ಹೊಸದಿಲ್ಲಿ: ಅಮೆರಿಕದ ಪ್ರಮುಖ ಯುದ್ಧ ವಿಮಾನ ತಯಾರಿಕಾ ಕಂಪೆನಿ ಲಾಕ್‌ಹಿಡ್ ಮಾರ್ಟಿನ್ ಎಫ್-16 ಯುದ್ಧ ವಿಮಾನವನ್ನು ಭಾರತದಲ್ಲಿಯೇ ತಯಾರಿಸಲು ಮುಂದಾಗಿದೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಮೇಕ್ ಇನ್ ಇಂಡಿಯಾ’ಕ್ಕೆ ಹೆಚ್ಚಿನ ಒತ್ತು ದೊರೆತಂತಾಗುತ್ತದೆ. ಇದರ ಜತೆಗೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುದ್ಧ ವಿಮಾನಗಳನ್ನು ತಯಾರಿಸುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಾಕ್‌ಹಿಡ್ ಮಾರ್ಟಿನ್ ಏರೋನಾಟಿಕ್ಸ್ ಜತೆಗೆ ಪಾಲುದಾರಿಕೆ ನಡೆಯುವ ಹೆಗ್ಗಳಿಕೆಯೂ ಸಿಕ್ಕಿದಂತಾಗುತ್ತದೆ.
ಈ ಬಗ್ಗೆ ಹೊಸದಿಲ್ಲಿಯಲ್ಲಿ ಮಾತನಾಡಿದ ಕಂಪೆನಿಯ ವ್ಯವಹಾರ ಅಭಿವೃದ್ಧಿ ಮತ್ತು ವ್ಯೂಹಾತ್ಮಕ ವಿಭಾಗದ ಉಪಾಧ್ಯಕ್ಷ ವಿವೇಕ್ ಲಾಲ್ “ಭಾರತಕ್ಕೆ ಅಗತ್ಯವಾಗಿರುವ ಯುದ್ಧ ವಿಮಾನ ತಯಾರಿಕೆಯಲ್ಲಿ ಉಂಟಾಗುವ ಯಶಸ್ಸು ದೇಶದ ಉದ್ಯಮ ಕ್ಷೇತ್ರಕ್ಕೆ ವಿಶೇಷವಾಗಿ ಉತ್ಪಾದನಾ ಕ್ಷೇತ್ರಕ್ಕೆ ಬಲ ಬರಲಿದೆ ಮತ್ತು ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ’ ಎಂದು ಹೇಳಿದ್ದಾರೆ.
ಭಾರತಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗುವ ಯುದ್ಧ ವಿಮಾನ ತಾಂತ್ರಿಕವಾಗಿ ಅತ್ಯುತ್ಕೃಷ್ಟವಾಗಿ ರಲಿದೆ. ಎಫ್-16ರ ಸರಣಿಯಲ್ಲಿರುವ ಮೂರು ಮಾದರಿಯ ಯುದ್ಧ ವಿಮಾನಗಳು ಒಂದೇ ಎಂಜಿನ್‌ನದ್ದಾಗಿರಲಿವೆ ಎಂದಿದ್ದಾರೆ. ದೇಶದಲ್ಲಿ ವಿಮಾನ ಜೋಡಣಾ ಘಟಕಕ್ಕಿಂತ ಉತ್ಪಾದನೆ ಮಾಡುವ ಕ್ಷೇತ್ರದತ್ತಲೇ ಹೆಚ್ಚಿನ ಗಮನ ನೀಡಲು ಬಯಸಿದ್ದೇವೆ ಎಂದು ಹೇಳಿದ್ದಾರೆ.
ಸದ್ಯ ದೇಶದಲ್ಲಿ ಬಳಕೆಯಾಗುವ ವಿಮಾನದ ತಾಂತ್ರಿಕ ವ್ಯವಸ್ಥೆಗಳು ಕಂಪೆನಿಯ ಎಫ್-22 ಮತ್ತು ಎಫ್-35 ವಿಮಾನಗಳಿಂದ ಪಡೆದುಕೊಂಡದ್ದೇ ಆಗಿವೆ ಎಂದು ವಿವೇಕ್ ಲಾಲ್ ಹೇಳಿದ್ದಾರೆ. ಎಫ್-16, ಎಫ್-22 ಮತ್ತು ಎಫ್-35 ಯುದ್ಧ ವಿಮಾನಗಳು ಬದಲಾದ ಕಾಲಕ್ಕೆ ತಕ್ಕಂತೆ ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಕೆಯಾಗಿವೆ. ಅವುಗಳ ಉತ್ಪಾದನೆಯು ಭಾರತದ ಮಧ್ಯಮ, ಮೈಕ್ರೋ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಹೆಚ್ಚಿನ ನೆರವಾಗಲಿದೆ ಎಂದು ಲಾಲ್ ಹೇಳಿದ್ದಾರೆ.
ಆಸ್ಯಾ ರಾಡರ್ ಅನ್ನು ಕಂಪೆನಿ ಸತತ ಎರಡು ದಶಕಗಳ ಕಾಲ ಸಂಶೋಧನೆಯ ಫಲವಾಗಿ ಅಭಿವೃದ್ಧಿಪಡಿಸಿದೆ. ಸದ್ಯ ಅದು ಬಳಕೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ ಅತ್ಯಾಧುನಿಕ ಕಾಕ್‌ಪಿಟ್, ಹೆಚ್ಚು ಸಮಯದ ಕಾಲ ಬರುವ ಇಂಧನ ಟ್ಯಾಂಕ್, ಹೆಚ್ಚು ಬಾಳಿಕೆ ಬರುವ ವಿಮಾನದ ಎಂಜಿನ್ ವಿಮಾನಗಳಲ್ಲಿ ಇರಲಿದೆ ಎಂದು ಹೇಳಿದ್ದಾರೆ.
ಯಾರಿದು ವಿವೇಕ್ ಲಾಲ್?
ಭಾರತೀಯ ಅಮೆರಿಕನ್ ಆಗಿರುವ ಅವರು ಜನರಲ್ ಅಟೋಮಿಕ್ಸ್‌ನಿಂದ ಅತ್ಯಾಧುನಿಕ ಡ್ರೋಣ್ ಖರೀದಿ ಬಗ್ಗೆ ಭಾರಿ ಪ್ರಯತ್ನ ನಡೆಸಿದ್ದರು.