Advertisement

ಜಿಲ್ಲಾಸ್ಪತ್ರೆಗಳಲ್ಲೂ ಕಣ್ಣುಗುಡ್ಡೆ ಬ್ಯಾಂಕ್‌ ಶುರು

10:06 AM Jan 24, 2020 | Lakshmi GovindaRaj |

ಬೆಂಗಳೂರು: ನೇತ್ರದಾನದ ಉತ್ತೇಜನ ಮತ್ತು ಕಣ್ಣು ನೀಡಲು ಇಚ್ಛಿಸುವವರಿಗೆ ಅನುಕೂಲವಾಗುವ ದೃಷ್ಟಿ ಯಿಂದ ಎಲ್ಲಾ ಜಿಲ್ಲೆಗಳಲ್ಲೂ ಕಣ್ಣುಗುಡ್ಡೆಗಳ(ಐ ಬಾಲ್‌) ಸಂಗ್ರಹ ಕೇಂದ್ರ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ನೇತ್ರ ಸಂಗ್ರಹ ವೇಳೆ ಮೃತ ವ್ಯಕ್ತಿಯಿಂದ ಕಾರ್ನಿಯಾವನ್ನು ಮಾತ್ರ ಬೇರ್ಪಡಿಸಿ ಸಂಗ್ರಹಿ ಸುವ ವ್ಯವಸ್ಥೆ ಎಲ್ಲ ಕಡೆ ಲಭ್ಯವಿಲ್ಲ. ಇದನ್ನು ಮನಗಂಡಿರುವ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

Advertisement

ಮುಂದಿನ ತಿಂಗಳಿನಿಂದಲೇ (ಫೆಬ್ರವರಿ) ಜಿಲ್ಲಾಸ್ಪತ್ರೆಗಳಲ್ಲಿ ಈ ಕೇಂದ್ರಗಳು ಕಾರ್ಯಾ ರಂಭಿಸಲಿವೆ. ಈ ಮೂಲಕ ಇದುವರೆಗೂ ನೇತ್ರದಾನ ಸಾಧ್ಯವಾಗದ ಜಿಲ್ಲೆಗಳಲ್ಲಿಯೂ ನೇತ್ರದಾನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ. ಸದ್ಯ ತಂತ್ರಜ್ಞರ ಕೊರತೆ ಹಾಗೂ ಆಧುನಿಕ ಸೌಲಭ್ಯ ಇಲ್ಲದ ಕಾರಣ ಜಿಲ್ಲಾ ಮಟ್ಟದಲ್ಲಿ ನೇತ್ರ ಸಂಗ್ರಹ ವೇಳೆ ಮೃತ ವ್ಯಕ್ತಿಯಿಂದ ಕಾರ್ನಿಯಾವನ್ನು ಮಾತ್ರ ಬೇರ್ಪಡಿಸಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಣ್ಣಿನ ಗುಡ್ಡೆಯನ್ನು ಸಂಗ್ರಹಿಸಿ, ಕೃತಕ ಕಣ್ಣುಗಳನ್ನು ಹಾಕಲಾಗುತ್ತದೆ.

