ಬೆರಳಿಗೂ ಕಣ್ಣಿವೆ ಎಂದರೆ ನಿಮಗೆ ಅಚ್ಚರಿಯಾಗುವುದು ಸಹಜ. ಆದರೆ ಅದನ್ನು ಉಪಯೋಗಿಸಲು ತಿಳಿದಿರಬೇಕು. ಈ ವಿಚಾರ ಜಾದೂಗಾರರಿಗೆ ಮಾತ್ರವೇ ಗೊತ್ತಿರುವುದು. ಈ ಮಾತನ್ನು ನಿಮ್ಮ ಸ್ನೇಹಿತರ ಬಳಿ ಹೇಳಿ ನೋಡಿ. ಅವರು ನಗಬಹುದು. ನಂತರ ಅದನ್ನು ಜಾದೂ ಮೂಲಕ ಸಾಬೀತುಪಡಿಸಿ. ಮೊದಲಿಗೆ ಸ್ನೇಹಿತರಿಂದ ಹಲವು ನಾಣ್ಯಗಳನ್ನು ತೆಗೆದುಕೊಳ್ಳಿ. ಅನಂತರ ಯಾವುದಾದರೂ ಒಂದು ನಾಣ್ಯವನ್ನು ಮಾರ್ಕರ್‌ನಿಂದ ಗುರುತು ಮಾಡಲು ಹೇಳಿ. ಅವರು ಗುರುತು ಮಾಡಿದ ನಂತರ ಅದನ್ನು ಒಂದು ಟೋಪಿಯಲ್ಲಿ ಹಾಕಿ. ಉಳಿದ ನಾಣ್ಯಗಳನ್ನೂ ಆ ಟೋಪಿಯಲ್ಲಿ ಹಾಕಿ. ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕೈಯನ್ನು ಟೋಪಿಯೊಳಗೆ ಹಾಕಿ ಮಾರ್ಕರ್‌ನಿಂದ ಗುರುತು ಮಾಡಲ್ಪಟ್ಟಿರುವ ನಾಣ್ಯವನ್ನು ಹೊರ ತೆಗೆದು ತೋರಿಸಿ. ದಂಗಾಗುವ ಸರದಿ ಸ್ನೇಹಿತರದಾಗುತ್ತದೆ. “ಹೇಗೆ ಮಾಡಿದೆ?’ ಎಂದು ಕೇಳಿದರೆ, “ಮುಂಚೆಯೇ ಹೇಳಿದ್ದೆನಲ್ಲ…? ನನ್ನ ಬೆರಳಿನಲ್ಲೂ ಕಣ್ಣಿದೆ ಎಂದು. ಈಗಲಾದರೂ ನಂಬಿಕೆ ಬಂತಾ?’ ಎನ್ನಿರಿ.
ರಹಸ್ಯ:
ನಿಮ್ಮ ಹೆಬ್ಬೆರಳಿನ ಉಗುರಿಗೆ ಸ್ವಲ್ಪ ಜೇನುಮೇಣವನ್ನು ಮೆತ್ತಿರಿ. ನಿಮ್ಮ ಸ್ನೇಹಿತರು ಗುರುತು ಮಾಡಿಕೊಟ್ಟ ನಾಣ್ಯವನ್ನು ಟೋಪಿಯಲ್ಲಿ ಹಾಕುವ ಮೊದಲು ಆ ನಾಣ್ಯದ ಒಂದು ಬದಿಗೆ ಜೇನುಮೇಣವನ್ನು ಮೆತ್ತಿರಿ. ನಂತರ ಉಳಿದ ನಾಣ್ಯಗಳನ್ನು ಟೋಪಿಯಲ್ಲಿ ಹಾಕಿರಿ. ಮುಂದೆ ನೀವು ಸ್ನೇಹಿತ ಮಾರ್ಕ್ ಮಾಡಿದ ನಾಣ್ಯ ತೆಗೆಯುತ್ತೇನೆ ಎಂದು ಹೇಳಿ ಮಂತ್ರ ಹೇಳಿ ಟೋಪಿ ಒಳಗೆ ಕೈ ಹಾಕಿ ಮೇಣ ಇರುವ ನಾಣ್ಯವನ್ನು ಹೊರ ತೆಗೆಯಿರಿ. ನಂತರ ನಾಣ್ಯವನ್ನು ಸ್ನೇಹಿತರಿಗೆ ಪರೀಕ್ಷೆ ಮಾಡಲು ಕೊಡುವಾಗ ಮೇಣವನ್ನು ಅವರಿಗೆ ತಿಳಿಯದ ಹಾಗೆ ಒರೆಸಿ ಕೊಡಿ.
ಉದಯ್ ಜಾದೂಗಾರ್