕೊಂಡಿದ್ದಾರೆ. ಭಾರತದಲ್ಲಿ ಕೆಲವು ಮಂದಿ ಮಾತ್ರ ಸಂತ ಪದವಿಯನ್ನು ಪಡೆದುಕೊಂಡಿದ್ದಾರೆ. ಸೈಂಟ್‌ ಗೊನ್ಸಾಲೋ ಗ್ರೇಸಿಯಾ, ಸೈಂಟ್‌ ಜಾನ್‌ ಡಿ ಬ್ರಿಟ್ಟೋ, ಸೈಂಟ್‌ ಜೋಸೆಫ್ ವಾಝ್, ಸೈಂಟ್‌ ಮೇರಿಯಮ್‌ ತ್ರಿಸಿಯಾ ಚಿರಾಮೆಲ್‌ ಮನ್‌ಕಿದಿಯಾನ್‌, ಸೈಂಟ್‌ ಆಲೊ³àನ್ಸಾ ಆಫ್ ದ ಇಮ್ಯಾನುಕ್ಯುಲೆಟ್‌ ಕನ್ಸೆಪ್ಶನ್‌, ಸೈಂಟ್‌ ಇಪ್ರೊಸಿಯಾ ಇಳುವತಿಗಲ್‌, ಸೈಂಟ್‌ ಮದರ್‌ ತೆರೇಸಾ ಪ್ರಮುಖರು. ಮಂಗಳೂರು ಮೂಲದ ಬೆಥನಿ ಸಂಸ್ಥೆಗಳ ಸ್ಥಾಪಕರಾದ ಫಾ| ರೇಮಂಡ್‌ ಮಸ್ಕರೇನ್ಹನ್‌ ಅವರ ಪುನೀತ ಪದವಿ ಪ್ರಕ್ರಿಯೆ ಆರಂಭಗೊಂಡಿದ್ದು, ಚಾಲನೆಯಲ್ಲಿದೆ.

ಡಿ. 27ರಂದು ಚಾಲನೆ
ವಂ| ಗುರು ಆಲ್ಫ್ರೆಡ್ ರೋಚ್‌ರವರು ಉಡುಪಿ ಪರಿಸರದವರಾದ್ದರಿಂದ, ಉಡುಪಿ ಧರ್ಮ ಪ್ರಾಂತದ ಮಟ್ಟದ ಪ್ರಕ್ರಿಯೆ ಡಿ. 27ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮಾವರ ಪವಿತ್ರ ಕುಟುಂಬ ದೇವಾಲಯದಲ್ಲಿ ನಡೆಯುವ ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಚಾಲನೆ ನೀಡಲಿದ್ದಾರೆ.

ಸೂಕ್ತ ಅಧ್ಯಯನ
ಸಂತ ಪದವಿ ಎಂಬುದು ದೀರ್ಫಾವಧಿ ಪ್ರಕ್ರಿಯೆಯಾಗಿದೆ. ಅದಕ್ಕೂ ಮುನ್ನ ಆ ಪ್ರಕ್ರಿಯೆಗೆ ಚಾಲನೆ ನೀಡುವ ಕೆಲಸ ನಡೆಯಲಿದೆ. ಸಮಿತಿ ಸದಸ್ಯರು ಸೂಕ್ತ ಅಧ್ಯಯನ ನಡೆಸಿದ ಬಳಿಕ ಸಂತ ಪದವಿ ನೀಡುವ ಬಗ್ಗೆ ತೀರ್ಮಾನವಾಗಲಿದೆ.
-ರೈ| ರೆ| ಡಾ| ಜೆರಾಲ್ಡ್
ಐಸಾಕ್‌ ಲೋಬೊ,
ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ

Advertisement

Udayavani is now on Telegram. Click here to join our channel and stay updated with the latest news.

Next