ಹೇಗೆ ಕಾರ್ಯನಿರ್ವಹಣೆ?: ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿರುವ 2-3 ಪ್ಯಾರಾಮೆಡಿಕಲ್‌ ಸಿಬ್ಬಂದಿಗೆ ನೇತ್ರ ಸಂಗ್ರಹದ ತರಬೇತಿ ನೀಡಲಾಗುತ್ತಿದೆ. ಇವರ ಸಹಾಯಕ್ಕೆ ಜಿಲ್ಲಾ ನೇತ್ರಾಧಿಕಾರಿಗಳು ಇರುತ್ತಾರೆ. ಸಿಬ್ಬಂದಿಗೆ ಸಂಗ್ರಹ ಸಲಕರಣೆಗಳನ್ನು ಒಳಗೊಂಡ ಕಿಟ್‌ ನೀಡಲಾಗಿರುತ್ತದೆ. ದಾನಿಗಳ ಕಡೆಯವರಿಂದ ಕರೆಬಂದರೆ ಕೂಡಲೇ ಸ್ಥಳಕ್ಕೆ ತೆರಳಿ ಕಣ್ಣಿನ ಗುಡ್ಡೆಯನ್ನು (ಐ ಬಾಲ್‌) ತೆಗೆದು, ಅಲ್ಲಿಗೆ ಕೃತಕ ಕಣ್ಣುಗಳನ್ನು ಹಾಕಲಾಗುತ್ತದೆ. ಬಳಿಕ ಸಂಗ್ರಹಿಸಿದ ಕಣ್ಣನ್ನು ಸಮೀಪದ ಖಾಸಗಿ ಅಥವಾ ಸರ್ಕಾರಿ ನೇತ್ರಬ್ಯಾಂಕ್‌ಗೆ ತಲುಪಿಸಲಾಗುತ್ತದೆ.

ಜಿಲ್ಲಾ ಕೇಂದ್ರಗಳಲ್ಲಿ ನೇತ್ರ ಬ್ಯಾಂಕ್‌ ಇರದಿದ್ದರೆ ಸಮೀಪದ ಜಿಲ್ಲೆಯ ನೇತ್ರಬ್ಯಾಂಕ್‌ಗೆ ಸ್ಥಳಾಂತರಿಸಲಾಗುತ್ತದೆ. ಸ್ಥಳಾಂತರ ಅವಧಿಯಲ್ಲಿ ಸಂಗ್ರಹಿಸಿದ ಕಣ್ಣಿಗೆ ಒಂದು ರೀತಿಯ ಸೊಲ್ಯೂಶನ್‌ (ದ್ರಾವಣ) ಸಿಂಪಡಿಸುವುದರಿಂದ ಕನಿಷ್ಠ 12 ಗಂಟೆವರೆಗೂ ಕಣ್ಣನ್ನು ರಕ್ಷಿಸಬಹುದು. ಬ್ಯಾಂಕ್‌ನಲ್ಲಿ ಸಂಗ್ರಹಿಸುವ ಕಣ್ಣುಗಳನ್ನು ಸಂಶೋಧನೆ, ಕಾರ್ನಿಯಾ ಕಸಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ವಾರ್ಷಿಕ 10 ಸಾವಿರ ನೇತ್ರ ಸಂಗ್ರಹ ಗುರಿ: ಸದ್ಯ ಕೇಂದ್ರ ಸರ್ಕಾರವು ವಾರ್ಷಿಕ 5,600 ನೇತ್ರ ಸಂಗ್ರಹಕ್ಕೆ ರಾಜ್ಯ ಆರೋಗ್ಯ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗಕ್ಕೆ ಗುರಿ ನೀಡಿದೆ. ರಾಜ್ಯದಲ್ಲಿ ಏಳು ಕಡೆ ಮಾತ್ರ ನೇತ್ರ ಬ್ಯಾಂಕ್‌ಗಳಿರುವುದರಿಂದ ಉಳಿದ ಕಡೆ ಸಂಗ್ರಹ ಕೇಂದ್ರಗಳ ಸೌಲಭ್ಯವಿಲ್ಲದೇ ಗುರಿ ಮುಟ್ಟುವುದು ಕಷ್ಟವಾಗುತ್ತಿತ್ತು. ಸದ್ಯ ಎಲ್ಲಾ ಜಿಲ್ಲೆಗಳಲ್ಲಿಯೂ ನೇತ್ರ ಸಂಗ್ರಹ ಕೇಂದ್ರ ಆರಂಭಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಾರ್ಷಿಕ 10 ಸಾವಿರ ಕಣ್ಣುಗಳನ್ನು ಸಂಗ್ರಹಿಸುವ ಗುರಿಯನ್ನು ಇಲಾಖೆ ಹೊಂದಿದೆ.

Advertisement

ದಾನಿಗಳಿಗೆ ಕಾಯುತ್ತಿರುವ 1.25 ಲಕ್ಷ ಮಂದಿ: ದೇಶದಲ್ಲಿರುವ ವಾರ್ಷಿಕ 20 ಸಾವಿರ ಮಂದಿ ಕಾರ್ನಿಯಾ ಅಂಧತ್ವಕ್ಕೀಡಾಗುತ್ತಿದ್ದಾರೆ. ಈ ಪೈಕಿ 1.25 ಲಕ್ಷ ಮಂದಿಗೆ ಕಾರ್ನಿಯಾ ಕಸಿಯಿಂದ ದೃಷ್ಟಿ ಮರಳುವ ಸಾಧ್ಯತೆಗಳಿದ್ದು, ಇವರುಗಳು ದಾನಿಗಳಿಗೆ ಕಾಯುತ್ತಿದ್ದಾರೆ. ವ್ಯಕ್ತಿ ಮರಣಾನಂತರವೇ ಕಣ್ಣುಗಳ ದಾನಕ್ಕೆ ಅವಕಾಶವಿದ್ದು, ಮೃತರ ಸಂಬಂಧಿಕರು 104- ಆರೋಗ್ಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಆರೋಗ್ಯವಾಣಿ ಸಿಬ್ಬಂದಿ ಜಿಲ್ಲಾಸ್ಪತ್ರೆಗಳ ನೇತ್ರ ಸಂಗ್ರಹ ಕೇಂದ್ರಕ್ಕೆ ಮಾಹಿತಿ ನೀಡಿ ಕೂಡಲೇ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸುತ್ತಾರೆ.

ದಾನಕ್ಕೆ ಇಚ್ಛೆ ಇದ್ದರೂ ಅವಕಾಶವಿಲ್ಲ: ರಾಜ್ಯದ ಬೀದರ್‌, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕಲಬುರಗಿ, ಕೊಪ್ಪಳ, ಯಾದಗಿರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಅನೇಕರು ಮರಣಾನಂತರ ನೇತ್ರದಾನ ಮಾಡಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಇದಕ್ಕಾಗಿ ಸಂಘ ಸಂಸ್ಥೆಗಳ ಅಭಿಯಾನದಲ್ಲಿ ನೋಂದಣಿ ಯನ್ನು ಮಾಡಿರುತ್ತಾರೆ. ಆದರೆ, ಈ ಜಿಲ್ಲೆಗಳಲ್ಲಿ ನೇತ್ರ ಸಂಗ್ರಹ ಕೇಂದ್ರ ಸೌಲಭ್ಯವಿಲ್ಲದೇ ನೇತ್ರದಾನ ಸಾಧ್ಯವಾಗುತ್ತಿಲ್ಲ.

ಬೆಂಗಳೂರಿನಲ್ಲೇ ಹೆಚ್ಚು: ಸದ್ಯ ರಾಜ್ಯದಲ್ಲಿ ವಾರ್ಷಿಕ 5 ಸಾವಿರ ನೇತ್ರ ಸಂಗ್ರಹವಾಗುತ್ತಿದ್ದು, ಈ ಪೈಕಿ 4 ಸಾವಿರ ದಷ್ಟು ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಆಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿ ನಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರ ಸಂಗ್ರಹ ಕೇಂದ್ರವಿರುವುದಾಗಿದೆ.

ನೇತ್ರ ಸಂಗ್ರಹ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿಯೂ ಐ ಬಾಲ್‌ ಸಂಗ್ರಹ ಕೇಂದ್ರ ತೆರೆಯಲಾಗುತ್ತದೆ. ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಕಾರ್ಯಾರಂಭವಾಗಲಿದೆ.
-ಓಂ ಪ್ರಕಾಶ್‌ ಪಾಟೀಲ್‌, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next